ಬೆಂಗಳೂರು [ಜ.31]:  2019-20ನೇ ಸಾಲಿನ 7ನೇ ತರಗತಿ ವಿದ್ಯಾರ್ಥಿಗಳಿಗೆ ‘ಸಾಮಾನ್ಯ ಮೌಲ್ಯಾಂಕನ ಪರೀಕ್ಷೆ’ಯನ್ನು ಮಾರ್ಚ್ ಎರಡನೇ ವಾರದಲ್ಲಿ ನಡೆಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ 7ನೇ ತರಗತಿ ವಿದ್ಯಾರ್ಥಿಗಳಿಗೆ ‘ಸಾಮಾನ್ಯ ಮೌಲ್ಯಾಂಕನ ಪರೀಕ್ಷೆ’ಯನ್ನು ನಡೆಸಲಾಗುತ್ತಿದೆ. ಸ್ಟೂಡೆಂಟ್‌ ಅಚೀವ್‌ಮೆಂಟ್‌ ಟ್ರ್ಯಾಕಿಂಗ್‌ ಸಿಸ್ಟಂ (ಸ್ಯಾಟ್ಸ್‌) ನಲ್ಲಿ ನಮೂದಿಸಿರುವ ವಿದ್ಯಾರ್ಥಿಗಳ ಮಾಹಿತಿಗೆ ಅನುಗುಣವಾಗಿ ಮಾತ್ರ ಪರೀಕ್ಷೆ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟಶಾಲೆಯ ಮುಖ್ಯಶಿಕ್ಷಕರು ಹಾಗೂ ಎಲ್ಲಾ ಹಂತದ ಅಧಿಕಾರಿಗಳು ತುರ್ತು ಕ್ರಮ ಕೈಗೊಂಡು ಶಾಲೆಯ ಮಾಧ್ಯಮ, ಭಾಷಾ ಸಂಯೋಜನೆ, ವಿದ್ಯಾರ್ಥಿಗಳ ಸಂಪೂರ್ಣ ಮಾಹಿತಿ ಸೇರಿದಂತೆ ಇನ್ನಿತರ ವಿವರಗಳನ್ನು ಫೆ.5ರೊಳಗೆ ಕಡ್ಡಾಯವಾಗಿ ಅಪ್‌ಡೇಟ್‌ ಮಾಡಬೇಕು ಎಂದು ಸೂಚಿಸಲಾಗಿದೆ.

ಫೆ.5ರ ನಂತರ ಸ್ಯಾಟ್ಸ್‌ ತಂತ್ರಾಂಶದಲ್ಲಿ ಅಪ್‌ಡೇಟ್‌ ಮಾಡದ ಯಾವುದೇ ಮಾಹಿತಿಯನ್ನು ಪರಿಗಣಿಸುವುದಿಲ್ಲ. ಸ್ಯಾಟ್ಸ್‌ನಲ್ಲಿರುವ ಮಾಹಿತಿಯನ್ನು ಆಧರಿಸಿಯೇ ಪ್ರಶ್ನೋತ್ತರ ಪತ್ರಿಕೆಗಳನ್ನು ಮುದ್ರಿಸಿ ಸರಬರಾಜು ಮಾಡಲಾಗುವುದು. ಹೀಗಾಗಿ, ಅಧಿಕಾರಿಗಳು, ಶಾಲಾ ಮುಖ್ಯ ಶಿಕ್ಷಕರಿಗೆ ಸೂಕ್ತ ಮಾಹಿತಿ ನೀಡಿ ಮಾಹಿತಿ ಅಪ್‌ಡೇಟ್‌ ಮಾಡುವಂತೆ ಸೂಚಿಸಬೇಕು.

ವಿದ್ಯಾರ್ಥಿಗಳ ಸಂಖ್ಯೆ, ಮಾಧ್ಯಮ ಮತ್ತು ಭಾಷಾ ಸಂಯೋಜನೆಯಲ್ಲಿ ವ್ಯತ್ಯಾಸವಾಗಿ ಯಾವುದೇ ವಿದ್ಯಾರ್ಥಿಗಳಿಗೆ ಸಮಸ್ಯೆಯಾದಲ್ಲಿ ಅಧಿಕಾರಿಗಳು ಹಾಗೂ ಶಿಕ್ಷಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.