Asianet Suvarna News Asianet Suvarna News

ಚೀನಾ ಓಪನ್‌: ಭಾರತದ ಸವಾಲು ಅಂತ್ಯ

ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ಫೈನಲ್‌ನಲ್ಲಿ ಮಾಜಿ ಚಾಂಪಿಯನ್‌ ಸಿಂಧು, ಚೀನಾದ ಹೆ ಬಿಂಗ್ಜಿಯೊ ವಿರುದ್ಧ 17-21, 21-17 15-21 ಗೇಮ್‌ಗಳಲ್ಲಿ ಸೋಲು ಕಂಡರು. ವಿಶ್ವ ನಂ.3 ಸಿಂಧು, ಮೊದಲ ಗೇಮ್‌ನಲ್ಲಿ ಹಿನ್ನಡೆ ಹೊಂದಿದರು. 

PV Sindhu Kidambi Srikanth Crash Out of China Open
Author
Fuzhou, First Published Nov 10, 2018, 10:11 AM IST

ಫುಝೌ(ಚೀನಾ): ಒಲಿಂಪಿಕ್‌ ಬೆಳ್ಳಿ ವಿಜೇತೆ ಪಿ.ವಿ. ಸಿಂಧು ಮತ್ತು ಕಿದಂಬಿ ಶ್ರೀಕಾಂತ್‌, ಇಲ್ಲಿ ನಡೆಯುತ್ತಿರುವ ಚೀನಾ ಓಪನ್‌ ವಿಶ್ವ ಟೂರ್‌ ಸೂಪರ್‌ ಬ್ಯಾಡ್ಮಿಂಟನ್‌ ಟೂರ್ನಿಯ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲುಂಡು ಹೊರಬಿದ್ದಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಭಾರತದ ಸಾತ್ವಿಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿಜೋಡಿ ಪರಾಭವ ಹೊಂದಿದೆ. ಈ ಮೂಲಕ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯವಾಗಿದೆ.

ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ಫೈನಲ್‌ನಲ್ಲಿ ಮಾಜಿ ಚಾಂಪಿಯನ್‌ ಸಿಂಧು, ಚೀನಾದ ಹೆ ಬಿಂಗ್ಜಿಯೊ ವಿರುದ್ಧ 17-21, 21-17 15-21 ಗೇಮ್‌ಗಳಲ್ಲಿ ಸೋಲು ಕಂಡರು. ವಿಶ್ವ ನಂ.3 ಸಿಂಧು, ಮೊದಲ ಗೇಮ್‌ನಲ್ಲಿ ಹಿನ್ನಡೆ ಹೊಂದಿದರು. ಆದರೆ 2ನೇ ಗೇಮ್‌ನಲ್ಲಿ ಚೀನಾ ಶಟ್ಲರ್‌ಗೆ ಸಿಂಧು ತಿರುಗೇಟು ನೀಡಿದರು. ನಿರ್ಣಾಯಕ ಗೇಮ್‌ನಲ್ಲಿ ಚೀನಾ ಶಟ್ಲರ್‌ ಮುನ್ನಡೆಯೊಂದಿಗೆ ಪ್ರಾಬಲ್ಯ ಸಾಧಿಸಿ ಪಂದ್ಯ ಗೆದ್ದರು. ಬಿಂಗ್ಜಿಯೊ ಎದುರು ಸಿಂಧುಗೆ ಇದು ಸತತ 3ನೇ ಸೋಲಾಗಿದೆ. ಈ ವರ್ಷದ ಜುಲೈ ಮತ್ತು ಅಕ್ಟೋಬರ್‌ನಲ್ಲಿ ಕ್ರಮವಾಗಿ ಇಂಡೋನೇಷ್ಯಾ ಓಪನ್‌ ಹಾಗೂ ಫ್ರೆಂಚ್‌ ಓಪನ್‌ನಲ್ಲಿ ಸಿಂಧು, ಬಿಂಗ್ಜಿಯೊ ವಿರುದ್ಧ ಸೋತಿದ್ದರು.

ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ನಲ್ಲಿ ಶ್ರೀಕಾಂತ್‌, ತೈವಾನ್‌ನ ಚೌ ಟೀನ್‌ ಚೆನ್‌ ಎದುರು 14-21, 14-21 ನೇರ ಗೇಮ್‌ಗಳಲ್ಲಿ ಸೋತರು. ಮೊದಲ ಗೇಮ್‌ನ ಆರಂಭದಲ್ಲಿ ಶ್ರೀಕಾಂತ್‌ 10-8 ರಿಂದ ಮುನ್ನಡೆ ಸಾಧಿಸಿದ್ದರು. ನಂತರದ ಅವಧಿಯಲ್ಲಿ ತೈವಾನ್‌ ಆಟಗಾರ ಮುನ್ನಡೆ ಪಡೆದು, ಶ್ರೀಕಾಂತ್‌ರನ್ನು ಹಿಂದಿಕ್ಕಿದರು. 2ನೇ ಗೇಮ್‌ನಲ್ಲಿ ಶ್ರೀಕಾಂತ್‌ 4-10 ರಿಂದ ಹಿಂದೆ ಬಿದ್ದರು. ಅಂತಿಮವಾಗಿ ಚೆನ್‌ ಮುನ್ನಡೆ ಸಾಧಿಸಿ ಪಂದ್ಯ ಗೆದ್ದರು.

ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್‌ ಮತ್ತು ಚಿರಾಗ್‌ ಶೆಟ್ಟಿಜೋಡಿ, 2 ಬಾರಿ ವಿಶ್ವ ಚಾಂಪಿಯನ್‌ ಹಾಗೂ ವಿಶ್ವ ನಂ.14 ಇಂಡೋನೇಷ್ಯಾದ ಅಹ್ಸಾನ್‌ ಮತ್ತು ಹೇಂದ್ರ ಸೆತಿವಾನ್‌ ಜೋಡಿ ವಿರುದ್ಧ 11-21, 21-16, 12-21 ಗೇಮ್‌ಗಳಲ್ಲಿ ಸೋಲು ಕಂಡರು.

Follow Us:
Download App:
  • android
  • ios