ಧನಂಜಯ ಎಸ್‌.ಹಕಾರಿ, ಕನ್ನಡಪ್ರಭ

ಬೆಂಗಳೂರು(ಜ.25): ರಾಜ್ಯದಲ್ಲಿ ಕ್ರೀಡೆಯನ್ನು ತಳಮಟ್ಟದಿಂದ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕ್ರೀಡಾ ಇಲಾಖೆ ಮುಂದಾಗಿದೆ. ಇದಕ್ಕಾಗಿ ಇಲಾಖೆ ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ ಪ್ರತಿಭಾನ್ವೇಷಣೆ ನಡೆಸುವ ಯೋಜನೆ ಹೊಂದಿದೆ. ಮೊದಲ ಹಂತದಲ್ಲಿ ಉತ್ತರ ಕನ್ನಡ ಭಾಗದ ಕಾರವಾರ, ಹಳಿಯಾಳ, ಯಲ್ಲಾಪುರ ದಲ್ಲಿನ ಸಿದ್ದಿ ಮಕ್ಕಳನ್ನು ಗುರುತಿಸಿ ವಿಶೇಷ ತರಬೇತಿ ನೀಡುವ ಯೋಜನೆಗೆ ಚಾಲನೆ ನೀಡಿದ್ದ ಇಲಾಖೆ, ಇದೀಗ ಬಿಸಿಲ ನಾಡು ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಪ್ರತಿಭಾನ್ವಿತ ಮಕ್ಕಳ ಶೋಧನೆಗೆ ಇಳಿದಿದೆ.

ಇದೇ ರೀತಿ ಮುಂದಿನ ದಿನಗಳಲ್ಲಿ ರಾಜ್ಯದ್ಯಾಂತ ಪ್ರವಾಸ ಮಾಡಿ ಆಯಾ ಜಿಲ್ಲೆಯ ಗ್ರಾಮೀಣಾ ಭಾಗದ ಪ್ರತಿಭಾನ್ವಿತ ಮಕ್ಕಳನ್ನು ಹುಡುಕಿ, ಕರೆತಂದು ಅತ್ಯುನ್ನತ ತರಬೇತಿ ನೀಡುವ ಮೂಲಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಬಾಚಿಕೊಳ್ಳುವ ವಿಶ್ವಾಸ ಇಲಾಖೆಗಿದೆ.

ಪ್ರತಿಭಾನ್ವೇಷಣೆಯಲ್ಲಿ ದೊರೆತ ಮಕ್ಕಳು ಎತ್ತರವಾಗಿದ್ದರೆ, ಬಾಸ್ಕೆಟ್‌ಬಾಲ್‌, ವಾಲಿಬಾಲ್‌, ಅಥ್ಲೆಟಿಕ್ಸ್‌ಗೆ ಸೇರಿಸಲಾಗುವುದು. ಸ್ವಲ್ಪ ಎತ್ತರ ಕಡಿಮೆ ಇರುವ ಮಕ್ಕಳನ್ನು ಕುಸ್ತಿ, ಕಬಡ್ಡಿ ಕ್ರೀಡೆಗೆ ಸರಿಹೊಂದುತ್ತಾರಾ ಎಂದು ಪರೀಕ್ಷಿಸಿ ಆಯ್ಕೆಯಾದವರಿಗೆ ವಿಶೇಷ ತರಬೇತಿ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಕ್ರೀಡೆಗೆ ಹೊಸ ಕಾಯಕಲ್ಪ ನೀಡುವ ಉತ್ಸಾಹದಲ್ಲಿ ಕ್ರೀಡಾ ಇಲಾಖೆ ಮುಂದಾಗಿದೆ ಎಂದು ಹಿರಿಯ ಕ್ರೀಡಾ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಪ್ರತಿಭಾನ್ವೇಷಣೆಗೆ ತಜ್ಞರ ಸಾಥ್‌: ಕ್ರೀಡಾ ಇಲಾಖೆ ಪ್ರತಿವರ್ಷ ಪ್ರತಿಭಾನ್ವೇಷಣೆ ಮಾಡುತ್ತಿತ್ತು. ಆದರೆ ಈ ಬಾರಿ ಎಲ್ಲಿಯೇ ಪ್ರತಿಭಾನ್ವೇಷಣೆಗೆ ತೆರಳಿದರೂ ಜೊತೆಯಲ್ಲಿ ಕ್ರೀಡಾ ವಿಜ್ಞಾನ ಕೇಂದ್ರದ ನುರಿತ ತಜ್ಞರ ತಂಡವೊಂದನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದೆ. ಕಾರಾವಾರ, ಹಳಿಯಾಳ, ಯಲ್ಲಾಪುರ ಭಾಗದಲ್ಲಿ ದೊರೆತ ಸಿದ್ಧಿ ಮಕ್ಕಳನ್ನು ಪರೀಕ್ಷಿಸಿದ ವಿಜ್ಞಾನ ಕೇಂದ್ರದ ತಜ್ಞರು, ಆ ಮಕ್ಕಳ ಫಿಟ್ನೆಸ್‌ ಪರೀಕ್ಷೆ ನಡೆಸಿ ಅಥ್ಲೆಟಿಕ್ಸ್‌ಗೆ ಹೆಚ್ಚು ಸೂಕ್ತ ಎಂದು ವರದಿ ನೀಡಿತ್ತು. ಅದೇ ರೀತಿ ಎಲ್ಲೆಡೆ ಪ್ರತಿಭಾನ್ವೇಷಣೆ ವೇಳೆ ಮಕ್ಕಳ ಫಿಟ್ನೆಸ್‌ ಪರೀಕ್ಷೆ ನಡೆಸಿ, ಅವರ ದೇಹ ಸಾಮರ್ಥ್ಯದ ಬಗ್ಗೆ ತಿಳಿದುಕೊಂಡು ಅವರಿಗೆ ಯಾವ ಕ್ರೀಡೆಯಲ್ಲಿ ತರಬೇತಿ ನೀಡಬೇಕು ಎನ್ನುವುದನ್ನು ತಜ್ಞರ ತಂಡ ತಿಳಿಸಲಿದೆ.

ಸಿದ್ದಿ ಮಕ್ಕಳು ಪದಕ ಬೇಟೆಗೆ ಸಜ್ಜಾಗ್ತಿದ್ದಾರೆ

ಆರ್ಚರಿ, ಫೆನ್ಸಿಂಗ್‌ಗೆ ವಿಶೇಷ ತರಬೇತಿ: ಚಾಮರಾಜನಗರದ ಸಂತೆಮಾರನ ಹಳ್ಳಿ ಭಾಗದಲ್ಲಿನ ಸೋಲಿಗ, ಜೇನು ಕುರುಬರು ಬಿಲ್ಲುಗಾರಿಕೆ ಹಾಗೂ ಕತ್ತಿವರಸೆಯಂತಹ ಕ್ರೀಡೆಗಳಿಗೆ ಸೂಕ್ತ ಎನಿಸಿದ್ದಾರೆ. ಹೀಗಾಗಿ ಇಲ್ಲಿನ ಕ್ರೀಡಾ ಹಾಸ್ಟೆಲ್‌ನಲ್ಲಿ ಈ ಜನಾಂಗದ ಮಕ್ಕಳನ್ನು ಕ್ರೀಡೆಗೆ ಕರೆತಂದು ಹೆಚ್ಚಿನ ತರಬೇತಿ ನೀಡಲಾಗುತ್ತಿದೆ. ಈ ಎರಡು ಕ್ರೀಡೆಗಳಿಗೆ ಉನ್ನತ ಮಟ್ಟದ ತರಬೇತಿ ಕಲ್ಪಿಸಲಾಗಿದೆ. ಇಲ್ಲಿ ಈಗಾಗಲೇ ಫೆನ್ಸಿಂಗ್‌ (ಕತ್ತಿವರಸೆ)ನಲ್ಲಿ ಹಾಸ್ಟೆಲ್‌ನ 20 ಮಕ್ಕಳು ನಿರೀಕ್ಷಿತ ಪ್ರದರ್ಶನ ತೋರಿದ್ದಾರೆ. ಇನ್ನು ಆರ್ಚರಿಯಲ್ಲಿ ಹಾಸ್ಟೆಲ್‌ನ 18 ಮಕ್ಕಳು ತರಬೇತಿಯಲ್ಲಿ ನಿರತರಾಗಿದ್ದು ಅಂ.ರಾ. ಮಟ್ಟದಲ್ಲಿ ಸಾಧನೆ ಮಾಡುವ ಹಾದಿ ದೂರವಿಲ್ಲ ಎಂದು ಅಲ್ಲಿನ ತರಬೇತುದಾರರೊಬ್ಬರು ಹೇಳುತ್ತಾರೆ.

ಗ್ರಾಮೀಣಭಾಗದ ಪ್ರತಿಭೆಗಳನ್ನು ಗುರುತಿಸಿ ಅಂತಹವರಿಗೆ ಮುಖ್ಯ ಭೂಮಿಕೆ ಕಲ್ಪಿಸುವ ಸಲುವಾಗಿ ಪ್ರತಿಭಾನ್ವೇಷಣೆಯನ್ನು ರಾಜ್ಯಾದ್ಯಾಂತ ವಿಸ್ತರಿಸಲಾಗಿದ್ದು, ಮಕ್ಕಳಿಗೆ ವೈಜ್ಞಾನಿಕ ಪರೀಕ್ಷೆ ನಡೆಸಿ ಸೂಕ್ತ ಕ್ರೀಡೆಯಲ್ಲಿ ವಿಶೇಷ ತರಬೇತಿ ನೀಡಲಾಗುವುದು. ಈ ಮೂಲಕ ಕ್ರೀಡೆಯಲ್ಲಿ ರಾಜ್ಯದ ಮಹತ್ತರ ಬೆಳವಣಿಗೆ ಕಾಣುವ ಉದ್ದೇಶ ಹೊಂದಲಾಗಿದೆ. - ಕೆ. ಶ್ರೀನಿವಾಸ್‌, ಕ್ರೀಡಾ ಇಲಾಖೆ ಆಯುಕ್ತ