ಬೆಂಗಳೂರಲ್ಲಿ ಪ್ರೊ ಕಬಡ್ಡಿ ಆಯೋಜನೆಗೆ ಶತಪ್ರಯತ್ನ..!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 6, Aug 2018, 4:06 PM IST
Pro Kabaddi is Going to be held in Bengaluru
Highlights

ಈ ವರ್ಷದ ಅಕ್ಟೋಬರ್ 5ರಿಂದ 2019ರ ಜನವರಿ 5ವರೆಗೆ 13 ವಾರಗಳ ಕಾಲ ನಡೆಯಲಿರುವ ಜನಪ್ರಿಯ ಪ್ರೊ ಕಬಡ್ಡಿ ಲೀಗ್ ಪಂದ್ಯಾವಳಿಯಲ್ಲಿ ಕಳೆದ ಬಾರಿಯಂತೆ ಈ ಸಲವೂ 12 ತಂಡಗಳು ಪಾಲ್ಗೊಳ್ಳಲಿವೆ.

ಬೆಂಗಳೂರು[ಆ.06]: ಕಳೆದ ಬಾರಿ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಬಾಸ್ಕೆಟ್‌ಬಾಲ್ ಪಂದ್ಯಾವಳಿಯೊಂದು ಆಯೋಜನೆಗೊಂಡ ಕಾರಣ ಮಹಾರಾಷ್ಟ್ರದ ನಾಗಪುರಕ್ಕೆ ಸ್ಥಳಾಂತರಗೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದ್ದ ಪ್ರೊ ಕಬಡ್ಡಿಯ ಬೆಂಗಳೂರು ಚರಣ ಈ ಬಾರಿ ಬೆಂಗಳೂರಲ್ಲೇ ನಡೆಯುತ್ತಾ? ಹೀಗೊಂದು ಪ್ರಶ್ನೆಗೆ ಸದ್ಯದ ಮಟ್ಟಿಗೆ ಸಿಗುವ ಉತ್ತರ - ಬೆಂಗಳೂರಲ್ಲೇ ನಡೆಸಲು ನಡೆದಿರುವ ಪ್ರಯತ್ನ ಫಲ ನೀಡಿದರೆ, ಕಂಠೀರವದಲ್ಲೇ ಪಂದ್ಯಾವಳಿ ನಡೆಯುವುದು ಬಹುತೇಕ ಖಚಿತ!

ಈ ವರ್ಷದ ಅಕ್ಟೋಬರ್ 5ರಿಂದ 2019ರ ಜನವರಿ 5ವರೆಗೆ 13 ವಾರಗಳ ಕಾಲ ನಡೆಯಲಿರುವ ಜನಪ್ರಿಯ ಪ್ರೊ ಕಬಡ್ಡಿ ಲೀಗ್ ಪಂದ್ಯಾವಳಿಯಲ್ಲಿ ಕಳೆದ ಬಾರಿಯಂತೆ ಈ ಸಲವೂ 12 ತಂಡಗಳು ಪಾಲ್ಗೊಳ್ಳಲಿವೆ. ನಾಕೌಟ್ ಹಂತಕ್ಕೆ ಮುನ್ನ ಆಯಾ ತಂಡಗಳು ಒಂದೊಂದು ವಾರ ಪಂದ್ಯಗಳ ಆತಿಥ್ಯ ವಹಿಸಲಿವೆ. ಅಂತೆಯೇ, ಬೆಂಗಳೂರು ಬುಲ್ಸ್ ಕೂಡ ಬೆಂಗಳೂರಿನಲ್ಲಿ ಒಂದು ವಾರದ ಪಂದ್ಯಗಳನ್ನು ಆಯೋಜಿಸಬೇಕಿದೆ. ಈ ಬಾರಿ ಕಂಠೀರವದಲ್ಲೇ ನಡೆಸಲು ಬುಲ್ಸ್ ತಂಡದ ಮಾಲೀಕರು, ಪ್ರೊ ಕಬಡ್ಡಿ ಆಯೋಜಕರಾದ ಮಶಾಲ್ ಸ್ಪೋರ್ಟ್ಸ್ ಸಂಸ್ಥೆ, ಪ್ರಸಾರ ಹಕ್ಕು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್‌ನ ಅಧಿಕಾರಿಗಳು ಶತಪ್ರಯತ್ನ ನಡೆಸುತ್ತಿದ್ದಾರೆ.

ಎಚ್ಚೆತ್ತ ಬುಲ್ಸ್: ಕಳೆದ ಬಾರಿ ಕಂಠೀರವ ಒಳಾಂಗಣ ಸಿಗದೆ ಕಡೇಕ್ಷಣದಲ್ಲಿ ಪಂದ್ಯಗಳು ಸ್ಥಳಾಂತರಗೊಂಡ ಕಾರಣ, ಬೆಂಗಳೂರು ಬುಲ್ಸ್ ಭಾರೀ ಸಮಸ್ಯೆ ಎದುರಿಸಿತ್ತು. ಎರಡು ವಾರಕ್ಕೂ ಕಡಿಮೆ ಸಮಯದಲ್ಲಿ ನಾಗ್ಪುರದಲ್ಲಿ ಪ್ರತಿಯೊಂದು ಸೌಲಭ್ಯ ಒದಗಿಸಲು ಇನ್ನಿಲ್ಲದ ಶ್ರಮ ವಹಿಸಬೇಕಾಗಿತ್ತು. ಹೀಗಾಗಿ, ಈ ಬಾರಿ ತಂಡ ಮುಂಚಿತವಾಗಿಯೇ ಎಚ್ಚೆತ್ತುಕೊಂಡಿದೆ. ಬುಲ್ಸ್ ತಂಡದ ಮಾಲೀಕರು ಹಾಗೂ ಅಧಿಕಾರಿಗಳು ರಾಜ್ಯ ಕ್ರೀಡಾ ಇಲಾಖೆಯನ್ನು ಸಂಪರ್ಕಿಸಿ ಅಗತ್ಯವಿರುವ ಅನುಮತಿ ಪತ್ರ ಪಡೆದುಕೊಳ್ಳಲು ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.

ಇದನ್ನು ಓದಿ: ಪ್ರೊ ಕಬಡ್ಡಿ ಲೀಗ್ ವೇಳಾಪಟ್ಟಿ ಬದಲು

ಪರಂ ಗ್ರೀನ್ ಸಿಗ್ನಲ್?: ಈ ಬಾರಿ ಬೆಂಗಳೂರಲ್ಲೇ ಪ್ರೊ ಕಬಡ್ಡಿ ಪಂದ್ಯಗಳನ್ನು ನಡೆಸಲು ಅನುಮತಿ ನೀಡುವಂತೆ ಕ್ರೀಡಾ ಖಾತೆಯನ್ನೂ ಹೊಂದಿರುವ ರಾಜ್ಯದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮೌಖಿಕ ಆದೇಶ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಆದರೆ, ಈ ಕುರಿತು ಪ್ರತಿಕ್ರಿಯೆ ಬಯಸಿ ಕ್ರೀಡಾ ಇಲಾಖೆಯ ಉನ್ನತ ಅಧಿಕಾರಿಗಳನ್ನು ‘ಕನ್ನಡಪ್ರಭ’ ಸಂಪರ್ಕಿಸಿದಾಗ, ‘ಅನುಮತಿ ಕೋರಿ ಯಾರೂ ಸಹ ತಮ್ಮನ್ನು ಸಂಪರ್ಕಿಸಿಲ್ಲ. ಯಾರಿಂದಲೂ ಶಿಫಾರಸು ಬಂದಿಲ್ಲ’ ಎಂದಿದ್ದಾರೆ.

ಇದನ್ನು ಓದಿ: PKL6: ಹರಾಜಿನ ಬಳಿಕ ಪ್ರೊಕಬಡ್ಡಿ ಲೀಗ್‌ನ 12 ತಂಡಗಳು ಹೇಗಿದೆ ಗೊತ್ತಾ?

ಬಾಸ್ಕೆಟ್‌ಬಾಲ್ ಬಳಿಕ ಕಬಡ್ಡಿ?: ಕಳೆದ ವರ್ಷದಂತೆ ಈ ಬಾರಿಯೂ ಕಂಠೀರವದಲ್ಲಿ ಬಾಸ್ಕೆಟ್‌ಬಾಲ್ ಟೂರ್ನಿಯೊಂದು ಆಯೋಜನೆ ಆಗುವ ಮಾಹಿತಿ ಇದೆ. ಅಕ್ಟೋಬರ್ ಮೊದಲ ವಾರ ಇಲ್ಲವೇ ಕೊನೆ ವಾರದಲ್ಲಿ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಏಷ್ಯನ್ ಬಾಸ್ಕೆಟ್‌ಬಾಲ್ ಟೂರ್ನಿ ನಿಗದಿಯಾಗುವ ಸಾಧ್ಯತೆ ಇದೆ ಎನ್ನುವ ಮಾಹಿತಿ ದೊರೆತಿದೆ. 6ನೇ ಆವೃತ್ತಿಯ ಪ್ರೊ ಕಬಡ್ಡಿ ಅಕ್ಟೋಬರ್ 5ರಿಂದ ಆರಂಭಗೊಂಡರೂ, ಒಟ್ಟು 13 ವಾರಗಳ ಕಾಲ ನಡೆಯಲಿದೆ. ಫೈನಲ್ ಪಂದ್ಯ ನಿಗದಿಯಾಗಿರುವುದು 2019ರ ಜನವರಿ 5ರಂದು. ಹೀಗಾಗಿ, ನವೆಂಬರ್ ಇಲ್ಲವೇ ಡಿಸೆಂಬರ್ ಮೊದಲ ವಾರದವರೆಗೂ ಲೀಗ್ ಹಂತದ ಪಂದ್ಯಗಳು ನಡೆಯಲಿವೆ. ಈ 2 ತಿಂಗಳಲ್ಲಿ ಬೆಂಗಳೂರು ಚರಣವನ್ನು ನಡೆಸಿದರೆ, ಬಾಸ್ಕೆಟ್‌ಬಾಲ್ ಟೂರ್ನಿ ತಮಗೆ ಅಡ್ಡಿಯಾಗುವುದಿಲ್ಲ ಎನ್ನುವ ಲೆಕ್ಕಾಚಾರ ಪ್ರೊ ಕಬಡ್ಡಿ ಆಯೋಜಕರದ್ದಾಗಿದೆ.
ಕಳೆದ ಆವೃತ್ತಿಯಲ್ಲಿ ಬುಲ್ಸ್ ಪಂದ್ಯಗಳು ಸ್ಥಳಾಂತರಗೊಂಡಿದ್ದು, ರಾಜ್ಯದ ಕಬಡ್ಡಿ ಅಭಿಮಾನಿಗಳಿಗೆ ಭಾರೀ ನಿರಾಸೆ ಉಂಟು ಮಾಡಿತ್ತು. ಬೆಂಗಳೂರು ಬುಲ್ಸ್ ತಂಡದ ಆಡಳಿತ ಹಾಗೂ ರಾಜ್ಯದ ಕಬಡ್ಡಿ ಕ್ರೀಡಾಭಿಮಾನಿಗಳು ಈ ವರ್ಷ ಕಂಠೀರವದಲ್ಲೇ ಪಂದ್ಯಗಳು ನಡೆಯಲಿದೆ ಎನ್ನುವ ವಿಶ್ವಾಸದಲ್ಲಿದ್ದಾರೆ. ಸದ್ಯದ ಮಟ್ಟಿಗೆ ಬೆಂಗಳೂರು ಕಬಡ್ಡಿ ಪಂದ್ಯಗಳಿಗೆ ಆತಿಥ್ಯ ವಹಿಸುವ ಲಕ್ಷಣ ತೋರುತ್ತಿದೆ.

ಇದನ್ನು ಓದಿ: PKL6:ಬೆಂಗಳೂರು ಬುಲ್ಸ್ ತಂಡದಲ್ಲಿರುವ ಕನ್ನಡಿಗರೆಷ್ಟು?

ಹೆಚ್ಚು ಬಾಡಿಗೆ ಕೇಳಿದರೂ ಕಟ್ಟಲು ಬುಲ್ಸ್ ತಂಡ ಸಿದ್ಧ?

ಮುಂಬೈನಲ್ಲಿ ಕ್ರೀಡಾಂಗಣಕ್ಕೆ ಹೆಚ್ಚು ಬಾಡಿಗೆ ನಿಗದಿ ಪಡಿಸಿದ ಕಾರಣ, ಈ ವರ್ಷ ಯು ಮುಂಬಾ ತಂಡದ ತವರು ಪಂದ್ಯಗಳು ನಾಸಿಕ್‌ಗೆ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ. ಅದೇ ರೀತಿ ಬೆಂಗಳೂರು ಬುಲ್ಸ್‌ಗೂ ಬಾಡಿಗೆ ಸಮಸ್ಯೆ ಎದುರಾಗಬಹುದು. ಆದರೆ ಹೆಚ್ಚು ಬಾಡಿಗೆ ಕಟ್ಟಬೇಕಾದ ಪರಿಸ್ಥಿತಿ ಎದುರಾದರೂ ಅದನ್ನು ನಿಭಾಯಿಸಲು ತಂಡ ಸಿದ್ಧವಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ವರದಿ: ಧನಂಜಯ್ ಎಸ್ ಹಕಾರಿ, ಕನ್ನಡಪ್ರಭ

loader