ಫ್ರೆಂಚ್ ಓಪನ್: ಕ್ವಾರ್ಟರ್ಸ್’ಗೆ ಲಗ್ಗೆಯಿಟ್ಟ ಸೈನಾ-ಶ್ರೀಕಾಂತ್
ಹಾಲಿ ಚಾಂಪಿಯನ್ ಶ್ರೀಕಾಂತ್, ಕ್ವಾರ್ಟರ್ ಫೈನಲ್‌ನಲ್ಲಿ ಕಠಿಣ ಎದುರಾಳಿ ಜಪಾನಿನ ಕೆಂಟೊ ಮೊಮೊಟಾರನ್ನು ಎದುರಿಸಲಿದ್ದಾರೆ. ಶ್ರೀಕಾಂತ್, ಕಳೆದ ಎರಡೂ ಪಂದ್ಯಗಳಲ್ಲೂ ಮೊಮೊಟಾ ವಿರುದ್ಧ ಸೋಲನುಭವಿಸಿದ್ದಾರೆ.
ಪ್ಯಾರಿಸ್(ಅ.26]: ಭಾರತದ ತಾರಾ ಶಟ್ಲರ್‌ಗಳಾದ ಕಿದಂಬಿ ಶ್ರೀಕಾಂತ್ ಮತ್ತು ಸೈನಾ ನೆಹ್ವಾಲ್, ಇಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೇರಿದ್ದಾರೆ.
ಗುರುವಾರ ಪುರುಷರ ಸಿಂಗಲ್ಸ್‌ನಲ್ಲಿ ನಡೆದ ಪ್ರಿಕ್ವಾರ್ಟರ್‌ನಲ್ಲಿ ವಿಶ್ವ ನಂ.6 ಶ್ರೀಕಾಂತ್, ದಕ್ಷಿಣ ಕೊರಿಯಾದ ಲೀ ಡಾಂಗ್ ಕ್ಯೂನ್ ವಿರುದ್ಧ 21-12, 16-21, 18-21 ಗೇಮ್‌ಗಳ ಅಂತರದಿಂದ ಪರಾಭವಗೊಳಿಸಿ ಅಂತಿಮ 8ರ ಘಟ್ಟಕ್ಕೆ ಲಗ್ಗೆ ಇಟ್ಟರು. ಹಾಲಿ ಚಾಂಪಿಯನ್ ಶ್ರೀಕಾಂತ್, ಕ್ವಾರ್ಟರ್ ಫೈನಲ್‌ನಲ್ಲಿ ಕಠಿಣ ಎದುರಾಳಿ ಜಪಾನಿನ ಕೆಂಟೊ ಮೊಮೊಟಾರನ್ನು ಎದುರಿಸಲಿದ್ದಾರೆ. ಶ್ರೀಕಾಂತ್, ಕಳೆದ ಎರಡೂ ಪಂದ್ಯಗಳಲ್ಲೂ ಮೊಮೊಟಾ ವಿರುದ್ಧ ಸೋಲನುಭವಿಸಿದ್ದಾರೆ.
ಮಹಿಳಾ ಸಿಂಗಲ್ಸ್‌ನ ಪ್ರಿಕ್ವಾರ್ಟರ್‌ನಲ್ಲಿ ವಿಶ್ವ ನಂ.9 ಸೈನಾ ನೆಹ್ವಾಲ್, ಮಾಜಿ ವಿಶ್ವಚಾಂಪಿಯನ್ ಜಪಾನಿನ ನೊಜೋಮಿ ಓಕುಹಾರಾರನ್ನು 10-21, 21-14, 21-17 ಗೇಮ್‌ಗಳ ಅಂತರದಿಂದ ಪರಾಭವಗೊಳಿಸಿ ಕ್ವಾರ್ಟರ್‌ಗೆ ಲಗ್ಗೆ ಇಟ್ಟರು. ಸೈನಾ, ಕ್ವಾರ್ಟರ್‌ನಲ್ಲಿ ಚೈನೀಸ್ ತೈಪೆಯ ತೈ ಜು ಯಿಂಗ್‌ರನ್ನು ಎದುರಿಸಲಿದ್ದಾರೆ.