11ನೇ ಆವೃತ್ತಿಯ ಐಪಿಎಲ್ನಲ್ಲಿ ಸಾಧಾರಣ ಆರಂಭ ಕಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಡೇರ್'ಡೆವಿಲ್ಸ್ ತಂಡಗಳು ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.
ಉಭಯ ತಂಡಗಳು ಆಡಿರುವ ತಲಾ 4 ಪಂದ್ಯಗಳಲ್ಲಿ ಮೂರರಲ್ಲಿ ಸೋಲುಂಡಿದ್ದು ಗೆಲುವಿನ ಹುಡುಕಾಟದಲ್ಲಿವೆ. ಉಭಯ ತಂಡಗಳು ಸರ್ವಶ್ರೇಷ್ಠ ಆಟಗಾರರ ದಂಡನ್ನೇ ಹೊಂದಿದ್ದರೂ ಜಯಕ್ಕಾಗಿ ಪರದಾಡುತ್ತಿವೆ. ಆರ್'ಸಿಬಿಗೆ ಪ್ರತಿ ಬಾರಿಯಂತೆ ಈ ಬಾರಿಯೂ ಬೌಲಿಂಗ್'ನದ್ದೇ ಚಿಂತೆ. ಎಷ್ಟೇ ತೂಗಿ-ಅಳತೆ ಮಾಡಿ ಬೌಲರ್'ಗಳನ್ನು ಕಣಕ್ಕಿಳಿಸುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಕಳೆದ ಎರಡೂ ಪಂದ್ಯಗಳಲ್ಲಿ 200 ಪ್ಲಸ್ ಚಚ್ಚಿಸಿಕೊಂಡಿರುವುದೇ ಇದಕ್ಕೆ ಸಾಕ್ಷಿ.

ದುಬಾರಿ ಆಗುತ್ತಿರುವ ಬೌಲರ್‌ಗಳು: ಪಂದ್ಯದಿಂದ ಪಂದ್ಯಕ್ಕೆ ಬೌಲರ್‌'ಗಳು ದುಬಾರಿ ಆಗುತ್ತಿರುವುದು ನಾಯಕ ವಿರಾಟ್ ಕೊಹ್ಲಿಯ ನಿದ್ದೆ ಗೆಡಿಸಿದೆ. ಮೊದಲ ಪಂದ್ಯದಲ್ಲಿ ಕೋಲ್ಕತಾ ವಿರುದ್ಧ ಸೋಲುಂಡಿದ್ದ ತಂಡ, 2ನೇ ಪಂದ್ಯದಲ್ಲಿ ಪಂಜಾಬ್‌'ಗೆ ಸೋಲುಣಿಸಿ ಗೆಲುವಿನ ಹಾದಿ ಮರಳಿತ್ತು. ಆದರೆ, ರಾಜಸ್ಥಾನ ಹಾಗೂ ಮುಂಬೈ ವಿರುದ್ಧ ಸತತವಾಗಿ ಸೋಲುವ ಮೂಲಕ ಹತಾಶೆಗೊಂಡಿದೆ. ಉಮೇಶ್ ಯಾದವ್, ಕ್ರಿಸ್ ವೋಕ್ಸ್, ಆ್ಯಂಡರ್ಸನ್, ಸಿರಾಜ್, ವಾಷಿಂಗ್ಟನ್ ಸುಂದರ್ ಲಯ ಕಂಡುಕೊಳ್ಳುವಲ್ಲಿ ವಿಫಲರಾಗುತ್ತಿದ್ದು, ಎದುರಾಳಿಗಳ ಕೈಯಲ್ಲಿ ರನ್ ಚಚ್ಚಿಸಿಕೊಳ್ಳುತ್ತಿದ್ದಾರೆ. ಜೇಸನ್ ರಾಯ್, ಗೌತಮ್ ಗಂಭೀರ್, ರಿಷಬ್ ಪಂತ್, ಶ್ರೇಯಸ್ ಅಯ್ಯರ್, ಗ್ಲೆನ್ ಮ್ಯಾಕ್ಸ್‌'ವೆಲ್'ರಂತಹ ಘಟಾನುಘಟಿ ದಾಂಡಿಗರೇ ಡೆಲ್ಲಿ ಪಡೆಯಲ್ಲಿದ್ದು, ಇಂದಿನ ಪಂದ್ಯ ಆರ್‌'ಸಿಬಿ ಬೌಲರ್‌ಗಳ ಪಾಲಿಗೆ ಅಗ್ನಿಪರೀಕ್ಷೆ ಎನಿಸಿದೆ.

ಬ್ಯಾಟ್ಸ್‌'ಮನ್‌'ಗಳ ತಿಣುಕಾಟ: ವಿರಾಟ್ ಬೌಲಿಂಗ್‌ಗಿಂತ ಬ್ಯಾಟ್ಸ್‌'ಮನ್‌'ಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದು, ಟಾಸ್ ಗೆದ್ದ ತಕ್ಷಣ ಕ್ಷೇತ್ರರಕ್ಷಣೆ ಆಯ್ಕೆ ಮಾಡಿಕೊಳ್ಳುತ್ತಿರುವುದೇ ಇದಕ್ಕೆ ಸಾಕ್ಷಿ. ಆದರೆ, ಆರ್‌ಸಿಬಿಯ ಆಧಾರ ಸ್ತಂಭಗಳಾದ ಮೆಕ್ಕಲಂ, ಡಿವಿಲಿಯರ್ಸ್‌, ಡಿಕಾಕ್ ರನ್ ಬರ ಎದುರಿಸುತ್ತಿರುವುದು ತಂಡಕ್ಕೆ ನುಂಗಲಾರದ ತುತ್ತಾಗಿದೆ. ಸಮಾಧಾನದ ಸಂಗತಿಯೆಂದರೆ ವಿರಾಟ್ ಫಾರ್ಮ್‌ನಲ್ಲಿರುವುದು. ಮಧ್ಯಮ ಕ್ರಮಾಂಕದಲ್ಲಿ ಮನ್‌'ದೀಪ್ ಸಿಂಗ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆ್ಯಂಡರ್ಸನ್, ಸರ್ಫರಾಜ್ ಇಂದಾದರೂ ಸಿಡಿಯಬೇಕಿದೆ.

ಸಮಾನ ಮನಸ್ಸಿಗರು: ಆರ್‌ಸಿಬಿಯಂತೆ ಡೆಲ್ಲಿ ಸಹ ಗೆಲುವಿಗಾಗಿ ಹಪಹಪಿಸುತ್ತಿದ್ದು, ಇಂದಿನ ಪಂದ್ಯ ಸಮಾನ ಮನಸ್ಸಿಗರ ನಡುವಿನ ಹೋರಾಟವಾಗಿದೆ. ವೇಗದ ಬೌಲರ್‌ಗಳು ದುಬಾರಿ ಆಗುತ್ತಿರುವುದು, ಕಳಪೆ ಕ್ಷೇತ್ರರಕ್ಷಣೆ ಡೆಲ್ಲಿ ಸೋಲಿಗೆ ಪ್ರಮುಖ ಕಾರಣವಾಗುತ್ತಿದೆ. ರಿಶಬ್ ಪಂತ್, ರಾಯ್, ಮ್ಯಾಕ್ಸ್‌'ವೆಲ್ ಫಾರ್ಮ್‌'ನಲ್ಲಿದ್ದು, ಟ್ರೆಂಟ್ ಬೌಲ್ಟ್, ತೆವಾಟಿಯ ನಿಖರ ದಾಳಿ ನಡೆಸುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ.