Asianet Suvarna News Asianet Suvarna News

ವಯನಾಡು ದುರಂತಕ್ಕೆ ಎಚ್ಚೆತ್ತ ಕೇಂದ್ರ, ಕರ್ನಾಟಕ ಸೇರಿ 6 ರಾಜ್ಯದ ಪಶ್ಚಿಮಘಟ್ಟಗಳಲ್ಲಿ ಗಣಿಗಳ ನಿಷೇಧಕ್ಕೆ ಸಿದ್ಧತೆ

ಕರ್ನಾಟಕ ಸೇರಿದಂತೆ 6 ರಾಜ್ಯಗಳನ್ನು ಒಳಗೊಂಡ ಪಶ್ಚಿಮ ಘಟ್ಟದ 56800 ಚದರ ಕಿಲೋಮೀಟರ್‌ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವ ಹೊಸ ಕರಡು ವರದಿಯನ್ನು ಕೇಂದ್ರ ಸರ್ಕಾರ ಶುಕ್ರವಾರ ಪ್ರಕಟಿಸಿದೆ.

Centre issues fresh Ecologically Sensitive Area  draft for Western Ghats six states after Wayanad landslide gow
Author
First Published Aug 3, 2024, 11:34 AM IST | Last Updated Aug 3, 2024, 12:25 PM IST

ನವದೆಹಲಿ (ಜು.3): ಕರ್ನಾಟಕ ಸೇರಿದಂತೆ 6 ರಾಜ್ಯಗಳನ್ನು ಒಳಗೊಂಡ ಪಶ್ಚಿಮ ಘಟ್ಟದ 56800 ಚದರ ಕಿಲೋಮೀಟರ್‌ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವ ಹೊಸ ಕರಡು ವರದಿಯನ್ನು ಕೇಂದ್ರ ಸರ್ಕಾರ ಶುಕ್ರವಾರ ಪ್ರಕಟಿಸಿದೆ. ಇದರಲ್ಲಿ ಇತ್ತೀಚೆಗೆ ಭೂಕುಸಿತಕ್ಕೆ ತುತ್ತಾದ ಕೇರಳದ ವಯನಾಡು ಜಿಲ್ಲೆಯ 13 ಗ್ರಾಮಗಳು ಕೂಡಾ ಸೇರಿವೆ ಎಂಬುದು ವಿಶೇಷ.

ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಿದ ಪ್ರದೇಶಗಳಲ್ಲಿ ಗಣಿಗಾರಿಕೆ, ಕಲ್ಲುಗಣಿಗಾರಿಕೆ, ಮರಳು ಗಣಿಗಾರಿಕೆ ಮೇಲೆ ಸಂಪೂರ್ಣ ನಿಷೇಧ ಹೇರಬೇಕು ಎಂಬ ಅಂಶ ವರದಿಯಲ್ಲಿದೆ.ಈ ಕರಡು ವರದಿ ಕುರಿತು ಕೇಂದ್ರ ಸರ್ಕಾರ ಸಾರ್ವಜನಿಕರಿಂದ 60 ದಿನಗಳ ಒಳಗೆ ಸಲಹೆ, ಆಕ್ಷೇಪಗಳನ್ನು ಆಹ್ವಾನಿಸಿದೆ. ಈ ವರದಿ, ಹಿಂದಿನ ವರದಿಯ ವಿಸ್ತೃತ ರೂಪವಾಗಿದೆ. ಪ್ರದೇಶವಾರು ಯಾವುದೇ ಹೆಚ್ಚಿನ ಬದಲಾವಣೆ ಇಲ್ಲ. ಅಂತಿಮವಾಗಿ ಇದೇ ವರದಿಯೇ ಅಧಿಸೂಚನೆಯಾಗಿ ಪ್ರಕಟವಾಗಬಹುದು ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಯನಾಡು ದುರಂತದಲ್ಲಿ ನಲುಗಿದ ಕುಟುಂಬಕ್ಕೆ ರಾತ್ರಿ ಇಡೀ ಆಶ್ರಯ ನೀಡಿ ಕಾಪಾಡಿದ ಕಾಡಾನೆ!

2014ರ ಬಳಿಕ ಕೇಂದ್ರ ಸರ್ಕಾರ ಒಟ್ಟು 6 ಕರಡು ಅಧಿಸೂಚನೆ ಪ್ರಕಟಿಸಿದೆ. ಆದರೆ ವಿವಿಧ ರಾಜ್ಯಗಳ ವಿರೋಧದ ಕಾರಣ ಇನ್ನೂ ಅಂತಿಮ ಅಧಿಸೂಚನೆ ಹೊರಡಿಸುವುದು ಸಾಧ್ಯವಾಗಿಲ್ಲ.ಕೇರಳದಲ್ಲಿ ಭೂಕುಸಿತಕ್ಕೆ 300ಕ್ಕೂ ಹೆಚ್ಚು ಜನರು ಬಲಿಯಾದ ಹೊತ್ತಿನಲ್ಲೇ ಸರ್ಕಾರ ಈ ವರದಿ ಪ್ರಕಟಿಸಿದೆ. ಪರಿಸರ ಸೂಕ್ಷ್ಮ ವಲಯದಲ್ಲಿನ ಅರಣ್ಯ ನಾಶ, ಭಾರೀ ಗಣಿಗಾರಿಕೆ ಮತ್ತು ಹವಾಮಾನ ಬದಲಾವಣೆಯೇ ಘಟ್ಟ ಪ್ರದೇಶಗಳಲ್ಲಿ ದುರಂತಕ್ಕೆ ಕಾರಣ ಎಂದು ವಿಜ್ಞಾನಿಗಳ ಬಲವಾಗಿ ಹೇಳಿರುವುದನ್ನು ವರದಿ ಪ್ರಸ್ತಾಪಿಸಿದೆ.

ಯಾವ ರಾಜ್ಯಗಳ ಪಾಲು ಎಷ್ಟು?:
ವರದಿ ಅನ್ವಯ ಗುಜರಾತ್‌ನ 449 ಚದರ ಕಿ.ಮೀ., ಮಹಾರಾಷ್ಟ್ರದ 17340 ಚದರ ಕಿ.ಮೀ., ಗೋವಾದ 1461 ಚದರ ಕಿ.ಮೀ., ಕರ್ನಾಟಕದ 20668 ಚದರ ಕಿ.ಮೀ., ತಮಿಳುನಾಡಿನ 6914 ಚದರ ಕಿ.ಮೀ., ಕೇರಳದ 9993 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ವರದಿ ಹೇಳಿದೆ.

ವರದಿಯಲ್ಲೇನಿದೆ?:
ಕರಡು ವರದಿಯಲ್ಲಿ ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಿದ ಪ್ರದೇಶಗಳಲ್ಲಿ ಗಣಿಗಾರಿಕೆ, ಕಲ್ಲುಗಣಿಗಾರಿಕೆ, ಮರಳು ಗಣಿಗಾರಿಕೆ ಮೇಲೆ ಸಂಪೂರ್ಣ ನಿಷೇಧ ಹೇರಬೇಕು. ಹಾಲಿ ಇರುವ ಗಣಿಗಾರಿಕೆಯನ್ನು ಅಂತಿಮ ಅಧಿಸೂಚನೆ ಪ್ರಕಟದ 5 ವರ್ಷದೊಳಗೆ ಹಂತಹಂತವಾಗಿ ಮುಚ್ಚಬೇಕು. ಪರಿಸರಕ್ಕೆ ಮಾಲಿನ್ಯಕಾರಕವಾದ ಕೆಂಪು ವಿಭಾಗದಲ್ಲಿ ಬರುವ ಕೈಗಾರಿಕೆಗಳ ವಿಸ್ತರಣೆಗೆ ನಿಷೇಧ ಹೇರಬೇಕು. ಘೋಷಿತ ಪ್ರದೇಶಗಳಲ್ಲಿ ಹೊಸ ಉಷ್ಣ ವಿದ್ಯುತ್ ಸ್ಥಾವರಗಳ ಸ್ಥಾಪನೆಗೆ ಅವಕಾಶ ನೀಡಬಾರದು. ಒಂದು ವೇಳೆ ಹಾಲಿ ಉಷ್ಣ ಸ್ಥಾವರಗಳು ಕಾರ್ಯ ನಿರ್ವಹಿಸುತ್ತಿದ್ದರೆ ಅವುಗಳನ್ನು ಮುಂದುವರೆಸಬಹುದು. ಆದರೆ ಅವುಗಳ ವಿಸ್ತರಣೆಗೆ ಅವಕಾಶ ನೀಡಬಾರದು. ಈ ಪ್ರದೇಶಗಳಲ್ಲಿ ಈಗಾಗಲೇ ನಡೆಯುತ್ತಿರುವ ಕಟ್ಟಡಗಳ ದುರಸ್ತಿ ಕಾಮಗಾರಿ ಹೊರತುಪಡಿಸಿ, ದೊಡ್ಡ ಮಟ್ಟಿಗಿನ ನಿರ್ಮಾಣ ಕಾಮಗಾರಿ, ಟೌನ್‌ಶಿಪ್‌ ನಿರ್ಮಾಣ ಮಾಡುವುದಕ್ಕೆ ನಿರ್ಬಂಧ ವಿಧಿಸಬೇಕು ಎಂದು ವರದಿ ಹೇಳಿದೆ.

ಹಿಂದಿನ ಅಧ್ಯಯನಗಳು:
ಪಶ್ಚಿಮ ಘಟ್ಟಗಳ ಶ್ರೇಣಿಗಳ ಕುರಿತಾದ ಅಧ್ಯಯನಕ್ಕೆ ಕೇಂದ್ರ ಸರ್ಕಾರ 2010ರಲ್ಲಿ ಪರಿಸರ ತಜ್ಞ ಮಾಧವ್ ಗಾಡ್ಗೀಳ್‌ ಸಮಿತಿ ರಚಿಸಿತ್ತು. ಪಶ್ಚಿಮ ಘಟ್ಟಗಳ ಪರಿಸರ ತಜ್ಞ ಸಮಿತಿಯು, ಘಟ್ಟಪ್ರದೇಶದ ಮೇಲೆ ಜನಸಂಖ್ಯೆ ಒತ್ತಡ, ವಾತಾವರಣದಲ್ಲಿನ ಬದಲಾವಣೆ, ಪಶ್ಚಿಮ ಘಟ್ಟದಲ್ಲಿನ ಅಭಿವೃದ್ಧಿ ಚಟುವಟಿಕೆಗಳಿಂದಾಗುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಿತ್ತು.ಈ ಸಮಿತಿಯು, 2011ರಲ್ಲಿ ಇಡೀ ಬೆಟ್ಟ ಶ್ರೇಣಿಯನ್ನು ಮೂರು ವಿಭಾಗವನ್ನಾಗಿ ಮಾಡಿ, ‘ಪರಿಸರ ಸೂಕ್ಷ್ಮ ಪ್ರದೇಶ’ವೆಂದು ಘೋಷಿಸಬೇಕು. ಗಣಿಗಾರಿಕೆ, ಕ್ವಾರಿಗಳು, ಉಷ್ಣ ಸ್ಥಾವರಗಳು, ಜಲ ವಿದ್ಯುತ್ ಕಾಮಗಾರಿಗಳು, ದೊಡ್ಡ ಪ್ರಮಾಣದ ಪವನ ಶಕ್ತಿ ಕಾಮಗಾರಿಗಳ ಸ್ಥಾಪನೆಗೆ ನಿರ್ಬಂಧ ವಿಧಿಸಬೇಕೆಂದು ವರದಿಯನ್ನು ಸಲ್ಲಿಕೆ ಮಾಡಿತ್ತು. ಆದರೆ ಇದಕ್ಕೆ ಕರ್ನಾಟಕ, ಕೇರಳ ಸೇರಿ ಹಲವು ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯವಾಗಿ ವಿರೋಧ ವ್ಯಕ್ತವಾಗಿತ್ತು.ಈ ಹಿನ್ನೆಲೆಯಲ್ಲಿ 2013ರಲ್ಲಿ ಬಾಹ್ಯಾಕಾಶ ವಿಜ್ಞಾನಿ ಕೆ. ಕಸ್ತೂರಿ ರಂಗನ್ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಮತ್ತೊಂದು ಸಮಿತಿಯನ್ನ ರಚಿಸಿತ್ತು. ಈ ಸಮಿತಿಯು 59 ಸಾವಿರ ಚ.ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಘೋಷಿಸಬೇಕೆಂದು ವರದಿ ಸಲ್ಲಿಸಿತ್ತು.

Latest Videos
Follow Us:
Download App:
  • android
  • ios