400 ಮಂದಿಗೆ ಕೋವಿಡ್ ಲಸಿಕೆ ವಿತರಣೆ ತಾಲೀಮು
ಬೆಂಗಳೂರು, ಕಲಬುರಗಿ, ಶಿವಮೊಗ್ಗ, ಮೈಸೂರು, ಬೆಳಗಾವಿಯಲ್ಲಿ ಅಣಕು | ಒಟ್ಟು 16 ಆಸ್ಪತ್ರೆ, ಆರೋಗ್ಯ ಕೇಂದ್ರಗಳಲ್ಲಿ ಕಾರ್ಯಾಚರಣೆ | ಡ್ರೈರನ್‌ಗಾಗಿ 25 ಮಂದಿ ಕೊರೋನಾ ವಾರಿಯರ್ಸ್ ಆಯ್ಕೆ ಮಾಡಿಕೊಂಡ ಅಧಿಕಾರಿಗಳು | ಲಸಿಕೆ ನೀಡಲು ಈಗಾಗಲೇ ಆದ್ಯತಾ ಪಟ್ಟಿಸಿದ್ಧ
ಬೆಂಗಳೂರು(ಜ.03): ಕೊರೋನಾ ಲಸಿಕೆ ವಿತರಣೆಗೆ ಪೂರ್ವಭಾವಿಯಾಗಿ ರಾಜ್ಯದ ಐದು ಜಿಲ್ಲೆಗಳಾದ ಕಲಬುರಗಿ, ಮೈಸೂರು, ಬೆಳಗಾವಿ, ಶಿವಮೊಗ್ಗ ಹಾಗೂ ಬೆಂಗಳೂರಿನಲ್ಲಿ ಶನಿವಾರ ಅಣಕು ಲಸಿಕೆ ವಿತರಣಾ ಕಾರ್ಯಾಚರಣೆ (ಡ್ರೈರನ್) ನಡೆಯಿತು. ಮೊದಲ ಹಂತದಲ್ಲಿ ಬೆಂಗಳೂರಿನ ನಾಲ್ಕು ಹಾಗೂ ಉಳಿದ ನಾಲ್ಕು ಜಿಲ್ಲೆಗಳಲ್ಲಿ ತಲಾ ಮೂರು ಸೇರಿ ಒಟ್ಟು 16 ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರಗಳಲ್ಲಿ 400 ಕೋವಿಡ್ ವಾರಿಯರ್ಸ್‌ಗೆ ಲಸಿಕೆ ವಿತರಣಾ ಅಣಕು ಕಾರ್ಯಾಚರಣೆ ಯಶಸ್ವಿಯಾಗಿ ನಡೆಯಿತು.
ಕೊರೋನಾ ಸೋಂಕು ನಿಯಂತ್ರಣಕ್ಕೆ ಶೀಘ್ರದಲ್ಲಿಯೆ ಲಸಿಕೆ ಬರುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಜನಸಾಮಾನ್ಯರ ಮೇಲೆ ಲಸಿಕೆ ಪ್ರಯೋಗ ಮಾಡುವ ಮುನ್ನ ಲಸಿಕೆಯನ್ನು ಹೇಗೆಲ್ಲಾ ನೀಡಬೇಕೆನ್ನುವ ಕುರಿತು ಪೂರ್ವಾಭ್ಯಾಸವಾಗಿ ಈ ಕಾರ್ಯಾಚರಣೆ ನಡೆಯಿತು.
ಬ್ರಿಟನ್ ರಿಟರ್ನ್ಡ್ ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದ 53 ಮಂದಿಗೆ ಪರೀಕ್ಷೆ
ಕಲಬುರಗಿಯಲ್ಲಿ ಅಶೋಕ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಕಲಬುರಗಿ ತಾಲೂಕಿನ ಅವರಾದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಜೇವರ್ಗಿ ತಾಲೂಕಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ, ಶಿವಮೊಗ್ಗ ಮೆಗ್ಗಾನ್ ಆಸ್ರತ್ರೆ, ಶಿಕಾರಿಪುರ ತಾಲೂಕು ಆಸ್ಪತ್ರೆ, ಭದ್ರಾವತಿ ತಾಲೂಕು ಅಂತರಗಂಗೆ ಪ್ರಾಥಮಿಕ ಆರೋಗ್ಯ ಕೇಂದ್ರ, ಬೆಳಗಾವಿಯ ವಂಟಮೂರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಕಿತ್ತೂರಿನ ಸಮುದಾಯ ಆರೋಗ್ಯ ಕೇಂದ್ರ ಮತ್ತು ಹುಕ್ಕೇರಿ ತಾಲೂಕು ಆಸ್ಪತ್ರೆ ಕೇಂದ್ರ, ಮೈಸೂರಿನ ಜಯನಗರ ಸಮುದಾಯ ಆರೋಗ್ಯ ಕೇಂದ್ರ, ಹುಣಸೂರಿನ ಬಿಳಿಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕೆ.ಆರ್. ನಗರ ಸಾರ್ವಜನಿಕ ಆಸ್ಪತ್ರೆ ಹಾಗೂ ಬೆಂಗಳೂರಿನ ಬಿಬಿಎಂಪಿಯ ಕಾಮಾಕ್ಷಿ ಪಾಳ್ಯ, ವಿದ್ಯಾಪೀಠದ ಪ್ರಾಥಮಿಕ ಆರೋಗ್ಯ ಕೇಂದ್ರ, ಹಾರಗದ್ದೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ಯಲಹಂಕದ ಜನರಲ್ ಆಸ್ಪತ್ರೆಗಳಲ್ಲಿ ಅಣಕು ಲಸಿಕೆ ವಿತರಣೆ ಕಾರ್ಯಾಚರಣೆ ನಡೆಯಿತು.
ಪ್ರತಿಯೊಂದು ಆರೋಗ್ಯ ಕೇಂದ್ರ, ಆಸ್ಪತ್ರೆಯಲ್ಲಿ ಮೊದಲೇ ಆಯ್ಕೆ ಮಾಡಿದ್ದ 25 ಮಂದಿ ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡುವ ಪ್ರಾಯೋಗಿಕ ತಾಲೀಮು ನಡೆಸಿದ್ದು, ಇದಕ್ಕಾಗಿ ಐವರು ವಿಶೇಷ ಸಿಬ್ಬಂದಿ ಹಾಗೂ ಒಬ್ಬ ನೋಡಲ್ ಅಧಿಕಾರಿಯನ್ನೂ ನೇಮಕ ಮಾಡಾಗಿತ್ತು. ಈ ಜಿಲ್ಲೆಗಳಲ್ಲಿ ಕೋವಿಡ್ ಲಸಿಕೆ ಯಾರಾರಯರಿಗೆ ನೀಡಬೇಕೆಂಬ ಆದ್ಯತಾ ಪಟ್ಟಿಈಗಾಗಲೇ ಸಿದ್ಧವಾಗಿದೆ ಎಂದು ತಿಳಿದು ಬಂದಿದೆ.
ಲಸಿಕೆ ಮಹಾಭಿಯಾನಕ್ಕೆ ಭಾರತ ಸನ್ನದ್ಧ: 2 ದಿನದಲ್ಲಿ 2ನೇ ಲಸಿಕೆಗೆ ಗ್ರೀನ್‌ಸಿಗ್ನಲ್!
ಕೋವಿಡ್ ಲಸಿಕೆಯನ್ನು ವಿತರಿಸುವ ವೇಳೆ ಯಾವುದೇ ಲೋಪದೋಷಗಳು ಆಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಈ ರೀತಿಯ ಪೂರ್ವಭಾವಿ ತಯಾರಿ ನಡೆಸುವಂತೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ಸೂಚಿಸಿತ್ತು. ಅದರಂತೆ ಕರ್ನಾಟಕದ ಐದು ಕಡೆ ಈ ರೀತಿಯ ತಾಲೀಮು ನಡೆಯಿತು. ಮುಂದಿನ ದಿನಗಳಲ್ಲಿ ರಾಜ್ಯದ ಉಳಿದ ಜಿಲ್ಲೆಗಳಲ್ಲೂ ಈ ರೀತಿಯ ತಾಲೀಮು ನಡೆಯಲಿದೆ.
ಹೇಗೆ ನಡೆಯಿತು ಟ್ರಯಲ್?
- ಲಸಿಕೆ ಟ್ರಯಲ್‌ಗೆ ಆಯ್ಕೆಯಾದ 25 ಮಂದಿ ವಿವರವನ್ನು ಆಸ್ಪತ್ರೆಯಲ್ಲಿ ನೋಂದಣಿ ಮಾಡಿಕೊಳ್ಳಲಾಯಿತು.
- ನಂತರ ಅವರನ್ನು ಆಸ್ಪತ್ರೆಯ ವಿಶ್ರಾಂತಿ ಕೊಠಡಿಯಲ್ಲಿ ಕೂರಿಸಲಾಯಿತು.
- ಆಯ್ಕೆಯಾದ ವ್ಯಕ್ತಿಗೆ ಬಂದ ಮೊಬೈಲ್ ಸಂದೇಶದ ಆಧಾರದ ಮೇಲೆ ಅವರನ್ನು ಲಸಿಕಾ ಕೇಂದ್ರಕ್ಕೆ ಕರೆದೊಯ್ಯಲಾಯಿತು.
- ಲಸಿಕಾ ಕೇಂದ್ರದಲ್ಲಿ ವೈದ್ಯರು, ಸಿಬ್ಬಂದಿ ಆರೋಗ್ಯ ಪರಿಶೀಲಿಸಿ ಲಸಿಕೆ ನೀಡುವ ಅಣಕು ನಡೆಯಿತು.
- ನಂತರ ಅಣಕು ಲಸಿಕೆ ಪಡೆದ ವ್ಯಕ್ತಿಯನ್ನು ಪ್ರತ್ಯೇಕವಾದ ನಿಗಾ ಕೊಠಡಿಗೆ ಕರೆತರಲಾಯಿತು.
- ನಿಗಾ ಕೊಠಡಿಯಲ್ಲಿ 30 ನಿಮಿಷ ಕೂರಿಸಿ ಆತನ ಆರೋಗ್ಯದ ಮೇಲೆ ಕಣ್ಣಿಡುವ ಅಣಕು ನಡೆಯಿತು.
- ಯಾವುದೇ ಸಮಸ್ಯೆ ಕಾಣಸಿಕೊಳ್ಳದ ವ್ಯಕ್ತಿಯನ್ನು ಮನೆಗೆ ಹೋಗುವಂತೆ ಸೂಚಿಸಲಾಯಿತು.
- ಸುಮಾರು 3 ಗಂಟೆ ಕಾಲ ನಡೆದ ಕಾರ್ಯಾಚರಣೆ ವೇಳೆ ಗಂಟೆಗೆ 10 ಮಂದಿಗಷ್ಟೇ ವ್ಯಾಕ್ಸಿನ್ ನೀಡಲಾಯಿತು.