ಚೆನ್ನೈ[ಅ.07]: ಪ್ರೊ ಕಬಡ್ಡಿ ಆರನೇ ಆವೃತ್ತಿಯ ಎರಡನೇ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯವಾಯಿತು. ಯು ಮುಂಬಾ-ಪುಣೇರಿ ಪಲ್ಟಾನ್ಸ್ ನಡುವಿನ ಪಂದ್ಯ 32-32 ಅಂಕಗಳ ಸಮಬಲದೊಂದಿಗೆ ಪಂದ್ಯ ಮುಕ್ತಾಯವಾಯಿತು.

ಆರಂಭದಿಂದಲೂ ಉಭಯ ತಂಡಗಳು ರೋಚಕ ಕಾದಾಟ ನಡೆಸಿದವು. ಮೊದಲಾರ್ಧದ ಏಳನೇ ನಿಮಿಷದಲ್ಲಿ ಎರಡು ತಂಡಗಳು 11-11ರ ಸಮಬಲ ಸಾಧಿಸಿದ್ದವು. ಇದಾದ ಕೆಲಹೊತ್ತಿನಲ್ಲಿ ಸಿದ್ದಾರ್ಥ್ ದೇಸಾಯಿ ಮಿಂಚಿನ ದಾಳಿಯ ನೆರವಿನಿಂದ ಯು ಮುಂಬಾ ಅಲ್ಪ ಮುನ್ನಡೆ ಸಾಧಿಸಿತು. ಆದರೆ ರಾಜೇಶ್ ಮೊಂಡಾಲ್ ಅಂತರವನ್ನು ಮತ್ತೆ ತಗ್ಗಿಸಿದರು. ಮೊದಲಾರ್ಧ ಮುಕ್ತಾಯದ ವೇಳೆಗೆ ಯು ಮುಂಬಾ 20-18 ಅಂಕಗಳ ಮುನ್ನಡೆ ಕಾಯ್ದುಕೊಂಡಿತು.

ಇನ್ನು ದ್ವಿತಿಯಾರ್ಧದಲ್ಲೂ ಇತ್ತಂಡಗಳಿಂದ ಆಕ್ರಮಣಕಾರಿ ಪ್ರದರ್ಶನ ಮೂಡಿಬಂತು. ಪರಿಣಾಮವಾಗಿ ಪಂದ್ಯದ 30ನೇ ನಿಮಿಷದಲ್ಲಿ ಯು ಮುಂಬಾ 2 ಅಂಕಗಳ ಮುನ್ನಡೆ ಕಾಯ್ದುಕೊಂಡಿತು. ಪಂದ್ಯದ ಕೊನೆಯ ನಿಮಿಷದವರೆಗೂ ಮೊನು ಯಶಸ್ವಿ ರೈಡ್ ಮೂಲಕ 31-32ಕ್ಕೆ ಅಂತರವನ್ನು ತಗ್ಗಿಸಿದರು. ಇದರ ಬೆನ್ನಲ್ಲೇ ಸಿದ್ದಾರ್ಥ್ ದೇಸಾಯಿಯನ್ನು ಟ್ಯಾಕಲ್ ಮಾಡಿದ ಪುಣೇರಿ ತಂಡ ಕೊನೆಗೂ ರೋಚಕ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಯಿತು. 

ಪುಣೇರಿ ಪಲ್ಟಾನ್ ಪರ ನಿತಿನ್ ತೋಮರ್ ಹಾಗೂ ಸಿದ್ದಾರ್ಥ್ ದೇಸಾಯಿ ತಲಾ 15 ಅಂಕ ಪಡೆದರು.