ನಿಂದನೆ, ನೋವಿನಲ್ಲೂ ಅರಳಿದ ದ್ಯುತಿ ಯಶೋಗಾಥೆ

ಬಡತನ, ತಮ್ಮ ದೇಹದಲ್ಲಾದ ಬದಲಾವಣೆ ಕುರಿತ ನಿಂದನೆ, ಕಷ್ಟಗಳ ವಿರುದ್ಧ ಹೋರಾಟ, ಕಠಿಣ ಅಭ್ಯಾಸ ಹಾಗೂ ಪರಿಶ್ರಮ, ಅಂತರಾಳದ ನೋವಿನ ನಡುವೆಯೂ ಏಷ್ಯನ್ ಗೇಮ್ಸ್‌ನಲ್ಲಿ ಪದಕ ಸಾಧನೆ ಮಾಡಿದ ದ್ಯುತಿ ಚಾಂದ್ ಕಥೆ ಯಾವ ಸಾಧಕಿಯ ಕಥೆಗೂ ಕಡಿಮೆಯಲ್ಲ. ಮಹಿಳೆಯರ 100 ಮೀ. ಮತ್ತು 200 ಮೀ. ಓಟದಲ್ಲಿ ಬೆಳ್ಳಿ ಪದಕ ಗೆದ್ದ ಒಡಿಶಾದ ರೈತ ಕುಟುಂಬದ ಅಥ್ಲೀಟ್ ದ್ಯುತಿ ಚಾಂದ್ ತಮ್ಮ ಸಾಧನೆ, ಮುಂದಿನ ಗುರಿ, ಒಲಿಂಪಿಕ್ಸ್‌ಗೆ ಸಿದ್ಧತೆ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಮುಕ್ತವಾಗಿ ಮಾತನಾಡಿದ್ದಾರೆ. 

Success story of 2018 Asian Games silver medalist Dutee Chand

ಬೆಂಗಳೂರು, (ಸೆ.13): ಬಡತನ, ತಮ್ಮ ದೇಹದಲ್ಲಾದ ಬದಲಾವಣೆ ಕುರಿತ ನಿಂದನೆ, ಕಷ್ಟಗಳ ವಿರುದ್ಧ ಹೋರಾಟ, ಕಠಿಣ ಅಭ್ಯಾಸ ಹಾಗೂ ಪರಿಶ್ರಮ, ಅಂತರಾಳದ ನೋವಿನ ನಡುವೆಯೂ ಏಷ್ಯನ್ ಗೇಮ್ಸ್‌ನಲ್ಲಿ ಪದಕ ಸಾಧನೆ ಮಾಡಿದ ದ್ಯುತಿ ಚಾಂದ್ ಕಥೆ ಯಾವ ಸಾಧಕಿಯ ಕಥೆಗೂ ಕಡಿಮೆಯಲ್ಲ. 

ಮಹಿಳೆಯರ 100 ಮೀ. ಮತ್ತು 200 ಮೀ. ಓಟದಲ್ಲಿ ಬೆಳ್ಳಿ ಪದಕ ಗೆದ್ದ ಒಡಿಶಾದ ರೈತ ಕುಟುಂಬದ ಅಥ್ಲೀಟ್ ದ್ಯುತಿ ಚಾಂದ್ ತಮ್ಮ ಸಾಧನೆ, ಮುಂದಿನ ಗುರಿ, ಒಲಿಂಪಿಕ್ಸ್‌ಗೆ ಸಿದ್ಧತೆ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಮುಕ್ತವಾಗಿ ಮಾತನಾಡಿದ್ದಾರೆ. 

ಏಷ್ಯಾಡ್‌ನಲ್ಲಿ 2 ಪದಕ ಗೆದ್ದ ಅನುಭವ ಹೇಗಿತ್ತು?
ಅತ್ಯಂತ ಹೆಮ್ಮೆಯೆನಿಸುತ್ತಿದೆ. ಅದೆಲ್ಲಕ್ಕೂ ಹೆಚ್ಚಾಗಿ ನಾನಂದುಕೊಂಡಿದ್ದನ್ನು ಸಾಧಿಸಿದ್ದೇನೆ ಎನ್ನುವ ಸಮಾಧಾನವಿದೆ. ನನ್ನ ಕಷ್ಟಗಳನ್ನೆಲ್ಲ ಬದಿಗಿಟ್ಟು ಪದಕ ಗೆದ್ದಿರುವುದಕ್ಕೆ ಮತ್ತು ಅದಕ್ಕೆ
ಸಹಕರಿಸಿ ನನ್ನನ್ನು ಪ್ರತಿಕ್ಷಣವೂ ಹುರಿದುಂಬಿಸಿದ ನನ್ನ ಕೋಚ್ ರಮೇಶ್ ಅವರಿಗೆ ನಾನು ಸದಾ ಋಣಿ. ದೇಶಕ್ಕಾಗಿ ಮತ್ತಷ್ಟು ಪದಕ ಗೆಲ್ಲುವುದು ನನ್ನ ಗುರಿ.

Success story of 2018 Asian Games silver medalist Dutee Chand

2020ರ ಒಲಿಂಪಿಕ್ಸ್‌ಗೆ ತಯಾರಿ ಹೇಗಿದೆ?
ಹೌದು, ನನ್ನ ಮುಂದಿನ ಗುರಿ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು. ಪದಕ ಗೆಲ್ಲುತ್ತೇನೆ ಎಂಬ ವಿಶ್ವಾಸವೂ ಇದೆ. ಅದಕ್ಕಾಗಿ ಏಷ್ಯನ್ ಗೇಮ್ ಗಾಗಿ ವಹಿಸಿದ್ದಕ್ಕಿಂತಲೂ ಹೆಚ್ಚಿನ ಶ್ರಮವಹಿಸಬೇಕಿದೆ. ಜತೆಗೆ ನನ್ನ ಟೈಮಿಂಗ್ ಅನ್ನು ಬಹಳಷ್ಟು ಸುಧಾರಿಸಿಕೊಳ್ಳಬೇಕಿದೆ. ಅದಕ್ಕಾಗಿ ಈಗಿನಿಂದಲೇ ಅಭ್ಯಾಸ ಆರಂಭಿಸಿದ್ದೇನೆ. ಆದರೆ ಒಲಿಂಪಿಕ್ಸ್ ನಡೆಯುವುದು ಜಪಾನ್‌ನಲ್ಲಿ. ಅಲ್ಲಿ ಹೆಚ್ಚು ಶೀತದ ವಾತಾವರಣ ಇರುವುದರಿಂದ, ಅಲ್ಲಿಗೆ ಹೊಂದುವಂತಹ ವಾತಾವರಣದಲ್ಲಿ ತರಬೇತಿ ಪಡೆಯಬೇಕಾಗಿದೆ. ಅದಕ್ಕಾಗಿ ವಿದೇಶದಲ್ಲಿ ತರಬೇತಿ ಪಡೆಯುವ ಬಗ್ಗೆ ಯೋಚಿಸುತ್ತಿದ್ದೇನೆ.ಸ್ಥಳವನ್ನು ನನ್ನ ಫಿಸಿಯೋ ಹಾಗೂ ಕೋಚ್ ನಿರ್ಧರಿಸುತ್ತಾರೆ.

Success story of 2018 Asian Games silver medalist Dutee Chand

 ಅಭ್ಯಾಸ ಕ್ರಮ ಹೇಗಿದೆ?
ಈಗ ಪ್ರತಿದಿನವೂ ೪ರಿಂದ ೬ ತಾಸುಗಳವರೆಗೆ ಅಭ್ಯಾಸ ನಡೆಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಅದನ್ನು ಇನ್ನಷ್ಟು ಹೆಚ್ಚಿಸುವ ಯೋಜನೆಯಿದೆ.ಈಗ ನನ್ನ ಟೈಮಿಂಗ್ 100 ಮೀ.ನಲ್ಲಿ 11.23 ಸೆಕೆಂಡ್ ಮತ್ತು 200 ಮೀ.ನಲ್ಲಿ 23 ಸೆಕೆಂಡ್ ಇದೆ. ಆದರೆ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬೇಕಿದ್ದರೆ, ಇದಕ್ಕಿಂತ ಅತ್ಯುತ್ತಮ ಟೈಮಿಂಗ್ ಬೇಕು. ಆಧುನಿಕ ತಂತ್ರಜ್ಞಾನ ಹಾಗೂ ಅಗತ್ಯ ಆಹಾರ ಪದ್ಧತಿಯ ಸಹಾಯ ಪಡೆಯುತ್ತಿದ್ದೇನೆ. 

‘ಹೈಪರ್ ಆ್ಯಂಡ್ರೋಜೆನಿಸಂ’ನಿಂದ ಅನುಭವಿಸಿದ ಕಷ್ಟ? ನನ್ನ ದೇಹದಲ್ಲಿ ಟೆಸ್ಟೊಸ್ಟೀರೋನ್‌ಗಳು ಅತ್ಯಧಿಕವಾಗಿದ್ದರಿಂದ ಇಡೀ ಜಗತ್ತೇ ನನ್ನನ್ನು ನೋಡುವ ದೃಷ್ಟಿ ಬೇರೆಯಾಯಿತು. ನನ್ನನ್ನು ಮಹಿಳಾ ಅಥ್ಲೀಟ್‌ಗಳ ಪಟ್ಟಿಯಿಂದ ಹೊರಗಿಡಲಾಯಿತು. ಇದರಿಂದಾಗಿ 2014ರ ಕಾಮನ್‌ವೆಲ್ತ್ ಮತ್ತು ಏಷ್ಯನ್ ಗೇಮ್ಸ್‌ಗಳನ್ನು ತಪ್ಪಿಸಿಕೊಂಡೆ. 

ಅನ್ಯಾಯದ ವಿರುದ್ಧ ಹೋರಾಡಲು ವಿಶ್ವ ಕ್ರೀಡಾ ನ್ಯಾಯಾಲಯದಲ್ಲಿ ದೂರು ದಾಖಲಿಸಿ ಪ್ರಕರಣ ಗೆದ್ದೆ. ಮತ್ತೆ ಅಭ್ಯಾಸ ಆರಂಭಿಸಿದೆ. ಕೆಲವು ವರ್ಷಗಳು ನನ್ನ ಪಾಲಿಗೆ ಕರಾಳವಾಗಿದ್ದವು. ನನ್ನ ಕ್ರೀಡಾ ಭವಿಷ್ಯವೇ ಕಮರುವ ಹಂತಕ್ಕೆ ಬಂದಿತ್ತು. ಇದರಿಂದಾಗಿ ಸಾಮಾನ್ಯರು ನನ್ನನ್ನು ನೋಡುವ ದೃಷ್ಟಿಯೇ ಬೇರೆಯಾಯಿತು. ನಿಂದನೆ, ಅವಮಾನ, ಅವಹೇಳನಕಾರಿ ಮಾತುಗಳು ನನ್ನನ್ನು ಬಹಳಷ್ಟು ಘಾಸಿಗೊಳಿಸಿದವು. ಆದರೆ ಛಲ ಬಿಡಲಿಲ್ಲ. 

ಏಷ್ಯಾಡ್‌ನಲ್ಲಿ 2 ಪದಕ ಗೆಲ್ಲದಿದ್ದರೆ ದ್ಯುತಿ ಎನ್ನುವ ಅಥ್ಲೀಟ್ ಒಬ್ಬಳು ಇದ್ದಳು ಎಂಬುದನ್ನು ಎಲ್ಲರೂ ಮರೆತುಬಿಡುತ್ತಿದ್ದರು. ಜಕಾರ್ತದಲ್ಲಿ ನಡೆದ ಏಷ್ಯನ್ ಗೇಮ್ಸ್‌ನ ಗೆಲೋರಾ ಬಂಗ್ ಕರ್ನೋ ಸ್ಟೇಡಿಯಂನಲ್ಲಿ ದ್ಯುತಿ ಬೆಳ್ಳಿ ಗೆದ್ದು ಸಂಭ್ರಮಿಸುತ್ತಿದ್ದಾಗ, ಅವರ ತಂದೆ-ತಾಯಿ ಮಾತ್ರ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದರಂತೆ. ಸ್ವತಃ ದ್ಯುತಿ ಈ ವಿಷಯವನ್ನು ತಿಳಿಸಿದ್ದಾರೆ. 

ದ್ಯುತಿ ಅವರದ್ದು ಅತ್ಯಂತ ಬಡ ಕುಟುಂಬ. ಕುಂಟುಂಬ ನಿರ್ವಹಣೆಗಾಗಿ ತಂದೆ-ತಾಯಿ ಈಗಲೂ ಗದ್ದೆ ಕೆಲಸಕ್ಕೆ ಹೋಗುತ್ತಾರೆ. ಜತೆಗೆ ಬಟ್ಟೆ ನೇಯುತ್ತಾರೆ. ಈಗ ಒಡಿಶಾ ಸರ್ಕಾರ ನಗದು ಬಹುಮಾನದ ಭರವಸೆ ನೀಡಿದ್ದು, ದ್ಯುತಿ ಆರ್ಥಿಕವಾಗಿ ಸುಧಾರಣೆ ಕಾಣುವ ವಿಶ್ವಾಸದಲ್ಲಿದ್ದಾರೆ. 

(ಮಲ್ಲಪ್ಪ ಸಿ.ಪಾರೇಗಾಂವ)

Latest Videos
Follow Us:
Download App:
  • android
  • ios