ನವದೆಹಲಿ[ಡಿ.03]: ದಬಾಂಗ್ ಡೆಲ್ಲಿ ತಂಡವು ಪುಣೇರಿ ಪಲ್ಟಾನ್ ತಂಡವನ್ನು 35-24 ಅಂಕಗಳ ಅಂತರದಲ್ಲಿ ಮಣಿಸಿ ತವರಿನ ಅಭಿಮಾನಿಗಳನ್ನು ರಂಜಿಸಿತು.
ನವೀನ್ ಕುಮಾರ್ ಆಕರ್ಷಕ ರೈಡಿಂಗ್ ಡೆಲ್ಲಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ಮೊದಲಾರ್ಧ ಮುಕ್ತಾಯದ ವೇಳೆಗೆ ಡೆಲ್ಲಿ 18-10 ಅಂಕಗಳ ಮುನ್ನಡೆ ಕಾಯ್ದುಕೊಂಡಿತು.

ಇನ್ನು ದ್ವಿತಿಯಾರ್ಧದಲ್ಲೂ ಪುಣೆ ಮೇಲೆ ಬಿಗಿ ಹಿಡಿತ ಸಾಧಿಸಿದ ಡೆಲ್ಲಿ ಮುನ್ನಡೆ ಕಾಯ್ದುಕೊಳ್ಳುತ್ತಲೇ ಸಾಗಿತು. ಪಂದ್ಯದ 30ನೇ ನಿಮಿಷದಲ್ಲಿ ಪುಣೆಯನ್ನು ಮತ್ತೊಮ್ಮೆ ಆಲೌಟ್ ಮಾಡುವ ಮೂಲಕ ಸ್ಪಷ್ಟ ಹಿಡಿತ ಸಾಧಿಸಿತು. ಅಂತಿಮವಾಗಿ 11 ಅಂಕಗಳ ಭರ್ಜರಿ ಗೆಲುವು ಸಾಧಿಸಿತು. 

ಈ ಪಂದ್ಯದಲ್ಲಿ ದಬಾಂಗ್ ಡೆಲ್ಲಿಯ ಸ್ಟಾರ್ ಡಿಫೆಂಡರ್ ರವೀಂದ್ರ ಪೆಹಾಲ್ ಪ್ರೊ ಕಬಡ್ಡಿ ಆವೃತ್ತಿಯಲ್ಲಿ 250 ಟ್ಯಾಕಲ್ ಅಂಕ ಕಬಳಿಸಿದ ಸಾಧನೆ ಮಾಡಿದರು. ಈ ಮೂಲಕ ಪಿಕೆಎಲ್’ನಲ್ಲಿ ಈ ಸಾಧನೆ ಮಾಡಿದ ಎರಡನೇ ಆಟಗಾರ ಎನ್ನುವ ಕೀರ್ತಿಗೆ ಭಾಜನರಾದರು. ಈ ಗೆಲುವಿನೊಂದಿಗೆ ’ಎ’ ಗುಂಪಿನಲ್ಲಿ ಡೆಲ್ಲಿ 4ನೇ ಸ್ಥಾನದಲ್ಲಿ ಮುಂದುವರೆದರೆ, ಪುಣೇರಿ ಪಲ್ಟಾನ್ 5ನೇ ಸ್ಥಾನದಲ್ಲಿ ಉಳಿದಿದೆ.