ಗರ್ಭಿಣಿ ಟೆನಿಸ್ ಆಟಗಾರ್ತಿ ಪ್ರಶ್ನೆಗೆ ಫೆಡರರ್, ಮರ್ರೆ ಹೆಸರು: ಭಾರೀ ಟ್ರೋಲ್
* ‘ಹು ವಾಂಟ್ಸ್ ಟು ಬಿ ದ ಮಿಲೇನಿಯರ್’ನಲ್ಲಿ ಕೇಳಿದ ಗರ್ಭಿಣಿ ಟೆನಿಸ್ ಆಟಗಾರ್ತಿಯ ಪ್ರಶ್ನೆ ವೈರಲ್
* ಗರ್ಭಿಣಿ ಟೆನಿಸ್ ಆಟಗಾರ್ತಿಯ ಬಗೆಗಿನ ಪ್ರಶ್ನೆ ಹಾಗೂ ಅದಕ್ಕೆ ನೀಡಿದ್ದ ಉತ್ತರದ ಆಯ್ಕೆಗಳು ಈಗ ಭಾರೀ ಟ್ರೋಲ್
* ಗರ್ಭಿಣಿ ಯಾರು ಎಂಬ ಪ್ರಶ್ನೆಗೆ ಮೂವರು ಪುರುಷರ ಹೆಸರು ನೀಡಿದ್ದು ಟ್ರೋಲ್‌ಗೆ ಗುರಿ
ನ್ಯೂಯಾರ್ಕ್(ಡಿ.30): ಅಮೆರಿಕದ ಕೋಟ್ಯಧಿಪತಿ ಕಾರ‍್ಯಕ್ರಮ ‘ಹು ವಾಂಟ್ಸ್ ಟು ಬಿ ದ ಮಿಲೇನಿಯರ್’ನಲ್ಲಿ ಕೇಳಿದ ಗರ್ಭಿಣಿ ಟೆನಿಸ್ ಆಟಗಾರ್ತಿಯ ಬಗೆಗಿನ ಪ್ರಶ್ನೆ ಹಾಗೂ ಅದಕ್ಕೆ ನೀಡಿದ್ದ ಉತ್ತರದ ಆಯ್ಕೆಗಳು ಈಗ ಭಾರೀ ಟ್ರೋಲ್‌ಗೆ ಗುರಿಯಾಗಿದೆ. ಇತ್ತೀಚೆಗೆ ನಡೆದ ಕಾರ‍್ಯಕ್ರಮದಲ್ಲಿ ವ್ಯಕ್ತಿಯೊಬ್ಬರಿಗೆ 8 ವಾರದ ಗರ್ಭಿಣಿಯಾಗಿದ್ದರೂ ಆಸ್ಪ್ರೇಲಿಯನ್ ಓಪನ್ ಗೆದ್ದಿದ್ದ ಆಟಗಾರ್ತಿ ಯಾರು ಎಂದು ಪ್ರಶ್ನಿಸಲಾಗಿತ್ತು. ಆದರೆ ಇದಕ್ಕೆ ರೋಜರ್ ಫೆಡರರ್, ಜಾನ್ ಮೆಕೆನ್ರೋ, ಆ್ಯಂಡಿ ಮರ್ರೆ ಹಾಗೂ ಸೆರೆನಾ ವಿಲಿಯಮ್ಸ್‌ರ ಹೆಸರುಗಳನ್ನು ಆಯ್ಕೆ ರೂಪದಲ್ಲಿ ನೀಡಲಾಗಿತ್ತು. ಗರ್ಭಿಣಿ ಯಾರು ಎಂಬ ಪ್ರಶ್ನೆಗೆ ಮೂವರು ಪುರುಷರ ಹೆಸರು ನೀಡಿದ್ದು ಟ್ರೋಲ್‌ಗೆ ಗುರಿಯಾಗಿದ್ದು, ಇದರ ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಸೆರೆನಾ ವಿಲಿಯಮ್ಸ್, 2017ರಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಟೆನಿಸ್ ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ ಮಹಿಳಾ ಸಿಂಗಲ್ಸ್‌ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ಆದರೆ ಸೆರೆನಾ ವಿಲಿಯಮ್ಸನ್ 9 ವಾರಗಳ ಗರ್ಭಿಣಿಯಾಗಿದ್ದರು. ಆ ಟೂರ್ನಿಯಲ್ಲಿ ಸೆರೆನಾ ವಿಲಿಯಮ್ಸ್ ಒಂದೇ ಒಂದಯ ಸೆಟ್ ಸೋಲದೇ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು.
‘ಹು ವಾಂಟ್ಸ್ ಟು ಬಿ ದ ಮಿಲೇನಿಯರ್’ನಲ್ಲಿ ಕೇಳಿದ ಪ್ರಶ್ನೆಯ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ತರಹೇವಾರಿ ಟ್ರೋಲ್‌ಗಳು ಗಮನ ಸೆಳೆದಿವೆ. ಓರ್ವ ನೆಟ್ಟಿಗ ನಾನಂತೂ ಈ ಪ್ರಶ್ನೆಗೆ ಲೈಫ್‌ಲೈನ್ ಯೂಸ್ ಮಾಡುತ್ತಿದ್ದೆ ಎಂದು ಹೇಳಿದ್ದಾರೆ.
ಆಸ್ಟ್ರೇಲಿಯನ್ ಓಪನ್ ವಿಜೇತರಿಗೆ 16.54 ಕೋಟಿ ರುಪಾಯಿ
ಮೆಲ್ಬರ್ನ್: ಜನವರಿ 16ರಿಂದ ಆರಂಭವಾಗಲಿರುವ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯ ಪ್ರಶಸ್ತಿ ಮೊತ್ತ ಶೇ. 3.4ರಷ್ಟು ಏರಿಕೆಯಾಗಿದ್ದು, ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆಗುವ ಆಟಗಾರರಿಗೆ 16.54 ಕೋಟಿ ರುಪಾಯಿ ಬಹುಮಾನ ಮೊತ್ತ ಸಿಗಲಿದೆ.
ಕಳೆದ ವರ್ಷ ಸಿಂಗಲ್ಸ್ ಸಿಂಗಲ್ಸ್ ಪ್ರಶಸ್ತಿ ವಿಜೇತರಿಗೆ 15.99 ಕೋಟಿ ರುಪಾಯಿ ಬಹುಮಾನ ನೀಡಲಾಗಿತ್ತು. ಇನ್ನು ಈ ವರ್ಷ ರನ್ನರ್ ಅಪ್ ಆದ ಆಟಗಾರರಿಗೆ 9 ಕೋಟಿ ರುಪಾಯಿ ಬಹುಮಾನ ಮೊತ್ತ ಪಡೆಯಲಿದ್ದಾರೆ. ಇನ್ನುಳಿದಂತೆ ಸೆಮಿಫೈನಲ್ ಪ್ರವೇಶಿಸಿದ ಆಟಗಾರರಿಗೆ 5.17 ಕೋಟಿ ರುಪಾಯಿ ಬಹುಮಾನ ಸಿಗಲಿದೆ. ಆಟಗಾರರನ್ನು ಉತ್ತೇಜಿಸಲು ಬಹುಮಾನ ಮೊತ್ತವನ್ನು ಹೆಚ್ಚಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಸಂತೋಷ್ ಟ್ರೋಫಿ: ರಾಜ್ಯಕ್ಕೆ 10-0 ಗೆಲುವು
ನವದೆಹಲಿ: ಸಂತೋಷ್ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್ ಟೂರ್ನಿಯಲ್ಲಿ ಕರ್ನಾಟಕ ತಂಡ ಗುರುವಾರ ತ್ರಿಪುರಾ ವಿರುದ್ಧ 10-0 ಗೋಲುಗಳ ಭರ್ಜರಿ ಜಯಗಳಿಸಿದೆ. ಟೂರ್ನಿಯಲ್ಲಿ ಸತತ 4ನೇ ಗೆಲುವು ಸಾಧಿಸಿದ ರಾಜ್ಯ ತಂಡ ಗುಂಪು-1ರಲ್ಲಿ 12 ಅಂಕಗಳೊಂದಿಗೆ ಅಗ್ರಸ್ಥಾನ ಭದ್ರಪಡಿಸಿಕೊಂಡಿದ್ದು, ಪ್ರಧಾನ ಸುತ್ತಿನ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ.
ಗುರುವಾರದ ಪಂದ್ಯದಲ್ಲಿ 2ನೇ ನಿಮಿಷದಲ್ಲೇ ಗೋಲಿನ ಖಾತೆ ರಾಜ್ಯ ತಂಡ ಮೊದಲಾರ್ಧದ ಮುಕ್ತಾಯದ ವೇಳೆಗೆ 5 ಗೋಲು ದಾಖಲಿಸಿತ್ತು. 2ನೇ ಅವಧಿಯಲ್ಲೂ ಪ್ರಾಬಲ್ಯ ಸಾಧಿಸಿದ ತಂಡ ಕೊನೆ 12 ನಿಮಿಷಗಳಲ್ಲಿ ಮತ್ತೆ 4 ಗೋಲು ಹೊಡೆದು ಗೆಲುವಿನ ಅಂತರವನ್ನು ಹಿಗ್ಗಿಸಿತು. ಶನಿವಾರ ಕೊನೆ ಪಂದ್ಯದಲ್ಲಿ ಕರ್ನಾಟಕ, ಡೆಲ್ಲಿ(10 ಅಂಕ) ವಿರುದ್ಧ ಸೆಣಸಾಡಲಿದೆ.