ನವದೆಹಲಿ(ನ.15): ಕೊರೋನಾ ಭೀತಿ ನಡುವೆ ದೇಶದೆಲ್ಲೆಡೆ ಆಚರಿಸುತ್ತಿರುವ ಬೆಳಕಿನ ಹಬ್ಬ ದೀಪಾವಳಿಗೆ ಕ್ರೀಡಾ ತಾರೆಗಳು ಶುಭ ಕೋರಿದ್ದಾರೆ. ದಯವಿಟ್ಟು ಮರೆಯಬೇಡಿ, ಪಟಾಕಿಗಳನ್ನು ಹೊಡೆಯದೇ ದೀಪಾವಳಿ ಹಬ್ಬವನ್ನು ಆಚರಿಸಿ ಎಂದು ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅಭಿಮಾನಿಗಳಿಗೆ ಶುಭಾಶಯ ಹೇಳಿದ್ದಾರೆ. 

ಗಡಿ ಕಾಯುವ ಭಾರತದ ವೀರ ಯೋಧರಿಗೆ ಮಾಜಿ ಕ್ರಿಕೆಟಿಗ ಸುರೇಶ್‌ ರೈನಾ ದೀಪಾವಳಿ ಹಬ್ಬದ ಶುಭಾಶಯವನ್ನು ಟ್ವೀಟ್‌ ಮೂಲಕ ತಿಳಿಸಿದ್ದಾರೆ. ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ವೀರೇಂದ್ರ ಸೆಹ್ವಾಗ್‌, ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್‌, ಚೆಸ್‌ ಆಟಗಾರ್ತಿ ಹರಿಕಾ ದ್ರೋಣವಲ್ಲಿ ಸೇರಿದಂತೆ ಇತರರು ಟ್ವೀಟರ್‌ನಲ್ಲಿ ಹಬ್ಬದ ಶುಭ ಕೋರಿದರು.

ವಿದೇಶಿ ಆಟಗಾರರಾದ ಡೇವಿಡ್‌ ವಾರ್ನರ್‌, ಕುಮಾರ್‌ ಸಂಗಕ್ಕಾರ, ಮಹೇಲ ಜಯವರ್ಧನೆ, ಟಾಮ್‌ ಮೂಡಿ, ರಶೀದ್‌ ಖಾನ್‌, ಕೆವಿನ್‌ ಪೀಟರ್ಸನ್‌, ಶೇನ್‌ ವಾಟ್ಸನ್‌ ಭಾರತೀಯ ಅಭಿಮಾನಿಗಳಿಗೆ ದೀಪಾವಳಿ ಶುಭಾಶಯವನ್ನು ಟ್ವೀಟ್‌ನಲ್ಲಿ ತಿಳಿಸಿದರು. 

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿಗಳು ಟ್ವೀಟರ್‌ನಲ್ಲಿ ಶುಭ ಕೋರಿವೆ. ಉಳಿದಂತೆ ಆಸ್ಪ್ರೇಲಿಯಾದ ಸಿಡ್ನಿಯಲ್ಲಿ ಕ್ವಾರಂಟೈನ್‌ಗೆ ಒಳಗಾಗಿರುವ ಭಾರತ ತಂಡದ ಆಟಗಾರರಾದ ರವಿಚಂದ್ರನ್‌ ಅಶ್ವಿನ್‌, ಚೇತೇಶ್ವರ್‌ ಪೂಜಾರ ಹಾಗೂ ಅಜಿಂಕ್ಯ ರಹಾನೆ ತಮ್ಮ ಕುಟುಂಬದೊಟ್ಟಿಗೆ ಸರಳವಾಗಿ ದೀಪಾವಳಿ ಹಬ್ಬ ಆಚರಿಸಿದರು.