ಗುವಾಂಗ್ಝು (ಚೀನಾ): ಇಲ್ಲಿ ನಡೆಯುತ್ತಿರುವ ವಿಶ್ವ ಬ್ಯಾಡ್ಮಿಂಟನ್ ಟೂರ್ ಫೈನಲ್ಸ್‌ನಲ್ಲಿ ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ. ಸಿಂಧು ಮತ್ತು ಸಮೀರ್ ವರ್ಮಾ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ ಮಹಿಳಾ ವಿಭಾಗದ ‘ಎ’ ಗುಂಪಿನ ತನ್ನ 3ನೇ ಪಂದ್ಯದಲ್ಲಿ ಸಿಂಧು, ಅಮೆರಿಕದ ಬೀವೆನ್ ಜಾಂಗ್ ವಿರುದ್ಧ 21-09, 21-15 ಗೇಮ್‌ಗಳಿಂದ ಗೆಲುವು ಸಾಧಿಸಿದರು. ಆಡಿರುವ 3 ಪಂದ್ಯಗಳಲ್ಲಿ ಜಯಭೇರಿ ಬಾರಿಸಿರುವ ಸಿಂಧು ಅಗ್ರಸ್ಥಾನದೊಂದಿಗೆ ಸೆಮೀಸ್‌ಗೇರಿದರು. ಇಂದು ನಡೆಯುವ ಸೆಮೀಸ್‌ನಲ್ಲಿ ಸಿಂಧು, ಥಾಯ್ಲೆಂಡ್‌ನ ರಚನಾಕ್ ಇಂಟಾನಾನ್ ಎದುರು ಸೆಣಸಲಿದ್ದಾರೆ. 

ಪುರುಷರ ಸಿಂಗಲ್ಸ್‌ನ ‘ಬಿ’ ಗುಂಪಿನ ಪಂದ್ಯದಲ್ಲಿ ಸಮೀರ್ ವರ್ಮಾ, ಥಾಯ್ಲೆಂಡ್‌ನ ಕಂಟಫೊನ್ ವಾಂಗ್ಚರನ್ ವಿರುದ್ಧ 21-09, 21-18 ಗೇಮ್’ಗಳಲ್ಲಿ ಗೆಲುವು ಪಡೆದರು. ಕೇವಲ 44 ನಿಮಿಷಗಳ ಆಟದಲ್ಲಿ ಸಮೀರ್, ಥಾಯ್ಲೆಂಡ್‌ನ ಶಟ್ಲರ್‌ನ್ನು ಮಣಿಸಿದರು. ಸೆಮಿಫೈನಲ್‌ನಲ್ಲಿ ಸಮೀರ್, ಚೀನಾದ ಶೀ ಯೂಕಿ ಅವರನ್ನು ಎದುರಿಸಲಿದ್ದಾರೆ.