Doping Case: ಮಾಜಿ ನಂ.1 ಟೆನಿಸ್ ಆಟಗಾರ್ತಿ ಸಿಮೋನಾ ಹಾಲೆಪ್ ಅಮಾನತು..!
ಮಾಜಿ ವಿಶ್ವ ನಂ.1 ರೊಮೇನಿಯಾದ ತಾರಾ ಟೆನಿಸ್ ಆಟಗಾರ್ತಿ ಸಿಮೋನಾ ಹಾಲೆಪ್ ಬ್ಯಾನ್
ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ಸಿಮೋನಾ ಹಾಲೆಪ್ ತಾತ್ಕಾಲಿಕ ಬ್ಯಾನ್
ನಾನು ಉದ್ದೇಶಪೂರ್ವಕ ಯಾವುದೇ ನಿಷೇಧಿತ ಮದ್ದು ಸೇವಿಸಿಲ್ಲ ಎಂದ ಹಾಲೆಪ್
ಬುಕಾರೆಸ್ಟ್(ಅ.22): 2 ಬಾರಿ ಗ್ರ್ಯಾನ್‌ಸ್ಲಾಂ ವಿಜೇತೆ, ಮಾಜಿ ವಿಶ್ವ ನಂ.1 ರೊಮೇನಿಯಾದ ತಾರಾ ಟೆನಿಸ್ ಆಟಗಾರ್ತಿ ಸಿಮೋನಾ ಹಾಲೆಪ್ ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ತಾತ್ಕಾಲಿಕ ಅಮಾನತುಗೊಂಡಿದ್ದಾರೆ. ಶುಕ್ರವಾರ ಈ ಬಗ್ಗೆ ಪ್ರಕಟಣೆ ಹೊರಡಿಸಿದ ಅಂತಾರಾಷ್ಟ್ರೀಯ ಟೆನಿಸ್ ಸಮಗ್ರತೆ ಸಂಸ್ಥೆ(ಐಟಿಐಎ), ‘ಟೆನಿಸ್ ಡೋಪಿಂಗ್ ವಿರೋಧಿ ಕಾರ‍್ಯಕ್ರಮ(ಟಿಎಡಿಪಿ) ಅಡಿಯಲ್ಲಿ ಸಿಮೋನಾ ಹಾಲೆಪ್‌ಗೆ ತಾತ್ಕಾಲಿಕ ಅಮಾನತು ಹೇರಲಾಗಿದೆ’ ಎಂದು ಮಾಹಿತಿ ನೀಡಿದೆ.
ಹಾಲೆಪ್ ಅವರ ರಕ್ತದ ಮಾದರಿಯನ್ನು ಕಳೆದ ಆಗಸ್ಟ್‌ನಲ್ಲಿ ಯುಎಸ್ ಓಪನ್ ವೇಳೆ ಸಂಗ್ರಹಿಸಲಾಗಿತ್ತು. ವರದಿಯಲ್ಲಿ ಹಾಲೆಪ್ ನಿಷೇಧಿತ ರೊಕ್ಸಾಡುಸ್ಟಾಟ್ ಮದ್ದು ಸೇವಿಸಿದ್ದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ. ಸದ್ಯ ಅವರು ಯಾವುದೇ ಟೂರ್ನಿಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಹಾಲೆಪ್ ಕೆಲ ವರ್ಷಗಳ ನಿಷೇಧಕ್ಕೆ ಒಳಗಾಗುವ ಸಾಧ್ಯತೆ ಇದೆ.
ಮೋಸ ಮಾಡಿಲ್ಲ: ಹಾಲೆಪ್
ಅಮಾನತುಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಹಾಲೆಪ್, ‘ನಿಷೇಧ ಸುದ್ದಿ ಕೇಳಿ ಆಘಾತಕ್ಕೊಳಗಾಗಿದ್ದೇನೆ. ನಾನು ಉದ್ದೇಶಪೂರ್ವಕ ಯಾವುದೇ ನಿಷೇಧಿತ ಮದ್ದು ಸೇವಿಸಿಲ್ಲ. ವಂಚನೆ ಎಂಬ ಪದವೇ ನನ್ನ ಮನಸ್ಸಲ್ಲಿ ಒಮ್ಮೆಯೂ ಬಂದಿಲ್ಲ. ಸತ್ಯ ಹೊರಬರಲಿದೆ ಮತ್ತು ಅದಕ್ಕಾಗಿ ಕೊನೆವರೆಗೂ ನಾನು ಹೋರಾಡುತ್ತೇನೆ’ ಎಂದಿದ್ದಾರೆ.
ಡೆನ್ಮಾರ್ಕ್ ಓಪನ್: ಲಕ್ಷ್ಯ ಸೇನ್ ಕ್ವಾರ್ಟರ್ ಪ್ರವೇಶ
ಒಡೆನ್ಸೆ(ಡೆನ್ಮಾರ್ಕ್): ಭಾರತದ ತಾರಾ ಶಟ್ಲರ್ ಎಚ್.ಎಸ್.ಪ್ರಣಯ್‌ರನ್ನು ಸೋಲಿಸಿದ ಕಾಮನ್‌ವೆಲ್ತ್ ಗೇಮ್ಸ್ ಚಿನ್ನ ವಿಜೇತ ಆಟಗಾರ ಲಕ್ಷ್ಯ ಸೇನ್ ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.
ಅಂಧರ ಟಿ20 ವಿಶ್ವಕಪ್‌ಗೆ ಯುವರಾಜ್ ಸಿಂಗ್ ರಾಯಭಾರಿ, ಡಿ.6ರಿಂದ ಟೂರ್ನಿ!
ಶುಕ್ರವಾರ ಪುರುಷರ ಸಿಂಗಲ್ಸ್ ಪ್ರಿ ಕ್ವಾರ್ಟರ್‌ನಲ್ಲಿ ವಿಶ್ವ ನಂ.8 ಸೇನ್ 21-19, 21-18 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಇದರೊಂದಿಗೆ ಪ್ರಣಯ್ ವಿರುದ್ಧದ ಗೆಲುವಿನ ದಾಖಲೆಯನ್ನು 3-2ಕ್ಕೆ ಏರಿಸಿದ್ದಾರೆ. ಸೇನ್ ಅಂತಿಮ 8ರ ಸುತ್ತಿನಲ್ಲಿ ಜಪಾನಿನ ಕೊಡಾಯಿ ನರೋಕ ವಿರುದ್ಧ ಸೆಣಸಲಿದ್ದಾರೆ.
ಕಬಡ್ಡಿ: ಪುಣೆಗೆ ಹ್ಯಾಟ್ರಿಕ್ ಗೆಲುವು
ಬೆಂಗಳೂರು: 9ನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಪುಣೇರಿ ಪಲ್ಟನ್ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದು, ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ಶುಕ್ರವಾರ ಬೆಂಗಾಲ್ ವಾರಿಯರ್ಸ್ ವಿರುದ್ಧ ಪುಣೇರಿ 27-25 ಅಂಕಗಳ ರೋಚಕ ಜಯಗಳಿಸಿತು. ಶುಕ್ರವಾರದ ಮತ್ತೊಂದು ಪಂದ್ಯದಲ್ಲಿ ಹರಾರಯಣ ಸ್ಟೀಲರ್ಸ್ ವಿರುದ್ಧ ಯು ಮುಂಬಾ 32-31 ಅಂಕಗಳ ರೋಚಕ ಗೆಲುವು ಸಾಧಿಸಿತು. ಹರ್ಯಾಣ ಹ್ಯಾಟ್ರಿಕ್ ಸೋಲುಂಡಿತು.