ಇಂದಿನಿಂದ 13,500 ಪದವೀಧರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪುನಾರಂಭ: ದೈಹಿಕ ಶಿಕ್ಷಕರ ನೇಮಕಾತಿ ಶೀಘ್ರ ಆರಂಭ
ರಾಜ್ಯದ ಸರ್ಕಾರಿ ಶಾಲೆಗಳ 6 ರಿಂದ 8 ನೇ ತರಗತಿವರೆಗಿನ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಪುನಾರಂಭಿಸಿದೆ.
ಬೆಂಗಳೂರು (ಅ.19): ಹೈಕೋರ್ಟ್ ಆದೇಶದಂತೆ ರಾಜ್ಯದ ಸರ್ಕಾರಿ ಶಾಲೆಗಳ 6 ರಿಂದ 8 ನೇ ತರಗತಿವರೆಗಿನ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಪುನಾರಂಭಿಸಿದೆ. ಕಳೆದ ಮಾರ್ಚ್‌ನ ಪ್ರಕಟಿಸಿದ್ದ 1:1 ಅನುಪಾತದ ಮುಖ್ಯ ಆಯ್ಕೆ ಪಟ್ಟಿಯಲ್ಲಿ ಕೌನ್ಸೆಲಿಂಗ್ ಗೆ ಅರ್ಹರಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಗುರುವಾರ (ಅ.19) ಪ್ರಕಟಿಸುವುದಾಗಿ ತಿಳಿಸಿದೆ.
ಇಲಾಖೆಯ ವೆಬ್ ಸೈಟ್ https://schooleducation.karnataka.gov.in ನಲ್ಲಿ ಅರ್ಹರ ಪಟ್ಟಿ ಪ್ರಕಟಿಸಲಾಗುವುದು. ಅಭ್ಯರ್ಥಿಗಳಿಗೆ ಅ.23 ರಂದು ಬೆಳಗ್ಗೆ 10.30 ರಿಂದ ಬೆಂಗಳೂರಿನ ಶಿಕ್ಷಕರ ಸದನದಲ್ಲಿ ಸ್ಥಳ ನಿಯುಕ್ತಿಗೆ ಕೌನ್ಸೆಲಿಂಗ್ ನಡೆಸಲಾಗುವುದು. ಸಂಬಂಧಿಸಿದ ದಾಖಲಾತಿಗಳೊಂದಿಗೆ ಅಭ್ಯರ್ಥಿಗಳು ಹಾಜರಾಗಬೇಕೆಂದು ಸೂಚಿಸಿದೆ. ಇದರೊಂದಿಗೆ ಕರ್ನಾಟಕ ಸಿಇಟಿ ಪರೀಕ್ಷೆ ಮೂಲಕ 15 ಸಾವಿರ ಪದವೀಧರ ಶಿಕ್ಷಕರ ಹುದ್ದೆಗಳಿಗೆ ಆಯ್ಕೆ ಪಟ್ಟಿ ಪ್ರಕಟಿಸಿ ಆರು ತಿಂಗಳು ಕಳೆದರೂ ಕೆಲ ಜಿಲ್ಲೆಗಳ ಅಭ್ಯರ್ಥಿಗಳ ಕಾನೂನು ಹೋರಾಟದಿಂದ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲು ಹಿಡಿದಿದ್ದ ಗ್ರಹಣ ಬಿಟ್ಟಂತಾಗಿದೆ.
ಕಲ್ಯಾಣ ಕರ್ನಾಟಕದಲ್ಲೇ 18,000 ಶಿಕ್ಷಕರ ಹುದ್ದೆ ಖಾಲಿ..!
ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ 371 ಜೆಗೆ ಸಂಬಂಧಿಸಿದ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಮತ್ತು ಬಿಬಿಎಂಪಿ ವ್ಯಾಪ್ತಿಯ ಶೇ.8 ರಷ್ಟು ಹುದ್ದೆಗಳಿಗೆ ಸಂಬಂಧಿಸಿದ ಬೆಂಗಳೂರು ದಕ್ಷಿಣ ಮತ್ತು ಉತ್ತರ ಜಿಲ್ಲೆಗಳ ಪ್ರಕರಣಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಿಗೆ ಶಿಕ್ಷಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಮುಂದುವರೆಸಲಾಗುವುದು ಎಂದು ಇಲಾಖೆ ತಿಳಿಸಿದೆ. ಈ ಪ್ರಕ್ರಿಯೆ ಪೂರ್ಣಗೊಂಡರೆ 15 ಸಾವಿರ ಶಿಕ್ಷಕ ಹುದ್ದೆಗೆ ಸರ್ಕಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆಯಾಗಿರುವ 13,500 ಕ್ಕೂ ಹೆಚ್ಚು ಶಿಕ್ಷಕರು ಈ ಶೈಕ್ಷಣಿಕ ಸಾಲಿನಲ್ಲೇ ಶಾಲೆಗಳಲ್ಲಿ ಬೋಧನಾ ಕಾರ್ಯಕ್ಕೆ ನಿಯೋಜನೆಗೊಳ್ಳಲಿದ್ದಾರೆ.
ದೈಹಿಕ ಶಿಕ್ಷಕರ ನೇಮಕಾತಿ ಮಾಡುವುದಾಗಿ ಶಿಕ್ಷಣ ಸಚಿವರ ಘೋಷಣೆ: ಈ ಕುರಿತು ಕಳೆದ ವಾರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ರಾಜ್ಯದಲ್ಲಿ 13,500 ಶಿಕ್ಷಕರ ನೇಮಕಾತಿಗೆ ಉಚ್ಚ ನ್ಯಾಯಾಲಯ ಹಸಿರು ನಿಶಾನೆ ತೋರಿಸಿದೆ. ಶೀಘ್ರದಲ್ಲಿಯೆ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಹೇಳಿದ್ದರು. ಈಗ 13500 ಶಿಕ್ಷಕರನ್ನು ಭರ್ತಿ ಮಾಡಿಕೊಂಡರೆ ಬಹುತೇಕ ಶಿಕ್ಷಕರ ಸಮಸ್ಯೆ ಬಗೆಹರಿಯಲಿದೆ. ಮುಂದಿನ ಹಂತದಲ್ಲಿ ದೈಹಿಕ ಶಿಕ್ಷಕರ ನೇಮಕಾತಿಗೆ ಗಮನಹರಿಸಲಾಗುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಎನ್ಇಪಿ ಬದಲು ಎಸ್ಇಪಿ ಜಾರಿಗೆ ತರಲು ತಜ್ಞರ ಸಮಿತಿ ರಚಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಗಿಂತ ರಾಜ್ಯ ಶಿಕ್ಷಣ ನೀತಿ ಅತ್ಯಂತ ಪರಿಣಾಮಕಾರಿಯಾಗಿ ರೂಪಿಸಲಾಗುತ್ತದೆ. ಮಕ್ಕಳಿಗೆ ಸ್ಥಳೀಯ ಸಂಸ್ಕೃತಿ, ಇತಿಹಾಸ ಕುರಿತು ಕಲಿಸುವ ಜೊತೆಗೆ ಅವರನ್ನು ರಾಷ್ಟ್ರೀಯ ಶಿಕ್ಷಣ ನೀತಿಗಿಂತ ಹೆಚ್ಚು ಬಲಿಷ್ಠವಾಗಿ ಸ್ಪರ್ಧಾತ್ಮಕ ಜಗತ್ತು ಎದುರಿಸಲು ಅಗತ್ಯ ಪಠ್ಯಗಳನ್ನು ಅಳವಡಿಸಲಾಗುತ್ತದೆ. ಹಾಗೆ, ನೋಡಿದರೆ ಬಿಜೆಪಿ ಸರ್ಕಾರ ಇರುವ ರಾಜ್ಯಗಳಲ್ಲಿಯೇ ಈತನಕ ಎನ್.ಇ.ಪಿ. ಜಾರಿಗೆ ತಂದಿಲ್ಲ ಎಂದರು.
ದಸರಾ ಆಯುಧ ಪೂಜೆಗೆ ಅರಿಶಿಣ, ಕುಂಕುಮ ಹಾಗೂ ರಂಗೋಲಿ ನಿಷೇಧಿಸಿದ ಸರ್ಕಾರ!
ಈಗಾಗಲೇ ಕೆಲವು ಕಡೆಗಳಲ್ಲಿ ಎನ್.ಇ.ಪಿ. ಅಡಿ ಮಕ್ಕಳು ಶಿಕ್ಷಣ ಮುಂದುವರಿಸುತ್ತಿದ್ದಾರೆ. ಅವರ ಶಿಕ್ಷಣಕ್ಕೆ ತೊಂದರೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ನ್ಯಾಯಾಲಯದಲ್ಲಿ ಈ ಸಂಬಂಧ ವಾದ ಮಂಡಿಸಲು ರಾಜ್ಯ ಸರ್ಕಾರ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಗ್ರಾಮೀಣ ಜನರು ವಾಸಿಸುವ ನೆಲದ ಹಕ್ಕು ಅವರಿಗೆ ಕೊಡಲು 94 ಸಿಸಿಯಡಿ ಹಕ್ಕುಪತ್ರ ವಿತರಿಸಲಾಗುತ್ತಿದೆ. ಕಂದಾಯ ಭೂಮಿ ಯಾವುದು, ಅರಣ್ಯಭೂಮಿ ಯಾವುದು ಎನ್ನುವ ಕುರಿತು ಸರ್ವೆ ನಡೆಸಲು ಸಹ ಸಂಬಂಧಪಟ್ಟ ಸಚಿವರ ಜೊತೆ ಚರ್ಚೆ ನಡೆಸಲಾಗಿದೆ ಎಂದು ಹೇಳಿದ್ದರು.