Asianet Suvarna News Asianet Suvarna News

ಮಾಲಿಕರಿಂದಲೇ ಅಕ್ರಮ ವಲಸಿಗರಿಗೆ ಗೇಟ್‌ಪಾಸ್‌!, ಜೋಪಡಿಗಳು ತೆರವು, ಊರು ಖಾಲಿ!

ಮಾಲಿಕರಿಂದಲೇ ಅಕ್ರಮ ವಲಸಿಗರಿಗೆ ಗೇಟ್‌ಪಾಸ್‌| ಬೆಂಗಳೂರಿನ ಹೊರವಲಯದಲ್ಲಿ ಜೋಪಡಿ ಹಾಕಿಕೊಂಡಿದ್ದ ವಲಸಿಗರು| ನೂರಕ್ಕೂ ಹೆಚ್ಚು ಜೋಪಡಿಗಳು ತೆರವು, ಊರು ಖಾಲಿಮಾಡಿದ ವಲಸಿಗರು

Bangla Illegal Immigrants In Bengaluru Land Owners Sent Out The Immigrants After The Sting Operation
Author
Bangalore, First Published Jan 19, 2020, 7:35 AM IST

ಬೆಂಗಳೂರು[ಜ.19]: ಬೆಂಗಳೂರಿನ ಹೊರವಲಯದಲ್ಲಿ ಅಕ್ರಮವಾಗಿ ಬಾಂಗ್ಲಾದೇಶದ ನುಸುಳುಕೋರರು ವಾಸಿಸುತ್ತಿದ್ದಾರೆ ಎಂಬ ಬಗ್ಗೆ ‘ಕನ್ನಡಪ್ರಭ’ ಮತ್ತು ‘ಸುವರ್ಣ ಸುದ್ದಿವಾಹಿನಿ’ಯಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಬಾಂಗ್ಲಾದೇಶದ ಜನರು ಕುಟುಂಬ ಸಹಿತ ಊರು ಬಿಡಲು ಮುಂದಾಗಿದ್ದಾರೆ. ಇನ್ನು ಕೆಲವು ಕಡೆ ಉಳಿದುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದ ಮಾಲಿಕರೇ ಜೋಪಡಿ ಖಾಲಿ ಮಾಡಿಸತೊಡಗಿದ್ದಾರೆ.

ಬೆಂಗಳೂರಿನ ಹೊರವಲಯದ ಕಾಡುಬೀಸನಹಳ್ಳಿ, ದೇವರ ಬೀಸನಹಳ್ಳಿ, ಬೆಳ್ಳಂದೂರು, ವರ್ತೂರು ಭಾಗದ ಕೆಲವು ಜೋಪಡಿಗಳಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲನ್ನರು ಅಲ್ಲಿಂದ ಕಾಲುಕೀಳುತ್ತಿದ್ದಾರೆ.

ನೂರಕ್ಕೂ ಹೆಚ್ಚು ಮನೆ ತೆರವು:

ಬಾಂಗ್ಲಾದೇಶಿಗರು ಅಕ್ರಮವಾಗಿ ಇಲ್ಲಿನ ಖಾಲಿ ಜಾಗಗಳಲ್ಲಿ ಮೊದಲಿಗೆ ಜೋಪಡಿ ಹಾಕಿಕೊಂಡಿದ್ದರು. ಹೀಗೇ ಅದು ಮುಂದುವರೆದು ಸುಮಾರು ಐದು ಎಕರೆಯಲ್ಲಿ ಸಾವಿರಾರು ಮಂದಿ ಆಶ್ರಯ ಕಂಡುಕೊಂಡಿದ್ದಾರೆ. ನುಸುಳಕೋರರು ತಾವೇ ಸ್ವತಃ ಜಮೀನು ಮಾಲಿಕರಿಗೆ ತಿಂಗಳಿಗೆ ಇಂತಿಷ್ಟುಎಂದು ಬಾಡಿಗೆ ನೀಡುತ್ತಾರೆ. ಖಾಲಿ ಜಾಗದಲ್ಲಿ ಸುಲಭವಾಗಿ ಆದಾಯ ಬರುತ್ತಿದ್ದ ಕಾರಣ ಜಮೀನು ಮಾಲಿಕರು ಪ್ರಶ್ನೆ ಮಾಡುತ್ತಿರಲಿಲ್ಲ.

ವರ್ಷಕ್ಕೊಮ್ಮೆ 10 ಲಕ್ಷ ರು. ಪಾವತಿ, ಅಕ್ರಮ ಬಾಂಗ್ಲನ್ನರಿಗೆ ಪೊಲೀಸರ ಶ್ರೀರಕ್ಷೆ!

ಕಳೆದ ಮೂರು ತಿಂಗಳಿಂದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಗೆ ವಲಸಿಗರು ಹೆದರಿ ಹೋಗಿದ್ದಾರೆ. ರಾಜ್ಯದ ವಿವಿಧೆಡೆ ಅಕ್ರಮ ಬಾಂಗ್ಲಾದೇಶದ ಜನರು ಇರುವ ಬಗ್ಗೆ ‘ಕನ್ನಡಪ್ರಭ’ ಸರಣಿ ವರದಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಮಾಲಿಕರು ತಮಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ತಾವೇ ಜೆಸಿಬಿಗಳನ್ನು ಕರೆಸಿ ಕಾಡುಬೀಸನಹಳ್ಳಿಯಲ್ಲಿ ಅಕ್ರಮ ವಾಸಿಗಳು ನೆಲೆಸಿದ್ದ ನೂರಕ್ಕೂ ಹೆಚ್ಚು ಜೋಪಡಿಗಳನ್ನು ತೆರವುಗೊಳಿಸಿದ್ದಾರೆ. ಕೆಲ ವಲಸಿಗರು ತಾವೇ ಸ್ವ ಇಚ್ಛೆಯಿಂದ ಆಟೋಗಳನ್ನು ಕರೆಸಿಕೊಂಡು ಜೋಪಡಿಗಳನ್ನು ಖಾಲಿ ಮಾಡುತ್ತಿದ್ದಾರೆ.

ನಾವು ಅಸ್ಸಾಂ ನಿವಾಸಿಗಳು:

ಈ ನಡುವೆ ಏಕಾಏಕಿ ಜಮೀನು ಮಾಲಿಕರು ಜೋಪಡಿಗಳನ್ನು ತೆರವುಗೊಳಿಸಿದ ಹಿನ್ನೆಲೆಯಲ್ಲಿ ಕುಟುಂಬಗಳು ಮನೆಯ ಸಾಮಾನುಗಳನ್ನು ಹೊರಗೆ ಹಾಕಿ ಅಸಹಾಯಕರಂತೆ ನಿಂತಿದ್ದ ದೃಶ್ಯಗಳೂ ಕಂಡುಬಂದವು. ‘ನಾವು ಬಾಂಗ್ಲಾದೇಶದವರಲ್ಲ. ನಾವು ಅಸ್ಸಾಂನವರು. ಇಲ್ಲಿ ಅಕ್ರಮವಾಗಿ ಬಾಂಗ್ಲಾ ನುಸುಳುಕೋರರು ಇರಬಹುದು. ಆದರೆ ನಾವು ಭಾರತೀಯರು. ಅಂತಹವರನ್ನು ಪತ್ತೆಹಚ್ಚಿ ಕಳುಹಿಸಲಿ. ನಮಗೆ ತೊಂದರೆ ಕೊಡಬೇಡಿ ಎಂದು ಲೈಲಿ ಎಂಬ ಮಹಿಳೆ ‘ಕನ್ನಡಪ್ರಭ’ ಬಳಿ ಅಳಲು ತೋಡಿಕೊಂಡರು.

'ಬಾಂಗ್ಲಾ ವಲಸಿಗರ ಹೊರಗೆ ಹಾಕ್ತೀವಿ ಅನ್ನೋದು ಸರಿಯಲ್ಲ'

ಜೋಪಡಿಗಳಲ್ಲಿ ಕನ್ನಡಿಗರು:

ಇಲ್ಲಿ ಅಕ್ರಮವಾಗಿ ಶೆಡ್‌ ನಿರ್ಮಿಸಿರುವವರನ್ನು ತೆರವು ಮಾಡಿಸುವುದು ನಮ್ಮ ಕೆಲಸವಲ್ಲ. ಬಿಬಿಎಂಪಿ ಅಧಿಕಾರಿಗಳು ಅಕ್ರಮ ಶೆಡ್‌ಗಳನ್ನು ತೆರವು ಮಾಡಿಸಬೇಕಿದೆ. ಈಗಾಗಲೇ ಅಕ್ರಮವಾಗಿ ವಾಸವಿರುವ ಬಾಂಗ್ಲಾ ನುಸುಳುಕೋರರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಲಾಗಿದೆ. ಈ ಜೋಪಡಿಗಳಲ್ಲಿ ಕನ್ನಡಿಗರೂ ನೆಲೆಸಿದ್ದು, ಅವರನ್ನು ತೆರವುಗೊಳಿಸುವ ಕಾರ್ಯ ನಮ್ಮದಲ್ಲ. ಬಿಬಿಎಂಪಿ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದರು.

 

Follow Us:
Download App:
  • android
  • ios