Pro Kabaddi League: ತಮಿಳ್ ತಲೈವಾಸ್ ಬಗ್ಗುಬಡಿದ ಬೆಂಗಳೂರು ಬುಲ್ಸ್ ಮತ್ತೆ ನಂ.1
ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಮತ್ತೆ ನಂ.1 ಸ್ಥಾನಕ್ಕೆ ಲಗ್ಗೆಯಿಟ್ಟ ಬೆಂಗಳೂರು ಬುಲ್ಸ್
ಟೂರ್ನಿಯಲ್ಲಿ ಎಂಟನೇ ಗೆಲುವು ಸಾಧಿಸಿ ಬೀಗಿದ ಬುಲ್ಸ್ ಪಡೆ
ತಮಿಳ್ ತಲೈವಾಸ್ ಎದುರು 6 ಅಂಕಗಳ ರೋಚಕ ಜಯ
ಪುಣೆ(ನ.14): ಪ್ರೊ ಕಬಡ್ಡಿ 9ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ಮತ್ತೊಮ್ಮೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಭಾನುವಾರ ತಮಿಳ್ ತಲೈವಾಸ್ ವಿರುದ್ಧ 40-34 ಅಂಕಗಳ ಅಂತರದಲ್ಲಿ ರೋಚಕ ಗೆಲುವು ಸಾಧಿಸಿದ ಬುಲ್ಸ್, ಈ ಆವೃತ್ತಿಯಲ್ಲಿ 8ನೇ ಜಯ ದಾಖಲಿಸಿ 46 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆಯಿತು.
ಯುವ ರೈಡರ್ ಭರತ್ 14 ಅಂಕ ಗಳಿಸಿ ಮತ್ತೊಮ್ಮೆ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಂದ್ಯದ ಆರಂಭದಲ್ಲೇ ಅಬ್ಬರಿಸಿದ ಬುಲ್ಸ್ 5ನೇ ನಿಮಿಷದಲ್ಲೇ ತಲೈವಾಸ್ ಪಡೆಯನ್ನು ಆಲೌಟ್ ಮಾಡಿ 9-3ರ ಮುನ್ನಡೆ ಪಡೆಯಿತು. ಆದರೆ ಪುಟಿದೆದ್ದ ತಲೈವಾಸ್ 17ನೇ ನಿಮಿಷದಲ್ಲಿ ಬೆಂಗಳೂರನ್ನು ಆಲೌಟ್ ಮಾಡಿ, ಮೊದಲಾರ್ಧದ ಮುಕ್ತಾಯಕ್ಕೆ 19-18ರ ಅಲ್ಪ ಮುನ್ನಡೆ ಸಾಧಿಸಿತು.
ದ್ವಿತೀಯಾರ್ಧವನ್ನು ಉತ್ತಮವಾಗಿ ಆರಂಭಿಸಿದ ಬುಲ್ಸ್ 28ನೇ ನಿಮಿಷದಲ್ಲಿ ಮತ್ತೊಮ್ಮೆ ತಲೈವಾಸ್ ಅನ್ನು ಆಲೌಟ್ ಮಾಡಿತು. ಕೊನೆ 5 ನಿಮಿಷ ರೋಚಕ ಹಣಾಹಣಿಗೆ ಸಾಕ್ಷಿಯಾಯಿತು. ಆಲೌಟ್ ಆಗುವುದನ್ನು ತಪ್ಪಿಸಿಕೊಳ್ಳುವುದರ ಜೊತೆಗೆ ಎಚ್ಚರಿಕೆಯ ಆಟವಾಡಿ ಅಂಕ ಗಳಿಕೆಯಲ್ಲಿ ಹಿಂದೆ ಬೀಳದ ಬುಲ್ಸ್ ಗೆಲುವನ್ನು ಒಲಿಸಿಕೊಂಡಿತು.
ದಿನದ ಮೊದಲ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ವಿರುದ್ಧ ಯು ಮುಂಬಾ 36-23 ಅಂಕಗಳಲ್ಲಿ ಗೆದ್ದು ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿತು.
ಇಂದಿನ ಪಂದ್ಯಗಳು:
ಬೆಂಗಾಲ್-ಪುಣೇರಿ, ಸಂಜೆ 7.30ಕ್ಕೆ
ಗುಜರಾತ್-ಹರ್ಯಾಣ, ರಾತ್ರಿ 8.30ಕ್ಕೆ
ಶೂಟಿಂಗ್: ರಾಜ್ಯದ ತಿಲೋತ್ತಮಗೆ ಚಿನ್ನ
ನವದೆಹಲಿ: ಕೊರಿಯಾದ ದೇಗುನಲ್ಲಿ ನಡೆಯುತ್ತಿರುವ ಏಷ್ಯನ್ ಏರ್‌ಗನ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ತಿಲೋತ್ತಮ ಸೇನ್ 2ನೇ ಚಿನ್ನದ ಪದಕ ಗೆದ್ದಿದ್ದಾರೆ. ಭಾನುವಾರ ಕಿರಿಯರ ವಿಭಾಗದ 10 ಮೀ. ಏರ್ ರೈಫಲ್ ತಂಡ ವಿಭಾಗದಲ್ಲಿ ತಿಲೋತ್ತಮ, ರಮಿತಾ ಹಾಗೂ ನ್ಯಾನ್ಸಿ ಅವರನ್ನೊಳಗೊಂಡ ಭಾರತ ತಂಡ ಫೈನಲ್‌ನಲ್ಲಿ ಕೊರಿಯಾವನ್ನು 16-2ರಿಂದ ಸೋಲಿಸಿತು. 10 ಮೀ. ಏರ್ ರೈಫಲ್‌ನ ವೈಯಕ್ತಿಕ ವಿಭಾಗದಲ್ಲೂ ತಿಲೋತ್ತಮ ಚಿನ್ನದ ಪದಕ ಜಯಿಸಿದ್ದರು.
Pro Kabaddi League: ಸತತ 10ನೇ, ಒಟ್ಟಾರೆ 12ನೇ ಸೋಲು ಕಂಡ ಟೈಟಾನ್ಸ್!
ಅಥ್ಲೆಟಿಕ್ಸ್: ರಾಜ್ಯದ ಉನ್ನತಿಗೆ ಸ್ವರ್ಣ
ಗುವಾಹಟಿ: ಇಲ್ಲಿ ನಡೆಯುತ್ತಿರುವ 37ನೇ ರಾಷ್ಟ್ರೀಯ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕಕ್ಕೆ ಮತ್ತೊಂದು ಚಿನ್ನದ ಪದಕ ದೊರೆತಿದೆ. ಅಂಡರ್-18 ಮಹಿಳೆಯರ 100 ಮೀ. ಹರ್ಡಲ್ಸ್ ಸ್ಪರ್ಧೆಯಲ್ಲಿ ಉನ್ನತಿ ಅಯ್ಯಪ್ಪ 13.94 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರು. ಒಡಿಶಾದ ಸಬಿತಾ(14.16 ಸೆಕೆಂಡ್), ತಮಿಳುನಾಡಿನ ಶಿನಿ(14.64) ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನ ಪಡೆದರು. ಕೂಟದಲ್ಲಿ ಕರ್ನಾಟಕ ಈ ವರೆಗೂ 3 ಚಿನ್ನ, 1 ಕಂಚಿನ ಪದಕ ಜಯಿಸಿದೆ.