ಮುಂಬೈ[ಜ.04]: ಪ್ರೊ ಕಬಡ್ಡಿ 6ನೇ ಆವೃತ್ತಿ ಫೈನಲ್‌ಗೆ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ಪ್ರವೇಶಿಸಿದೆ. ಸತತ 8 ಪಂದ್ಯಗಳಲ್ಲಿ ಅಜೇಯವಾಗಿ ಉಳಿದಿದ್ದ ಯು.ಪಿ.ಯೋಧಾ ವಿರುದ್ಧ ಗುರುವಾರ ಇಲ್ಲಿನ ಎನ್‌ಎಸ್‌ಸಿಐ ಕ್ರೀಡಾಂಗಣದಲ್ಲಿ ನಡೆದ 2ನೇ ಕ್ವಾಲಿಫೈಯರ್‌ ಪಂದ್ಯದಲ್ಲಿ 38-31 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿದ ಗುಜರಾತ್‌ ಸತತ 2ನೇ ವರ್ಷ ಪ್ರಶಸ್ತಿ ಸುತ್ತಿಗೇರಿದೆ. ಕಳೆದ ವರ್ಷ ಫೈನಲ್‌ನಲ್ಲಿ ಪಾಟ್ನಾ ಪೈರೇಟ್ಸ್‌ ವಿರುದ್ಧ ಸೋಲುಂಡು ರನ್ನರ್‌-ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟಿದ್ದ ಗುಜರಾತ್‌, ಶನಿವಾರ ಇಲ್ಲಿ ನಡೆಯುಲಿರುವ ಫೈನಲ್‌ನಲ್ಲಿ ಬೆಂಗಳೂರು ಬುಲ್ಸ್‌ ವಿರುದ್ಧ ಸೆಣಸಲಿದೆ.

ಭಾರೀ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಗುಜರಾತ್‌ ರೈಡರ್‌ಗಳು ಪ್ರಾಬಲ್ಯ ಮೆರೆದರು. ನಿರೀಕ್ಷೆಯಂತೆ ಯುವ ರೈಡರ್‌ ಸಚಿನ್‌ ತವರ್‌ (09 ಅಂಕ) ಗುಜರಾತ್‌ ಗೆಲುವಿನ ರೂವಾರಿಯಾದರು. ಪ್ರಪಂಜನ್‌ (05), ರೋಹಿತ್‌ ಗುಲಿಯಾ (05)ರಿಂದ ಸಚಿನ್‌ಗೆ ಉತ್ತಮ ಬೆಂಬಲ ದೊರೆಯಿತು. ಗುಜರಾತ್‌ ರೈಡರ್‌ಗಳು ಒಟ್ಟು 22 ಅಂಕ ಕಲೆಹಾಕಿದರೆ, ಯು.ಪಿ.ಯೋಧಾ ರೈಡರ್‌ಗಳು ಗಳಿಸಿದ್ದು 17 ಅಂಕ ಮಾತ್ರ. ಉಭಯ ತಂಡಗಳ ಡಿಫೆಂಡರ್‌ಗಳು ತಲಾ 10 ಅಂಕ ಪಡೆದರು.

ಮೊದಲಾರ್ಧದಲ್ಲಿ ಸಮಬಲ ಹೋರಾಟ ಕಂಡು ಬಂತು. 15ನೇ ನಿಮಿಷದಲ್ಲಿ ಉಭಯ ತಂಡಗಳು 11-11ರಲ್ಲಿ ಸಮಬಲ ಸಾಧಿಸಿದ್ದವು. ಮೊದಲಾರ್ಧ ಮುಕ್ತಾಯಕ್ಕೆ ಕೆಲವೇ ನಿಮಿಷ ಬಾಕಿ ಇದ್ದಾಗ ಯೋಧಾ ಪಡೆಯನ್ನು ಆಲೌಟ್‌ ಮಾಡಿದ ಗುಜರಾತ್‌ 19-14ರ ಮುನ್ನಡೆಯೊಂದಿಗೆ ದ್ವಿತೀಯಾರ್ಧಕ್ಕೆ ತೆರಳಿತು.

ದ್ವಿತೀಯಾರ್ಧದ ಮೊದಲ 8 ನಿಮಿಷಗಳಲ್ಲಿ ಯು.ಪಿ.ಯೋಧಾಗೆ ಒಂದೂ ಅಂಕ ಗಳಿಸಲು ಬಿಡದ ಗುಜರಾತ್‌ 10 ಅಂಕಗಳ ಮುನ್ನಡೆ ಸಾಧಿಸಿತು. 27ನೇ ನಿಮಿಷದಲ್ಲಿ ಯೋಧಾವನ್ನು ಆಲೌಟ್‌ ಮಾಡಿದ್ದು ಸಹ ಇದರಲ್ಲಿ ಸೇರಿತ್ತು. 30ನೇ ನಿಮಿಷದ ವೇಳೆಗೆ 29-14ರಿಂದ ಮುಂದಿದ್ದ ಗುಜರಾತ್‌, ಅಂಕಗಳಿಕೆ ಮುಂದುವರಿಸಿತು. ಆದರೆ 36ನೇ ನಿಮಿಷದ ವೇಳೆಗೆ ಯೋಧಾ ಅಂಕ ವ್ಯತ್ಯಾಸವನ್ನು ಕೇವಲ 5 ಅಂಕಗಳಿಗೆ ಇಳಿಸಿಕೊಂಡಿತು. ಆದರೆ ಗುಜರಾತ್‌ ತಾಳ್ಮೆ ಕಳೆದುಕೊಳ್ಳದೆ 7 ಅಂಕಗಳ ಗೆಲುವನ್ನು ತನ್ನದಾಗಿಸಿಕೊಂಡು ಸಂಭ್ರಮಿಸಿತು.

ಟರ್ನಿಂಗ್‌ ಪಾಯಿಂಟ್‌

ದ್ವಿತೀಯಾರ್ಧದ ಮೊದಲ 8 ನಿಮಿಷಗಳಲ್ಲಿ ಯೋಧಾಗೆ ಒಂದೂ ಅಂಕ ಗಳಿಸಲು ಬಿಡದೆ 10 ಅಂಕಗಳ ಮುನ್ನಡೆ ಸಾಧಿಸಿದ್ದು ಗುಜರಾತ್‌ ಗೆಲುವಿಗೆ ಕಾರಣವಾಯಿತು. 27ನೇ ನಿಮಿಷದಲ್ಲಿ ಯೋಧಾ ಮೇಲೆ ಆಲೌಟ್‌ ಹೇರಿದ್ದು ಸಹ ಗುಜರಾತ್‌ ಮಾನಸಿಕ ಬಲ ಹೆಚ್ಚಿಸಿತು.

ಶ್ರೇಷ್ಠ ರೈಡರ್‌: ಸಚಿನ್‌ (ಗುಜರಾತ್‌, 09 ಅಂಕ)

ಶ್ರೇಷ್ಠ ಡಿಫೆಂಡರ್‌: ನಿತೇಶ್‌ (ಯೋಧಾ, 06 ಅಂಕ)

ಇತಿಹಾಸ ಬರೆದ ನಿತೇಶ್‌ ಕುಮಾರ್‌!

ಗುಜರಾತ್‌ ವಿರುದ್ಧ ಪಂದ್ಯದಲ್ಲಿ 6 ಟ್ಯಾಕಲ್‌ ಅಂಕ ಗಳಿಸಿದ ಯು.ಪಿ.ಯೋಧಾದ ಡಿಫೆಂಡರ್‌ ನಿತೇಶ್‌ ಕುಮಾರ್‌, ಈ ಆವೃತ್ತಿಯಲ್ಲಿ 25 ಪಂದ್ಯಗಳಿಂದ 100 ಟ್ಯಾಕಲ್‌ ಅಂಕ ಪೂರೈಸಿದರು. ಅಂದರೆ ಪ್ರತಿ ಪಂದ್ಯದಲ್ಲಿ ಸರಾಸರಿ 4 ಟ್ಯಾಕಲ್‌ ಅಂಕ ಗಳಿಸಿದ ಹೆಗ್ಗಳಿಕೆ ನಿತೇಶ್‌ರದ್ದು. ಪ್ರೊ ಕಬಡ್ಡಿಯ ಆವೃತ್ತಿಯೊಂದರಲ್ಲಿ 100 ಟ್ಯಾಕಲ್‌ ಅಂಕ ಗಳಿಸಿದ ಮೊದಲ ಆಟಗಾರ ಎನ್ನುವ ದಾಖಲೆಯನ್ನು ಅವರು ಬರೆದರು.

ಬುಲ್ಸ್‌ ವಿರುದ್ಧ ಸೋತಿದ್ದ ಗುಜರಾತ್‌

ಫೈನಲ್‌ನಲ್ಲಿ ಬೆಂಗಳೂರು ಬುಲ್ಸ್‌ ಎದುರಿಸಲಿರುವ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌, ಮೊದಲ ಕ್ವಾಲಿಫೈಯರ್‌ನಲ್ಲಿ ಅನುಭವಿಸಿದ ಹೀನಾಯ ಸೋಲಿಗೆ ಸೇಡು ತೀರಿಸಿಕೊಳ್ಳಲು ಹಪಹಪಿಸುತ್ತಿದೆ. ರಕ್ಷಣಾ ಪಡೆಯನ್ನೇ ಹೆಚ್ಚಾಗಿ ನಂಬಿಕೊಂಡಿರುವ ಗುಜರಾತ್‌ಗೆ ಬೆಂಗಳೂರಿನ ತಾರಾ ರೈಡರ್‌ಗಳನ್ನು ಕಟ್ಟಿಹಾಕುವುದು ಮತ್ತೊಮ್ಮೆ ಸವಾಲಾಗಿ ಪರಿಣಮಿಸಲಿದೆ.