ವಿಂಬಲ್ಡನ್ ಗ್ರ್ಯಾನ್‌ಸ್ಲಾಂ: ವಿಶ್ವ ನಂ .1 ಸಿನ್ನರ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ
ವಿಶ್ವದ ನಂ.1 ಟೆನಿಸಿಗ ಯಾನಿಕ್ ಸಿನ್ನರ್ ವಿಂಬಲ್ಡನ್ ಗ್ರ್ಯಾನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಲಂಡನ್: ಟೆನಿಸ್ ಲೋಕದ ಹೊಸ ಸೂಪರ್‌ಸ್ಟಾರ್ ಎಂದೇ ಕರೆಸಿಕೊಳ್ಳುವ ವಿಶ್ವ ನಂಬರ್ 1 ಯಾನಿಕ್ ಸಿನ್ನರ್ ವಿಂಬಲ್ಡನ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ಕೂಡಾ ಅಂತಿಮ 8ರ ಘಟ್ಟ ತಲುಪಿದ್ದಾರೆ.
ಭಾನುವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಟಲಿಯ ಸಿನ್ನರ್, ಬ್ರಿಟನ್‌ನ 14ನೇ ಶ್ರೇಯಾಂಕಿತ ಬೆನ್ ಶೆಲ್ಟನ್ ವಿರುದ್ಧ 6-2, 6-4, 7-6(11-9) ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. ತಮ್ಮ ವೇಗದ ಸರ್ವ್ ಮೂಲಕವೇ ಹೊಸ ದಾಖಲೆ ಬರೆದಿದ್ದ 21 ವರ್ಷದ ಶೆಲ್ಟನ್, ಸಿನ್ನರ್‌ರ ಸೂಪರ್‌ಫಾಸ್ಟ್ ಆಟದ ಮುಂದೆ ನಿರುತ್ತರರಾದರು. 3ನೇ ಸೆಟ್‌ನಲ್ಲಿ ಪ್ರತಿರೋಧ ತೋರಲು ಸಾಧ್ಯವಾದರೂ, ಪಂದ್ಯವನ್ನು 4ನೇ ಸೆಟ್‌ಗೆ ಕೊಂಡೊಯ್ಯಲು ಬಿಡದ ಸಿನ್ನರ್ ಗೆಲುವನ್ನು ಒಲಿಸಿಕೊಂಡರು.
ಇದೇ ವೇಳೆ 5ನೇ ಶ್ರೇಯಾಂಕಿತ , ರಷ್ಯಾದ ಮೆಡ್ವೆಡೆವ್ ‘ವಾಕ್‌ಓವರ್’ ಪಡೆದು ಕ್ವಾರ್ಟರ್‌ಗೇರಿದರು. ಪ್ರಿ ಕ್ವಾರ್ಟರ್‌ನ ತಮ್ಮ ಎದುರಾಳಿ, ಬಲ್ಗೇರಿಯಾದ ಗ್ರಿಗೊರ್ ಡಿಮಿಟ್ರೊವ್ ಗಾಯದ ಕಾರಣದಿಂದಾಗಿ ಮೊದಲ ಸೆಟ್ ನಲ್ಲೇ ಪಂದ್ಯ ತೊರೆದರು. ಹೀಗಾಗಿ ಮೆಡ್ವೆಡೆವ್‌ಗೆ ಕ್ವಾರ್ಟರ್ ಅವಕಾಶ ಸಿಕ್ಕಿತು. ಕ್ವಾರ್ಟರ್‌ನಲ್ಲಿ 2021ರ ಯುಎಸ್ ಓಪನ್ ಚಾಂಪಿಯನ್ ಮೆಡ್ವೆಡೆವ್ ಹಾಗೂ ಹಾಲಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಸಿನ್ನರ್ ಪರಸ್ಪರ ಮುಖಾಮುಖಿಯಾಗಲಿದ್ದಾರೆ.
ಮತ್ತೊಂದೆಡೆ ಅಮೆರಿಕದ 12ನೇ ಶ್ರೇಯಾಂಕಿತ ಟಾಮಿ ಪೌಲ್, ಸ್ಪೇನ್‌ನ ರೊಬೊರ್ಟೊ ಬಾಟಿಸ್ಟಾ ವಿರುದ್ಧ ಗೆದ್ದು ಕ್ವಾರ್ಟರ್‌ಗೇರಿದರು. ಅವರಿಗೆ ಮುಂದಿನ ಸುತ್ತಿನಲ್ಲಿ ಹಾಲಿ ಚಾಂಪಿಯನ್ ಕಾರ್ಲೊಸ್ ಆಲ್ಕರಜ್ ಸವಾಲು ಎದುರಾಗಲಿದೆ.
ರಬೈಕೆನಾ ಕ್ವಾರ್ಟರ್‌ಗೆ; ಕೊಕೊ ಗಾಫ್ ಹೊರಕ್ಕೆ
ಮಹಿಳಾ ಸಿಂಗಲ್ಸ್‌ನಲ್ಲಿ 2022ರ ಚಾಂಪಿಯನ್, ಕಜಕಸ್ತಾನದ ಎಲೆನಾ ರಬೈಕೆನಾ ಕ್ವಾರ್ಟರ್ ಪ್ರವೇಶಿಸಿದರು. ಅಂತಿಮ 16ರ ಸುತ್ತಿನಲ್ಲಿ ತಮ್ಮ ಎದುರಾಳಿ ರಷ್ಯಾದ ಅನ್ನಾ ಕಲಿನ್ಸ್‌ಕಯಾ ಗಾಯಗೊಂಡು ಹೊರನಡೆದ ಕಾರಣ ರಬೈಕೆನಾ ಕ್ವಾರ್ಟರ್‌ಗೇರಿದರು.
ಅನ್ನಾ ಗಾಯಗೊಳ್ಳುವಾಗ ರಬೈಕೆನಾ 6-3, 3-0 ಅಂತರದಲ್ಲಿ ಮುಂದಿದ್ದರು. 21ನೇ ಶ್ರೇಯಾಂಕಿತ, ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ಅವರು ಚೀನಾದ ಶ್ರೇಯಾಂಕ ರಹಿತ ವ್ಯಾಂಗ್ ಕ್ಷಿನ್‌ಯು ವಿರುದ್ಧ 6-2, 6-1 ಅಂತರದಲ್ಲಿ ಗೆದ್ದು ಕ್ವಾರ್ಟರ್‌ಗೇರಿದರು. ಆದರೆ 2023ರ ಯುಎಸ್ ಓಪನ್ ಚಾಂಪಿಯನ್, ಅಮೆರಿಕದ 20 ವರ್ಷದ ಕೊಕೊ ಗಾಫ್ ಸೋತು ಹೊರಬಿದ್ದರು. ಅವರು ಪ್ರಿ ಕ್ವಾರ್ಟರ್‌ನಲ್ಲಿ ಅಮೆರಿಕದವರೇ ಆದ ಎಮ್ಮಾ ವಿರುದ್ಧ 4-6, 3-6 ಸೆಟ್‌ಗಳಲ್ಲಿ ಪರಾಭವಗೊಂಡರು.