ಯುಎಸ್ ಓಪನ್: ಎಂಟರಘಟ್ಟಕ್ಕೆ ಲಗ್ಗೆಯಿಟ್ಟ ನಡಾಲ್, ಸೆರೆನಾ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 4, Sep 2018, 11:25 AM IST
US Open 2018 Serena Williams, Rafael Nadal all move to quarterfinals
Highlights

ಪುರುಷರ ಸಿಂಗಲ್ಸ್‌ನ ಪ್ರಿ ಕ್ವಾರ್ಟರ್‌ನಲ್ಲಿ ನಡಾಲ್, ಜಾರ್ಜಿಯನ್‌ನ ನಿಕೋಲಜ್ ಬಸಿಲ್‌ಶ್ವಿಲಿ ಎದುರು 6-3, 6-3, 6-7, 6-4 ಸೆಟ್‌ಗಳಲ್ಲಿ ಜಯ ಪಡೆದರು. ಕ್ವಾರ್ಟರ್‌ನಲ್ಲಿ ನಡಾಲ್, ಆಸ್ಟ್ರಿಯಾದ ಡೊಮಿನಿಕ್ ಥೀಮ್‌ರನ್ನು ಎದುರಿಸಲಿದ್ದಾರೆ. 

ನ್ಯೂಯಾರ್ಕ್[ಸೆ.04]: ಹಾಲಿ ಚಾಂಪಿಯನ್ ಸ್ಪೇನ್‌ನ ರಾಫೆಲ್ ನಡಾಲ್ ಮತ್ತು ಅಮೆರಿಕದ ತಾರಾ ಆಟಗಾರ್ತಿ ಸೆರೆನಾ ವಿಲಿಯಮ್ಸ್ ವರ್ಷಾಂತ್ಯದ ಗ್ರ್ಯಾಂಡ್ ಸ್ಲಾಮ್ ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ ನಡಾಲ್ 8ನೇ ಬಾರಿ ಎಂಟರಘಟ್ಟಕ್ಕೆ ಲಗ್ಗೆ ಇಟ್ಟರು.

ಪುರುಷರ ಸಿಂಗಲ್ಸ್‌ನ ಪ್ರಿ ಕ್ವಾರ್ಟರ್‌ನಲ್ಲಿ ನಡಾಲ್, ಜಾರ್ಜಿಯನ್‌ನ ನಿಕೋಲಜ್ ಬಸಿಲ್‌ಶ್ವಿಲಿ ಎದುರು 6-3, 6-3, 6-7, 6-4 ಸೆಟ್‌ಗಳಲ್ಲಿ ಜಯ ಪಡೆದರು. ಕ್ವಾರ್ಟರ್‌ನಲ್ಲಿ ನಡಾಲ್, ಆಸ್ಟ್ರಿಯಾದ ಡೊಮಿನಿಕ್ ಥೀಮ್‌ರನ್ನು ಎದುರಿಸಲಿದ್ದಾರೆ. 4ನೇ ಸುತ್ತಿನಲ್ಲಿ ಡೊಮಿನಿಕ್ ಥೀಮ್, ಮ್ಯಾರಾಥಾನ್ ಟೆನಿಸಿಗ ಎಂದೇ ಖ್ಯಾತಿಗಳಿಸಿರುವ ದ. ಆಫ್ರಿಕಾದ ಕೆವಿನ್ ಆ್ಯಂಡರ್‌ಸನ್ ಎದುರು 7-5, 6-2, 7-6 ಸೆಟ್‌ಗಳಲ್ಲಿ ಜಯ ಸಾಧಿಸಿದರು. ಮೊದಲ ಸೆಟ್‌ನಲ್ಲಿ ಆ್ಯಂಡರ್‌ಸನ್ ರನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾದ ಥೀಮ್‌ಗೆ, 2ನೇ ಸೆಟ್‌ನಲ್ಲಿ ಆ್ಯಂಡರ್‌ಸನ್ ತಿರುಗೇಟು ನೀಡಿದರು. ನಿರ್ಣಾಯಕ ಎನಿಸಿದ್ದ 3ನೇ ಸೆಟ್‌ನಲ್ಲಿ ಟೈ ಬ್ರೇಕರ್ ಅವಕಾಶದಲ್ಲಿ ಅಂಕ ಹೆಚ್ಚಿಸಿಕೊಂಡ ಥೀಮ್ ಪಂದ್ಯ ಜಯಿಸಿದರು.

ಸ್ಟೀಫನ್ಸ್, ಸೆರೆನಾಗೆ ಜಯ: 6 ಬಾರಿ ಯುಎಸ್ ಚಾಂಪಿಯನ್ ಅಮೆರಿಕದ ಸೆರೆನಾ ವಿಲಿಯಮ್ಸ್, ಪ್ರಿಕ್ವಾರ್ಟರ್‌ನಲ್ಲಿ ಶ್ರೇಯಾಂಕ ರಹಿತೆ ಈಸ್ಟೋನಿಯಾದ ಕಿಯಾ ಕನೆಪಿ ಎದುರು 6-0, 4-6, 6- 3 ಸೆಟ್‌ಗಳಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಸೆರೆನಾ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಕ್ವಾರ್ಟರ್‌ನಲ್ಲಿ ಸೆರೆನಾ, 8ನೇ ಶ್ರೇಯಾಂಕಿತೆ ಚೆಕ್ ಗಣರಾಜ್ಯದ ಕರೋಲಿನಾ ಪ್ಲಿಸ್ಕೋವಾರನ್ನು ಎದುರಿಸಲಿದ್ದಾರೆ. 2016ರ ಯುಎಸ್ ಓಪನ್ ಸೆಮೀಸ್‌ನಲ್ಲಿ ಪ್ಲಿಸ್ಕೋವಾ, ಸೆರೆನಾರನ್ನು ಮಣಿಸಿದ್ದರು.

ಹಾಲಿ ಚಾಂಪಿಯನ್ ಅಮೆರಿಕದ ಸ್ಲೋನೆ ಸ್ಟೀಫನ್ಸ್, ಬೆಲ್ಜಿಯಂನ ಎಲೈಸ್ ಮೆಟ್ರನ್ಸ್ ವಿರುದ್ಧ 6-3, 6-3 ಸೆಟ್‌ಗಳಲ್ಲಿ ಸುಲಭ ಗೆಲುವು ಪಡೆದರು. ಸ್ಟೀಫನ್ಸ್, ಕ್ವಾರ್ಟರ್ ಫೈನಲ್‌ನಲ್ಲಿ ಲಾತ್ವಿಯದ ಅನ್ಸಾಟಸಿಜ ಸೆವಸ್ಟೊವಾ ಎದುರು ಸೆಣಸಲಿದ್ದಾರೆ. ಒಂದೊಮ್ಮೆ ಸೆರೆನಾ ಮತ್ತು ಸ್ಟೀಫನ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗೆದ್ದರೆ, ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ.

loader