ಚೀನಾ ಓಪನ್: ಕ್ವಾರ್ಟರ್‌ಗೆ ಸಿಂಧು, ಶ್ರೀಕಾಂತ್
2014ರಲ್ಲಿ ದಿಗ್ಗಜ ಲಿನ್ ಡಾನ್ ಸೋಲಿಸಿ ಚೀನಾ ಓಪನ್ ಗೆದ್ದಿದ್ದ ಶ್ರೀಕಾಂತ್, ಕ್ವಾರ್ಟರ್ ಫೈನಲ್‌ನಲ್ಲಿ ಏಷ್ಯನ್ ಗೇಮ್ಸ್ ಬೆಳ್ಳಿ ವಿಜೇತ ಚೈನೀಸ್ ತೈಪೆಯ ಚೊ ಟಿಯಾನ್ ಚೆನ್ ವಿರುದ್ಧ ಸೆಣಸಲಿದ್ದಾರೆ.
ಫುಝೌ(ಚೀನಾ): ಮಾಜಿ ಚಾಂಪಿಯನ್ನರಾದ ಭಾರತದ ಪಿ.ವಿ.ಸಿಂಧು ಹಾಗೂ ಕಿದಂಬಿ ಶ್ರೀಕಾಂತ್, ಇಲ್ಲಿ ನಡೆಯುತ್ತಿರುವ ಚೀನಾ ಓಪನ್ ವಿಶ್ವ ಟೂರ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಗುರುವಾರ ನಡೆದ ಮಹಿಳಾ ಸಿಂಗಲ್ಸ್ ಪ್ರಿ ಕ್ವಾರ್ಟರ್‌ನಲ್ಲಿ ಸಿಂಧು, ಥಾಯ್ಲೆಂಡ್‌ನ ಬುಸಾನನ್ ವಿರುದ್ಧ 21-12, 21-15 ಗೇಮ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು. 2016ರಲ್ಲಿ ಇಲ್ಲಿ ಪ್ರಶಸ್ತಿ ಗೆದ್ದಿದ್ದ ಸಿಂಧು, ಅಂತಿಮ 8ರ ಘಟ್ಟದ ಪಂದ್ಯದಲ್ಲಿ 8ನೇ ಶ್ರೇಯಾಂಕಿತೆ ಚೀನಾದ ಹೇ ಬಿಂಗ್‌ಜಿಯೋ ವಿರುದ್ಧ ಸೆಣಸಲಿದ್ದಾರೆ. ವಿಶ್ವ ನಂ.7 ಚೀನಾ ಆಟಗಾರ್ತಿ ವಿರುದ್ಧ ಸಿಂಧು 2 ಪಂದ್ಯಗಳನ್ನಾಡಿದ್ದು ಎರಡರಲ್ಲೂ ಸೋತಿದ್ದಾರೆ.
ಪುರುಷರ ಸಿಂಗಲ್ಸ್ 2ನೇ ಸುತ್ತಿನಲ್ಲಿ ಶ್ರೀಕಾಂತ್, ಇಂಡೋನೇಷ್ಯಾದ ಟಾಮಿ ಸುಗಿಯಾರ್ಟೋ ವಿರುದ್ಧ 10-21, 21-9, 21-9 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. 2014ರಲ್ಲಿ ದಿಗ್ಗಜ ಲಿನ್ ಡಾನ್ ಸೋಲಿಸಿ ಚೀನಾ ಓಪನ್ ಗೆದ್ದಿದ್ದ ಶ್ರೀಕಾಂತ್, ಕ್ವಾರ್ಟರ್ ಫೈನಲ್‌ನಲ್ಲಿ ಏಷ್ಯನ್ ಗೇಮ್ಸ್ ಬೆಳ್ಳಿ ವಿಜೇತ ಚೈನೀಸ್ ತೈಪೆಯ ಚೊ ಟಿಯಾನ್ ಚೆನ್ ವಿರುದ್ಧ ಸೆಣಸಲಿದ್ದಾರೆ. ಇದೇ ವೇಳೆ ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್-ಚಿರಾಗ್ ಶೆಟ್ಟಿಜೋಡಿ, ಇಂಡೋನೇಷ್ಯಾದ ಯೂಸುಫ್-ವಾಯ್ಯು ಜೋಡಿ ವಿರುದ್ಧ 16-21, 21-14, 21-15 ಗೇಮ್‌ಗಳಲ್ಲಿ ಗೆದ್ದು ಕ್ವಾರ್ಟರ್ ಫೈನಲ್‌ಗೇರಿದೆ.