ನವದೆಹಲಿ(ಫೆ.02): 2021-22ರ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಕ್ರೀಡಾ ಕ್ಷೇತ್ರಕ್ಕೆ 2549.14 ಕೋಟಿ ರು. ಅನುದಾನ ಘೋಷಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 749 ಕೋಟಿ ರು. ಹೆಚ್ಚಿಗೆ ಅನುದಾನ ಸಿಗಲಿದೆ. 

2020-21ರಲ್ಲಿ 2826.92 ಕೋಟಿ ಮೀಸಲಿಡುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಆದರೆ ಕೋವಿಡ್‌ನಿಂದಾಗಿ ಕ್ರೀಡಾ ಚಟುವಟಿಕೆಗಳು ನಡೆಯದ ಕಾರಣ ಆ ಮೊತ್ತವನ್ನು ಪರಿಷ್ಕರಿಸಿ 1800.15 ಕೋಟಿ ರು.ಗೆ ಇಳಿಕೆ ಮಾಡಲಾಗಿತ್ತು.

Budget 2021: ಆತ್ಮನಿರ್ಭರ್ ಸ್ವಸ್ಥ ಭಾರತ ಯೋಜನೆ ಆರಂಭ: ಆರೋಗ್ಯ ಕ್ಷೇತ್ರಕ್ಕೆ ಸಿಕ್ಕಿದ್ದೇನು?

ಈ ಸಾಲಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಗಳಿಗೆ 165 ಕೋಟಿ ರು., ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳಿಗೆ 280 ಕೋಟಿ ರು. ನೆರವು ದೊರೆಯಲಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ 731.71 ಕೋಟಿ ಅನುದಾನ ಸಿಗಲಿದೆ. ಕಳೆದ ಸಾಲಿನಲ್ಲಿ 890.42 ಕೋಟಿ ಮೀಸಲಿಡಲಾಗಿತ್ತು. ಆದರೆ ಆ ಮೊತ್ತವನ್ನು 657.71 ಕೋಟಿ ರು.ಗೆ ಇಳಿಸಲಾಗಿತ್ತು. 

ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ 660.41 ಕೋಟಿ ರುಪಾಯಿ, ರಾಷ್ಟ್ರೀಯ ಕ್ರೀಡಾಭಿವೃದ್ಧಿ ನಿಧಿಗೆ 25 ಕೋಟಿ ರುಪಾಯಿ, ಗ್ರಾಮೀಣ ಮಟ್ಟದಲ್ಲಿ ಕ್ರೀಡಾಪಟುಗಳ ಪ್ರತಿಭಾನ್ವೇಷಣೆ ನಡೆಸುವ ಕ್ರೀಡಾ ಇಲಾಖೆಯ ಅಡಿ ಬರುವ ಸ್ವತಂತ್ರ ಸಂಸ್ಥೆ ‘ನೆಹರು ಯುವ ಕೇಂದ್ರ ಸಂಘಟನ್‌’ಗೆ 326.5 ಕೋಟಿ ಅನುದಾನ ಘೋಷಿಸಲಾಗಿದೆ.