Wrestling World championships: ವಿನೇಶ್ ಫೋಗಾಟ್ ಮೊದಲ ಸುತ್ತಲ್ಲೇ ಸೋಲು..! ಆದರೂ ಇದೆ ಪದಕ ಗೆಲ್ಲುವ ಅವಕಾಶ
ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಸುತ್ತಿನಲ್ಲೇ ಸೋಲು ಅನುಭವಿಸಿದ ವಿನೇಶ್ ಫೋಗಾಟ್
ಮಂಗೋಲಿಯಾದ ಖುಲಾನ್ ಬತ್ಖುಯಾಗ್ ವಿರುದ್ಧ 0-7 ಅಂತರದಲ್ಲಿ ಅಚ್ಚರಿಯ ಸೋಲು
ಖುಲಾನ್ ಬತ್ಖುಯಾಗ್ ಫೈನಲ್ ಪ್ರವೇಶಿಸಿದ್ದರಿಂದ ರೀಪೇಜ್ ಹಂತದ ಕಾದಾಟಕ್ಕೆ ರೆಡಿಯಾದ ವಿನೇಶ್
ಬೆಲ್ಗ್ರೇಡ್(ಸೆ.14): 3 ಬಾರಿ ಕಾಮನ್‌ವೆಲ್ತ್ ಗೇಮ್ಸ್ ಚಿನ್ನ ವಿಜೇತೆ ವಿನೇಶ್ ಫೋಗಾಟ್ ಇಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನ ಮೊದಲ ಸುತ್ತಿನಲ್ಲೇ ಸೋತು ಆಘಾತ ಅನುಭವಿಸಿದ್ದಾರೆ. 53 ಕೆ.ಜಿ. ವಿಭಾಗದಲ್ಲಿ ಮಂಗೋಲಿಯಾದ ಖುಲಾನ್ ಬತ್ಖುಯಾಗ್ ವಿರುದ್ಧ 0-7 ಅಂತರದಲ್ಲಿ ಅಚ್ಚರಿಯ ಸೋಲು ಕಂಡರು.
ಇತ್ತೀಚೆಗಷ್ಟೇ ಮುಕ್ತಾಯವಾದ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 53 ಕೆ.ಜಿ. ವಿಭಾಗದಲ್ಲಿ ವಿನೇಶ್ ಫೋಗಾಟ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು. ಇದೀಗ ವಿನೇಶ್ ಫೋಗಾಟ್ ಮೊದಲು ಸುತ್ತಿನಲ್ಲೇ ಸೋಲು ಅನುಭವಿಸಿದ್ದರೂ ಸಹಾ, ಮತ್ತೆ ಪದಕ ಗೆಲ್ಲುವ ಅವಕಾಶ ಕೂಡಿ ಬಂದಿದೆ. ಮಂಗೋಲಿಯಾದ ಕುಸ್ತಿಪಟು ಖುಲಾನ್ ಬತ್ಖುಯಾಗ್ ಫೈನಲ್ ಪ್ರವೇಶಿಸಿದ್ದರಿಂದಾಗಿ, ವಿನೇಶ್ ಫೋಗಾಟ್ ರೀಪೇಜ್ ಹಂತಕ್ಕೆ ಅರ್ಹತೆಗಿಟ್ಟಿಸಿಕೊಂಡಿದ್ದಾರೆ. ಹೀಗಾಗಿ ಇಂದು(ಬುಧವಾರ) ನಡೆಯಲಿರುವ ಪಂದ್ಯದಲ್ಲಿ ವಿನೇಶ್ ಕಂಚಿನ ಪದಕಕ್ಕಾಗಿ ಕಾದಾಟ ನಡೆಸಲಿದ್ದಾರೆ. 2019ರಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲೂ ವಿನೇಶ್ ಫೋಗಾಟ್ ಕಂಚಿನ ಪದಕ ಜಯಿಸಿದ್ದರು ಎನ್ನುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಮಹಿಳೆಯರ 50 ಕೆ.ಜಿ. ವಿಭಾಗದಲ್ಲಿ ನೀಲಂ ಸಿರೊಹಿ ಮೊದಲ ಸುತ್ತಿನಲ್ಲಿ 0-10ರಲ್ಲಿ ರೊಮೇನಿಯಾದ ಎಮಿಲಾ ವಿರುದ್ಧ ಸೋತರೆ, 65 ಕೆ.ಜಿ. ವಿಭಾಗದಲ್ಲಿ ಶಫಾಲಿ ಫ್ರಾನ್ಸ್‌ನ ಕೌಂಬಾ ಲಾರೊಕ್ಯು ವಿರುದ್ಧ ಸೋಲುಂಡರು.
ಟೆನಿಸ್ ವಿಶ್ವ ರ‍್ಯಾಂಕಿಂಗ್: 7ನೇ ಸ್ಥಾನಕ್ಕಿಳಿದ ಜೋಕೋವಿಚ್
ನ್ಯೂಯಾರ್ಕ್: ಎಟಿಪಿ ವಿಶ್ವ ಟೆನಿಸ್ ರ‍್ಯಾಂಕಿಂಗ್‌ನ ನೂತನ ಪಟ್ಟಿ ಪ್ರಕಟಗೊಂಡಿದ್ದು ಸರ್ಬಿಯಾದ ನೋವಾಕ್ ಜೋಕೋವಿಚ್ ಒಂದು ಸ್ಥಾನ ಕುಸಿತ ಕಂಡು 7ನೇ ಸ್ಥಾನ ಪಡೆದಿದ್ದಾರೆ. ವಿಂಬಲ್ಡನ್ ಗ್ರ್ಯಾನ್ ಸ್ಲಾಂ ಗೆದ್ದರೂ, ಟೂರ್ನಿಯಲ್ಲಿ ರ‍್ಯಾಂಕಿಂಗ್ ಅಂಕಗಳನ್ನು ಅಮಾನ್ಯಗೊಳಿಸಲಾಗಿತ್ತು. ಹೀಗಾಗಿ ಜೋಕೋವಿಚ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಕೆಳಗಿಳಿದಿದ್ದರು. ಯುಎಸ್ ಓಪನ್‌ನಲ್ಲಿ ಆಡಲು ಅವಕಾಶ ಸಿಗದೆ ಇದ್ದಿದ್ದು ಮಾಜಿ ನಂ.1 ಆಟಗಾರನಿಗೆ ಹಿನ್ನಡೆ ಉಂಟು ಮಾಡಿತು.
ಬ್ಯಾಡ್ಮಿಂಟನ್ ರ‍್ಯಾಂಕಿಂಗ್: 16ನೇ ಸ್ಥಾನಕ್ಕೆ ಪ್ರಣಯ್
ನವದೆಹಲಿ: ಕಳೆದೊಂದು ವರ್ಷದಲ್ಲಿ ಉತ್ತಮ ಪ್ರದರ್ಶನ ತೋರಿರುವ ಭಾರತದ ತಾರಾ ಶಟ್ಲರ್ ಎಚ್.ಎಸ್.ಪ್ರಣಯ್ ಬ್ಯಾಡ್ಮಿಂಟನ್ ವಿಶ್ವ ರ‍್ಯಾಂಕಿಂಗ್‌ನಲ್ಲಿ 2 ಸ್ಥಾನ ಏರಿಕೆ ಕಂಡು 16ನೇ ಸ್ಥಾನ ಪಡೆದಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್ ಹಾಗೂ ಜಪಾನ್ ಓಪನ್ ಸೂಪರ್ 750 ಟೂರ್ನಿಗಳಲ್ಲಿ ಪ್ರಣಯ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು.
US open 2022 ಆಲ್ಕರಜ್ ಈಗ ವಿಶ್ವ ನಂ.1, ಅಗ್ರಸ್ಥಾನಕ್ಕೇರಿದ ಅತಿ ಕಿರಿಯ ಟೆನಿಸಿಗ!
33 ಟೂರ್ನಿಗಳಲ್ಲಿ ಆಡಿರುವ ಅವರು 64,330 ಅಂಕಗಳನ್ನು ಪಡೆದಿದ್ದಾರೆ. ಕಿದಂಬಿ ಶ್ರೀಕಾಂತ್ 12ನೇ ಸ್ಥಾನದಲ್ಲಿದ್ದರೆ, ಲಕ್ಷ್ಯ ಸೆನ್ 9ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು 7ನೇ ಸ್ಥಾನದಲ್ಲಿದ್ದು, ಸೈನಾ ನೆಹ್ವಾಲ್ ಅಗ್ರ 30ರೊಳಗೆ ಮತ್ತೆ ಸ್ಥಾನ ಪಡೆದಿದ್ದಾರೆ.
ಅಕ್ಟೋಬರ್ 8,9ಕ್ಕೆ ಬೆಂಗಳೂರಲ್ಲಿ ಕಿರಿಯರ ಫುಟ್ಬಾಲ್
ಬೆಂಗಳೂರು: 8ನೇ ಅಖಿಲ ಭಾರತ ಅಂಡರ್-15 ಬಾಲಕರ ಫುಟ್ಬಾಲ್ ಟೂರ್ನಿ(ತಲಾ 5 ಆಟಗಾರರು) ಅ.8 ಹಾಗೂ 9ರಂದು ಇಲ್ಲಿನ ಡೆಕ್ಕನ್ ಫುಟ್ಬಾಲ್ ಮೈದಾನದಲ್ಲಿ ನಡೆಯಲಿದೆ. ಶಾಲಾ ತಂಡಗಳು, ಕ್ಲಬ್, ಸಂಸ್ಥೆ ಹಾಗೂ ಅಕಾಡೆಮಿಯ ತಂಡಗಳು ಪಾಲ್ಗೊಳ್ಳಲು ಮುಕ್ತ ಅವಕಾಶವಿದೆ. 2007 ಜನವರಿ 1ರ ಬಳಿಕ ಹುಟ್ಟಿದ ಬಾಲಕರು ಈ ಟೂರ್ನಿಯಲ್ಲಿ ಆಡಲು ಅರ್ಹರಾಗಿದ್ದಾರೆ.
ಇದೇ ವೇಳೆ ಮಹಿಳೆಯರ (ತಲಾ 5 ಆಟಗಾರ್ತಿಯರು) ಟೂರ್ನಿ ಸಹ ನಡೆಯಲಿದ್ದು, ಯಾವುದೇ ವಯೋಮಿತಿ ಇರುವುದಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ. ಆಸಕ್ತರು 8095810030 ಸಂಪರ್ಕಿಸಬಹುದು.