ರಾಜ್‌ಕೋಟ್(ಅ.03): ನಾಳೆಯಿಂದ ವೆಸ್ಟ್ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ. ಆದರೆ ಕನ್ನಡಿಗ ಕರುಣ್ ನಾಯರ್ ‌ತಂಡದಿಂದ ಕೈಬಿಟ್ಟ ಚರ್ಚೆ ಮಾತ್ರ ಸದ್ಯಕ್ಕೆ ನಿಲ್ಲೋ ಲಕ್ಷಣ ಕಾಣುತ್ತಿಲ್ಲ. ರಾಜ್‌ಕೋಟ್ ಟೆಸ್ಟ್ ಪಂದ್ಯದ ಕುರಿತು ಸುದ್ದಿಗೋಷ್ಠಿಗೆ ಆಗಮಿಸಿದ ಕೊಹ್ಲಿಗೆ ಕರುಣ್ ನಾಯರ್ ಆಯ್ಕೆ ಕುರಿತ ಪ್ರಶ್ನೆ ಇರಿಸು-ಮುರಿಸು ತಂದಿತು.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕರುಣ್ ನಾಯರ್ ಅವಕಾಶಕ್ಕಾಗಿ ಕಾದುಕುಳಿತಿದ್ದೇ ಬಂತು. ಆಡೋ ಹನ್ನೊಂದರ ಬಳಗದ ಆಟಾಗರರು ಕಳಪೆ ಪ್ರದರ್ಶನ, ಇಂಜುರಿಗೆ ತುತ್ತಾದರೂ ನಾಯರ್‌ಗೆ ಮಾತ್ರ ಅವಕಾಶ ಸಿಗಲಿಲ್ಲ. ಆಂಗ್ಲರ ವಿರುದ್ಧದ ಅಂತಿಮ 2 ಟೆಸ್ಟ್ ಪಂದ್ಯಕ್ಕೆ ಮತ್ತಿಬ್ಬರು ಹೊಸ ಆಟಗಾರನ್ನ ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಇಷ್ಟೇ ಅಲ್ಲ ಅಂತಿಮ ಪಂದ್ಯದಲ್ಲಿ ನಾಯರ್ ಬದಲು ಹನುಮಾ ವಿಹಾರಿಗೆ ಸ್ಥಾನ ನೀಡಲಾಗಿತ್ತು. ಅಷ್ಟರಲ್ಲೇ  ಟೀಂ ಮ್ಯಾನೇಜ್ಮೆಂಟ್ ವಿರುದ್ಧ ಅಪಸ್ವರಗಳು ಕೇಳಿಬಂದಿತ್ತು.

ಇದೀಗ ವೆಸ್ಟ್ಇಂಡೀಸ್ ವಿರುದ್ಧದ ಸರಣಿಗೆ ಸಜ್ಜಾಗಿರುವ ಟೀಂ ಇಂಡಿಯಾಗೆ ಕರುಣ್ ನಾಯರ್ ಆಯ್ಕೆ ಸಂಕಷ್ಟ ತಂದಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ನಾಯಕ ಕೊಹ್ಲಿ, ತಂಡವನ್ನ ಆಯ್ಕೆ ಸಮಿತಿ ಆಯ್ಕೆ ಮಾಡಲಿದೆ. ಎಲ್ಲವನ್ನೂ ಒಂದೇ ದೃಷ್ಟಿಯಲ್ಲಿ ನೋಡಬೇಡಿ ಎಂದು ಕೊಹ್ಲಿ ಸೂಚಿಸಿದ್ದಾರೆ. ಇಷ್ಟೇ ಅಲ್ಲ ತಂಡದ ಆಯ್ಕೆ, ಪ್ಲೇಯಿಂಗ್ ಇಲೆವೆನ್ ನಿರ್ಧಾರ ಸೇರಿದಂತೆ ಹಲವು ವಿಚಾರಗಳನ್ನ ಆಯಾ ವಿಭಾಗಗಳು ನಿಭಾಯಿಸುತ್ತದೆ. ಎಲ್ಲವೂ ಒಬ್ಬರ ನಿರ್ದೇಶದಿಂದ ಅಲ್ಲ ಎಂದು ಪರೋಕ್ಷವಾಗಿ ತಾವು ಎಲ್ಲವನ್ನೂ ನಿಯಂತ್ರಿಸುತ್ತಿಲ್ಲ ಎಂದಿದ್ದಾರೆ.

ಕರುಣ್ ನಾಯರ್ ಜೊತೆ ಆಯ್ಕೆ ಸಮಿತಿ ಈಗಾಗಲೇ ಮಾತುಕತೆ ನಡೆಸಿದೆ. ಆಟಗಾರರನ್ನ ಆಯ್ಕೆ ಮಾಡೋ ಕೆಲಸ ನನ್ನದಲ್ಲ. ಹೀಗಾಗಿ ಈ ಕುರಿತು ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.