ಗ್ರೇಟರ್ ನೋಯ್ಡಾ(ನ.03): ಯುಪಿ ಯೋಧಾ ವಿರುದ್ಧದ ಪ್ರೊ ಕಬಡ್ಡಿ ಲೀಗ್ ಟೂರ್ನಿಯ 47ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 35-29 ಅಂಕಗಳ ಅಂತರದಲ್ಲಿ ರೋಚಕ ಗೆಲುವು ಸಾಧಿಸಿದೆ. ಮೊದಲಾರ್ಧದಲ್ಲಿ ಹಿನ್ನಡೆ ಅನುಭವಿಸಿದ ಬುಲ್ಸ್, ಸೆಕೆಂಡ್ ಹಾಫ್‌ನಲ್ಲಿ ಭರ್ಜರಿ ಕಮ್‌ಬ್ಯಾಕ್ ಮಾಡೋ ಮೂಲಕ ಗೆಲುವು ಸಾಧಿಸಿತು.

ಮೊದಲಾರ್ಧದಲ್ಲಿ ಯುಪಿ ಯೋಧ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಮೊದಲು ಅಂಕ ಖಾತೆ ತೆರೆದ ಯುಪಿ ಯೋಧಾ ತಂಡ, ಫಸ್ಟ್ ಹಾಫ್‌ನಲ್ಲಿ ಮುನ್ನಡೆ ಕಾಯ್ದುಕೊಂಡಿತು. ಮೊದಲಾರ್ಧದ ಅಂತ್ಯದಲ್ಲಿ ಯುಪಿ ಯೋಧಾ 20-15 ಅಂಕಗಳ ಮುನ್ನಡೆ ಕಾಯ್ದುಕೊಂಡಿತ್ತು.

ದ್ವಿತೀಯಾರ್ಧದ ಆರಂಭದಲ್ಲಿ ಯುಪಿ ಮುನ್ನಡೆ ಅಂತರವನ್ನ ಹೆಚ್ಚಿಸಿತು. ಆದರೆ ಅಂತಿಮ ಹಂತದ ವೇಳೆಗೆ ಬೆಂಗಳೂರು ಬುಲ್ಸ್ ಗೇರ್ ಬದಲಾಯಿಸಿತು. ರೈಡ್ ಹಾಗೂ ಟ್ಯಾಕಲ್ ಮೂಲಕ  ಅಂಕ ಗಳಿಸಿದ ಬುಲ್ಸ್ 35-29 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು.

ಬೆಂಗಳೂರು ಬುಲ್ಸ್ ಹಾಗೂ ಯುಪಿ ಯೋಧಾ ನಡುವಿನ ಪಂದ್ಯಕ್ಕೂ ಮೊದಲು ಮಹಾರಾಷ್ಟ್ರದ ಎರಡು ತಂಡಗಳು ಮುಖಾಮುಖಿಯಾಗಿತ್ತು. ಈ ಮಹತ್ವದ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ವಿರುದ್ಧದ ಯು ಮುಂಬಾ 31-22 ಅಂಕಗಳ ಗೆಲುವು ಸಾಧಿಸಿತು.