ಬರವೇ ವರ: ಈ ಸಲ ಮಾವಿನ ಬಂಪರ್ ಫಸಲು?
ಪ್ರಸ್ತುತ ರಾಜ್ಯದೆಲ್ಲೆಡೆ ಬರದ ವಾತಾವರಣ ಇದ್ದು, ಚಳಿಯು ಉತ್ತಮವಾಗಿ ಇದೆ. ಇದು ಮಾವು ಫಸಲು ಹೆಚ್ಚಳಕ್ಕೆ ಅತ್ಯುತ್ತಮವಾಗಿದೆ. ಹೀಗಾಗಿ ಅವಧಿಗೂ ಮುನ್ನವೇ ಮಾವು ಮಾರುಕಟ್ಟೆ ಪ್ರವೇಶಿಸಲಿದ್ದು, ಏಪ್ರಿಲ್, ಮೇ ಬದಲು ಮಾರ್ಚ್‌ನಲ್ಲಿಯೇ ಗ್ರಾಹಕರ ಕೈ ಸೇರಲಿದೆ.
ಸಂಪತ್ ತರೀಕೆರೆ
ಬೆಂಗಳೂರು(ಜ.09): ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬರದಿಂದ ಆಹಾರ ಬೆಳೆಗಳನ್ನು ಬೆಳೆಯಲಾಗದೆ ಲಕ್ಷಾಂತರ ಹೆಕ್ಟೇರ್ ಕೃಷಿ ಭೂಮಿ ಬೆಳೆ ಹಾನಿಗೊಳಗಾಗಿದೆ. ಆದರೆ, ಬರ ಮತ್ತು ಚಳಿಯ ಪ್ರಮಾಣ ಹೆಚ್ಚಾಗಿರುವುದು ಮಾವಿಗೆ ವರದಾನವಾಗಿ ಪರಿಣಮಿಸಿದ್ದು, ಬೆಳೆಗಾರರು ಬಂಪರ್ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ.
ಈ ವರ್ಷ ಮಾವು ಏರು ಹಂಗಾಮು ಇರಲಿದ್ದು, ಬರೋಬ್ಬರಿ 16 ಲಕ್ಷ ಮೆಟ್ರಿಕ್ ಟನ್‌ಗೂ ಅಧಿಕ ಇಳುವರಿ ಬರಲಿದೆ ಎಂದು ಕರ್ನಾಟಕ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧಿಕಾರಿಗಳು ಮತ್ತು ತಜ್ಞರು ಅಂದಾಜಿಸಿದ್ದಾರೆ.
2023ರಲ್ಲಿ ಮಾವಿನ ಏರು ಹಂಗಾಮು ಇದ್ದರೂ ಅಕಾಲಿಕ ಮತ್ತು ಅತಿಯಾದ ಮಳೆಯಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಫಸಲು ಕೈಸೇರಿರಲಿಲ್ಲ. ಕೇವಲ 9.97 ಲಕ್ಷ ಮೆಟ್ರಿಕ್ ಟನ್ ಮಾವು ಇಳುವರಿ ಬಂದಿತ್ತು. ಆದರೆ, 12ರಿಂದ 14 ಲಕ್ಷ ಮೆಟ್ರಿಕ್ ಟನ್ ಮಾವು ಉತ್ಪಾದನೆ ನಿರೀಕ್ಷಿಸಲಾಗಿತ್ತು.
ಹಣ್ಣುಗಳ ರಾಜ ಮಾವು ಹೂ ಬಿಡುವ ಪ್ರಕ್ರಿಯೆ ಆರಂಭ- ಮಾವು ಸಸ್ಯ ಸಂರಕ್ಷಣಾ ಕ್ರಮ ಬಗ್ಗೆ ರೈತರಿಗೆ ಸಲಹೆ
ಪ್ರಸ್ತುತ ರಾಜ್ಯದೆಲ್ಲೆಡೆ ಬರದ ವಾತಾವರಣ ಇದ್ದು, ಚಳಿಯು ಉತ್ತಮವಾಗಿ ಇದೆ. ಇದು ಮಾವು ಫಸಲು ಹೆಚ್ಚಳಕ್ಕೆ ಅತ್ಯುತ್ತಮವಾಗಿದೆ. ಹೀಗಾಗಿ ಅವಧಿಗೂ ಮುನ್ನವೇ ಮಾವು ಮಾರುಕಟ್ಟೆ ಪ್ರವೇಶಿಸಲಿದ್ದು, ಏಪ್ರಿಲ್, ಮೇ ಬದಲು ಮಾರ್ಚ್‌ನಲ್ಲಿಯೇ ಗ್ರಾಹಕರ ಕೈ ಸೇರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಉತ್ತಮ ಫಸಲು ನಿರೀಕ್ಷೆ:
ಈಗಾಗಲೇ ರಾಮನಗರದಲ್ಲಿ ಶೇ.30ರಷ್ಟು ಮಾವು ಹೂ ಬಿಟ್ಟಿದ್ದು, ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಶೇ.10ಕ್ಕಿಂತ ಜಾಸ್ತಿ ಹೂವು ಬಿಡಲು ಆರಂಭಗೊಂಡಿದೆ. ಆದರೆ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ನಗರದಲ್ಲಿ ಮಾವು ಹೂ ಬಿಡಲು ಆರಂಭವಾಗಬೇಕಿದೆ. ಮಾವು ಹೆಚ್ಚು ಬೆಳೆಯುವ ಹಲವು ಜಿಲ್ಲೆಗಳಲ್ಲಿ ಮಾವಿನ ಹೂವು ಒಂದೇ ಬಾರಿಗೆ ಬಿಡುವ ಸಾಧ್ಯತೆ ಇದ್ದು, ಅತ್ಯುತ್ತಮ ಇಳುವರಿ ನಿರೀಕ್ಷಿಸಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಜೊತೆಗೆ ಹೂವಿನ ಪ್ರಮಾಣ ಹೆಚ್ಚಾಗುತ್ತಿರುವುದು ಮತ್ತು ಅಕಾಲಿಕ ಮಳೆ ಆಗುವುದಿಲ್ಲ ಎನ್ನುವ ಹವಾಮಾನ ಇಲಾಖೆಯ ವರದಿಯಿಂದ ಉತ್ತಮ ಫಸಲಿನ ನಿರೀಕ್ಷೆಯಲ್ಲಿರುವ ರೈತರು ಖುಷಿಯಲ್ಲಿದ್ದಾರೆ.
ಬೆಂಗಳೂರು: ಮಾವು ರಫ್ತಿನಲ್ಲಿ ದಾಖಲೆ ಬರೆದ ಕೆಂಪೇಗೌಡ ವಿಮಾನ ನಿಲ್ದಾಣ..!
1.48 ಲಕ್ಷ ಹೆಕ್ಟೇರ್‌ನಲ್ಲಿ ಮಾವು:
ರಾಜ್ಯದಲ್ಲಿ ಒಟ್ಟು 1.48 ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಏರು ಹಂಗಾಮಿನಲ್ಲಿ ಸರಾಸರಿ 12ರಿಂದ 14 ಲಕ್ಷ ಮೆಟ್ರಿಕ್ ಟನ್ ಮಾವು ಇಳುವರಿ ಸಿಗುತ್ತದೆ. ಇಳಿ ಹಂಗಾಮಿನಲ್ಲಿ 8ರಿಂದ 10 ಲಕ್ಷ ಮೆಟ್ರಿಕ್ ಟನ್ ಮಾವು ಉತ್ಪಾದನೆಯಾಗುತ್ತದೆ. ರಾಜ್ಯದಲ್ಲಿ ಮಾವು ಬೆಳೆದ ಒಟ್ಟು 1,48,546 ಹೆಕ್ಟೇರ್ ಪೈಕಿ ರಾಮನಗರದಲ್ಲಿ 27,722, ತುಮಕೂರು 16,616, ಕೋಲಾರ 45,568, ಬೆಳಗಾವಿ 2908, ಚಿಕ್ಕಬಳ್ಳಾಪುರ 9881, ಬೀದರ್ 1470, ಧಾರವಾಡ 8576, ಮೈಸೂರು 3494, ಶಿವಮೊಗ್ಗ 2775, ದಾವಣಗೆರೆ 1163, ಚಿಕ್ಕಮಗಳೂರು 1619, ಚಿತ್ರದುರ್ಗ 1771, ಹಾವೇರಿ 5010, ಮಂಡ್ಯ 1806 ಸೇರಿದಂತೆ ಒಟ್ಟು 1.48,546 ಹೆಕ್ಟೇರ್‌ನಲ್ಲಿ ಮಾವು ಬೆಳೆಯಲಾಗಿದೆ.
ಬರಗಾಲ ಮಾವು ಬೆಳೆಗೆ ಪೂರಕವಾಗಿದೆ. ಹೀಗಾಗಿ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಮಾವಿನ ಇಳುವರಿ ನಿರೀಕ್ಷಿಸಲಾಗಿದೆ. ಇತ್ತೀಚೆಗೆ ನಡೆದ ತಜ್ಞರ ಸಮಿತಿಯ ಸಭೆಯಲ್ಲೂ ಇದೇ ಅಭಿಪ್ರಾಯ ವ್ಯಕ್ತವಾಗಿದೆ. ಮಳೆ ಬಾರದೆ, ಮೋಡ ಕವಿಯದೆ ಇದ್ದರೆ ರೈತರ ನಿರೀಕ್ಷೆಯಂತೆ ಉತ್ತಮ ಫಸಲು ಬರುತ್ತದೆ. ಉಷ್ಣಾಂಶ ಹೆಚ್ಚಿದಂತೆ ಮಿಡಿಗಳು ಕಟ್ಟಲು ಆರಂಭವಾಗುತ್ತವೆ. ರೈತರು ಮಾವು ನಿಗಮದಿಂದ ಸಲಹೆ, ಸೂಚನೆ ಪಡೆದು ಅಗತ್ಯ ಪ್ರಮಾಣದಲ್ಲಿ ಔಷಧ ಸಿಂಪಡಿಸಬೇಕು. ಮರಗಳ ಆರೈಕೆ ಮಾಡಿದರೆ ಉತ್ತಮ ಇಳುವರಿ ಪಡೆಯಬಹುದು ಎಂದು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ನಾಗರಾಜ್ ತಿಳಿಸಿದ್ದಾರೆ.