Asianet Suvarna News Asianet Suvarna News

ಗೃಹ ಸಚಿವ ಆರಗ ಜ್ಞಾನೇಂದ್ರ ಮನೆಗೆ ಮುತ್ತಿಗೆ; 40 ಎಬಿವಿಪಿ ಕಾರ್ಯಕರ್ತರ ಬಂಧನ

ABVP demands ban on SDPI, PFI: ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ ಸದಸ್ಯರು ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಹಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ. ಪ್ರತಿಭಟನೆ ಉಗ್ರ ಸ್ವರೂಪ ಪಡೆದಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನಿವಾಸಕ್ಕೆ ಮುತ್ತಿಗೆ ಹಾಕಲಾಗಿದೆ.

ABVP gherao home minister araga jnanendra's residence in bengaluru demanind ban on SDPI PFI
Author
Bengaluru, First Published Jul 30, 2022, 10:31 AM IST

ಬೆಂಗಳೂರು: ಶಿವಮೊಗ್ಗದಲ್ಲಿ ಹತ್ಯೆಯಾದ ಹರ್ಷ, ಮಂಗಳೂರಿನಲ್ಲಿ ಕೊಲೆಯಾದ ಪ್ರವೀಣ್‌ ನೆಟ್ಟಾರು ಸೇರಿದಂತೆ ಇತ್ತೀಚೆಗೆ ಹಿಂದೂ ಯುವಕರ ನಡೆದ ಹತ್ಯೆಗಳ ಹಿಂದೆ ಎಸ್‌ಡಿಪಿಐ ಮತ್ತು ಪಿಎಫ್‌ಐ ಇದೆ ಎಂದು ಆರೋಪಿಸಿ ಎಬಿವಿಪಿ ಪ್ರತಿಭಟಿಸುತ್ತಿದೆ. ಬೆಂಗಳೂರಿನಲ್ಲಿ ಪ್ರತಿಭಟನೆ ಉಗ್ರ ಸ್ವರೂಪ ಪಡೆದಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಅಧಿಕೃತ ಸರ್ಕಾರಿ ನಿವಾಸದ ಮೇಲೆ ಮುತ್ತಿಗೆ ಹಾಕಲಾಗಿದೆ. ಮನೆಯ ಆವರಣದಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸ ಮಾಡಲಾಗಿದ್ದು ಹೆಚ್ಚುವರಿ ಪೊಲೀಸ್‌ ಬಂದೋಬಸ್ತ್‌ ಒದಗಿಸಲಾಗಿದೆ. ಹಿಂದೂ ಯುವಕರ ಹತ್ಯೆಯ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಂಡಿಲ್ಲ. ಪ್ರಕರಣಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತಿಲ್ಲ ಎಂದು ಎಬಿವಿಪಿ ಆರೋಪಿಸಿದೆ. ಜತೆಗೆ ಗೃಹ ಸಚಿವರು ಅಸಮರ್ಥರು ಎಂಬ ರೀತಿಯಲ್ಲಿ ಅವರ ಪಕ್ಷದ ಕಾರ್ಯಕರ್ತರೇ ಪ್ರತಿಭಟನೆಗೆ ಇಳಿದಿರುವುದು ಬಿಜೆಪಿಗೆ ಇರಿಸುಮುರುಸಾಗಿದೆ. ಬೆಂಗಳೂರಿನ ಜಯಮಹಲ್‌ನಲ್ಲಿರುವ ನಿವಾಸದ ಮೇಲೆ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಆದರೆ ಮೂಲಗಳ ಪ್ರಕಾರ ಜ್ಞಾನೇಂದ್ರ ತೀರ್ಥಳ್ಳಿಯಲ್ಲಿದ್ದಾರೆ. 

ಮಂಗಳೂರು ಬಿಜೆಪಿ ಯುವಮೋರ್ಚಾ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆಯ ನಂತರ ಬಿಜೆಪಿ ಕಾರ್ಯಕರ್ತರು ಪಕ್ಷದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಅಭಿಯಾನ ಕೂಡ ಆರಂಭಿಸಲಾಗಿದೆ. ಮುಖ್ಯವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ವಿರುದ್ಧ ಪ್ರತಿಭಟನೆ ಭುಗಿಲೆದ್ದಿದೆ. ಬಿಜೆಪಿ ಸರ್ಕಾರ ಕೈಲಾಗದವರು ಎಂದು ಮಂಗಳೂರಿನಲ್ಲಿ ಅಭಿಯಾನ ನಡೆಸಲಾಗುತ್ತಿದೆ. ಕೆಲ ತಿಂಗಳುಗಳ ಹಿಂದೆ ಶಿವಮೊಗ್ಗದಲ್ಲಿ ಹರ್ಷ ಎಂಬಾತನ ಕೊಲೆಯಾಗಿತ್ತು.

ಅದಾದ ನಂತರ ಎರಡು ಕೋಮುಗಳ ನಡುವಿನ ಘರ್ಷಣೆ ರಾಜ್ಯಾದ್ಯಂತ ಹೆಚ್ಚಿದೆ. ಪ್ರವೀಣ್‌ ನೆಟ್ಟಾರು ಹತ್ಯೆಯ ಎರಡು ದಿನಗಳ ನಂತರ, ಫಾಜಿಲ್‌ ಎಂಬ ಯುವಕನ ಹತ್ಯೆ ಮಂಗಳೂರಿನಲ್ಲಿ ನಡೆದಿದೆ. ಎರಡೂ ಸಮುದಾಯಗಳ ಮುಖಂಡರು ಇದೀಗ ಶಾಂತಿ ಸಭೆಗೆ ಮುಂದಾಗಿದ್ದರೂ, ಪರಿಸ್ಥಿತಿ ಹತೋಟಿಗೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ರಾಜಕೀಯ ಪ್ರೇರಿತ ಹತ್ಯೆಗಳು ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಹೆಚ್ಚುತ್ತಿದೆ.

ಇದನ್ನೂ ಓದಿ: Praveen Nettaru Murder Case: ಬಿಜೆಪಿಗೆ ಪರ್ಯಾಯ ಹಿಂದು ಪಕ್ಷ ಕಟ್ಟಬೇಕಾಗುತ್ತದೆ: ಮುತಾಲಿಕ್‌ ಎಚ್ಚರಿಕೆ

ಹತ್ಯೆ ಖಂಡಿಸಿ ರಾಜೀನಾಮೆ ನೀಡಿದ ಸಾವಿರಾರು ಸದಸ್ಯರು:

ಪ್ರವೀಣ್‌ ನೆಟ್ಟಾರು ಹತ್ಯೆ ಖಂಡಿಸಿ ರಾಜ್ಯಾದ್ಯಂತ ಸಾವಿರಾರು ಬಿಜೆಪಿ ಕಾರ್ಯಕರ್ತರು ರಾಜೀನಾಮೆ ನೀಡಿದ್ದಾರೆ. ಪದಾಧಿಕಾರಿಗಳು ಮತ್ತು ಸದಸ್ಯರು ಪಕ್ಷದ ಕಾರ್ಯನಿರ್ವಹಣೆಯನ್ನು ಖಂಡಿಸಿ ಅಭಿಯಾನ ಆರಂಭಿಸಿದ್ದರು. ಬಿಜೆಪಿ ಅಧಿಕಾರದಲ್ಲಿದ್ದರೂ ಹಿಂದೂ ಕಾರ್ಯಕರ್ತರು ಹತ್ಯೆಯಾಗುತ್ತಿದ್ದಾರೆ. ಇದು ಬಿಜೆಪಿ ಅಸಮರ್ಥತೆಯನ್ನು ತೋರಿಸುತ್ತದೆ ಎಂದು ಕಾರ್ಯಕರ್ತರು ಖಂಡಿಸಿದ್ದರು. ಮಂಗಳೂರಿನ ಬಿಜೆಪಿಯ ಎಲ್ಲಾ ಶಾಸಕರೂ ರಾಜೀನಾಮೆ ನೀಡುವಂತೆ ಒತ್ತಾಯ ಹೇರಿದ್ದರು. ರಾಜೀನಾಮೆ ನೀಡಿ ಚುನಾವಣೆಗೆ ಬನ್ನಿ ಚುನಾವಣೆಯಲ್ಲಿ ನಿಮ್ಮನ್ನು ಸೋಲಿಸುತ್ತೇವೆ ಎಂದು ಕಾರ್ಯಕರ್ತರು ಸಿಟ್ಟಿಗೆದ್ದಿದ್ದರು. 

ಶಾಂತಿ ಸಭೆ ಬಹಿಷ್ಕರಿಸಿದ ಮುಸಲ್ಮಾನ ಸಮುದಾಯ:

ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಬಳಿಯುವ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿಗಳು ಅಥವಾ ಜಿಲ್ಲಾಧಿಕಾರಿಗಳು ಪ್ರವೀಣ್‌ ಕುಟುಂಬಕ್ಕೆ ಘೋಷಿಸಿದಷ್ಟೇ ಪರಿಹಾರವನ್ನು ಫಾಜಿಲ್‌ ಕುಟುಂಬಕ್ಕೆ ಘೋಷಿಸಿದರೆ ಮಾತ್ರ ಶಾಂತಿ ಸಭೆಗೆ ಹಾಜರಾಗುವುದಾಗಿ ಸಮುದಾಯ ತಿಳಿಸಿದೆ. ಬಹಿರಂಗವಾಗಿ ಬಿಜೆಪಿ ಸರ್ಕಾರ ಮುಸಲ್ಮಾನ ಸಮುದಾಯದ ವಿರುದ್ಧ ನಿಂತಿದೆ. ಪ್ರವೀಣ್‌ಗೆ ಒಂದು ನ್ಯಾಯ, ಫಾಜಿಲ್‌ಗೆ ಒಂದು ನ್ಯಾಯ ಮಾಡುವುದನ್ನು ಮುಸಲ್ಮಾನ ಸಮುದಾಯ ಒಪ್ಪುವುದಿಲ್ಲ. ಪ್ರವೀಣ್‌ ಕುಟುಂಬಕ್ಕೆ ಘೋಷಿಸಿರುವ ಪರಿಹಾರ ಫಾಜಿಲ್‌ ಕುಟುಂಬಕ್ಕೂ ನೀಡಬೇಕು, ಅಲ್ಲಿಯವರೆಗೂ ಶಾಂತಿ ಸಭೆಯನ್ನು ಬಹಿಷ್ಕರಿಸುತ್ತೇವೆ ಎಂದು ಸಮುದಾಯ ನಿರ್ಧರಿಸಿದೆ ಎನ್ನಲಾಗಿದೆ. 

ಇದನ್ನೂ ಓದಿ: ನಳಿನ್‌ ಕುಮಾರ್‌ ಕಟೀಲ್‌ಗೆ ಆಪ್ತನಾಗಿದ್ದ ಪ್ರವೀಣ್‌: ಸಿದ್ದು ಆರೋಪ

ಒಟ್ಟಿನಲ್ಲಿ ಮಂಗಳೂರು ಸೇರಿದಂತೆ ರಾಜ್ಯದ ಹಲವು ಸೂಕ್ಷ್ಮ ಪ್ರದೇಶಗಳಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಕಾನೂನು ಮತ್ತು ಸುವ್ಯವಸ್ಥೆಗೆ ಕಡಿವಾಣ ಹಾಕುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೋಮು ಗಲಭೆಗಳಿಂದ ದೂರ ಉಳಿಯುತ್ತಿದ್ದ ಶಾಂತಿಯುತ ರಾಜ್ಯದಲ್ಲಿ ರಾಜಕೀಯ ಪ್ರೇರಿತ ಘಟನೆಗಳು ಹೆಚ್ಚುತ್ತಿವೆ.  

Follow Us:
Download App:
  • android
  • ios