ನವದೆಹಲಿ[ಡಿ.03]: ಪ್ರಸಕ್ತ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಬಲಿಷ್ಠ ತಂಡವೆನಿಸಿಕೊಂಡಿರುವ ಯು ಮುಂಬಾ ಕೊನೆಗೂ ಗುಜರಾತ್ ಎದುರು ಗೆಲುವಿನ ನೆಗೆ ಬೀರಿದೆ. ಫಾರ್ಚ್ಯೂನ್’ಜೈಂಟ್ಸ್ ಎದುರು ಸಂಘಟಿತ ಪ್ರದರ್ಶನ ತೋರಿದ ಫಜಲ್ ಅಟ್ರಾಚಲಿ ನೇತೃತ್ವದ ಯು ಮುಂಬಾ 36-26 ಅಂಕಗಳಿಂದ ಗೆಲುವಿನ ನಗೆ ಬೀರಿತು. ಈ ಗೆಲುವಿನೊಂದಿಗೆ ಯು ಮುಂಬಾ ಅಗ್ರಸ್ಥಾನವನ್ನು ಮತ್ತೊಮ್ಮೆ ಭದ್ರಪಡಿಸಿಕೊಂಡಿತು.

ಪಂದ್ಯದ ಆರಂಭದಿಂದಲೇ ಯು ಮುಂಬಾ ಆಕ್ರಮಣಕಾರಿಯಾಟಕ್ಕೆ ಮುಂದಾಯಿತು. ಹೀಗಾಗಿ ಪಂದ್ಯದ 5ನೇ ನಿಮಿಷದಲ್ಲೇ ಬಲಿಷ್ಠ ಗುಜರಾತ್ ತಂಡವನ್ನು ಆಲೌಟ್ ಮಾಡಿತು. ಮೊದಲಾರ್ಧದ ಮುಕ್ತಾಯದ ವೇಳೆಗೆ ಗುಜರಾತ್ ಕಮ್’ಬ್ಯಾಕ್ ಮಾಡಿತಾದರೂ ಮುಂಬಾ 17-14 ಅಂಕಗಳ ಮುನ್ನಡೆ ಕಾಯ್ದುಕೊಂಡಿತು.

ಇನ್ನು ದ್ವಿತಿಯಾರ್ಧದಲ್ಲಿ ಗುಜರಾತ್ ಗೆಲುವಿಗಾಗಿ ಸಾಕಷ್ಟು ಶ್ರಮಿಸಿತಾದರೂ ಅಂತಿಮವಾಗಿ ಧರ್ಮರಾಜ್ ಚೆರ್ಲಾತನ್ ಮಾಡಿದ ಸೋಲೋ ಟ್ಯಾಕಲ್ ನೆರವಿನಿಂದ ಮುಂಬಾ ಆಲೌಟ್ ಆಗುವ ಸನ್ನಿವೇಷದಿಂದ ಹೊರಬಂತು. ಅಂತಿಮವಾಗಿ 10 ಅಂಕಗಳ ಭರ್ಜರಿ ಜಯ ದಾಖಲಿಸಿತು.

ಇದೇ ಪಂದ್ಯದಲ್ಲಿ ಯು ಮುಂಬಾದ ಧರ್ಮರಾಜ್ ಚೆರ್ಲಾತನ್ 200 ಟ್ಯಾಕಲ್ ಪಾಯಿಂಟ್ ಗಳಿಸಿದ ಸಾಧನೆ ಮಾಡಿದರು.