ವಿಶಾಖಪಟ್ಟಣಂ(ಡಿ.08): ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ಪ್ರೊ ಕಬಡ್ಡಿ 6ನೇ ಆವೃತ್ತಿಯಲ್ಲಿ ಗೆಲುವಿನ ಓಟ ಮುಂದುವರಿಸಿದೆ. ಶುಕ್ರವಾರ ನಡೆದ ಅಂತರ ವಲಯ ಚಾಲೆಂಜ್‌ನ ತೆಲುಗು ಟೈಟಾನ್ಸ್‌ ವಿರುದ್ಧದ ಪಂದ್ಯದಲ್ಲಿ 29-27 ಅಂಕಗಳ ಗೆಲುವು ಸಾಧಿಸಿತು. ಈಗಾಗಲೇ ಪ್ಲೇ-ಆಫ್‌ಗೇರಿರುವ ತಂಡಕ್ಕಿದು ಈ ಆವೃತ್ತಿಯಲ್ಲಿ 13ನೇ ಗೆಲುವು.

ಇದೇ ವೇಳೆ ತವರಿನ ಚರಣವನ್ನು ಸೋಲಿನೊಂದಿಗೆ ಆರಂಭಿಸಿದ ಟೈಟಾನ್ಸ್‌, ಪ್ಲೇ-ಆಫ್‌ ಹಾದಿ ಕಠಿಣ ಎನಿಸಿದೆ. ತಂಡಕ್ಕಿದು ಸತತ 5ನೇ ಸೋಲು. 14 ಪಂದ್ಯಗಳಲ್ಲಿ ಕೇವಲ 5ರಲ್ಲಿ ಗೆಲುವು ಸಾಧಿಸಿರುವ ಟೈಟಾನ್ಸ್‌, ಇನ್ನುಳಿದ 8 ಪಂದ್ಯಗಳಲ್ಲಿ ಕನಿಷ್ಠ 7ರಲ್ಲಿ ಗೆಲ್ಲಲೇಬೇಕಿದೆ.

ಪಂದ್ಯದ 20ನೇ ನಿಮಿಷದಲ್ಲಿ ಟೈಟಾನ್ಸ್‌ ಆಲೌಟ್‌ ಮಾಡಿದ ಗುಜರಾತ್‌ 17-12ರ ಮುನ್ನಡೆ ಪಡೆಯಿತು. 24ನೇ ನಿಮಿಷದ ವೇಳೆಗೆ ಕೇವಲ 2 ಅಂಕಗಳಿಂದ ಹಿಂದಿದ್ದ ಟೈಟಾನ್ಸ್‌ 32ನೇ ನಿಮಿಷದಲ್ಲಿ ಎದುರಾಳಿಯನ್ನು ಆಲೌಟ್‌ ಮಾಡಿ ಮೊದಲ ಬಾರಿಗೆ ಮುನ್ನಡೆ ಸಾಧಿಸಿತು. ಆದರೆ 38ನೇ ನಿಮಿಷದಲ್ಲಿ ಸಮಬಲ ಸಾಧಿಸಿದ ಗುಜರಾತ್‌, ಬಳಿಕ ಒಂದು ಟ್ಯಾಕಲ್‌ ಅಂಕ ಪಡೆದು ಮುನ್ನಡೆ ಪಡೆಯಿತು. ಕೊನೆಯಲ್ಲಿ ರಾಹುಲ್‌ ಚೌಧರಿ ಔಟಾಗಿದ್ದರಿಂದ ಪಂದ್ಯ ಜೈಂಟ್ಸ್‌ ಪಾಲಾಯಿತು.

ಟರ್ನಿಂಗ್‌ ಪಾಯಿಂಟ್‌: ಕೊನೆ ರೈಡ್‌ನಲ್ಲಿ ರಾಹುಲ್‌ಗೆ ಅಂಕ ಗಳಿಸಿ ಪಂದ್ಯ ಟೈ ಮಾಡಿಕೊಳ್ಳುವ ಅವಕಾಶವಿತ್ತು. ಆದರೆ ಔಟಾದ ಕಾರಣ, ಗೆಲುವು ಜೈಂಟ್ಸ್‌ಗೆ ಒಲಿಯಿತು.

ಶ್ರೇಷ್ಠ ರೈಡರ್‌: ಪ್ರಪಂಜನ್‌ (ಜೈಂಟ್ಸ್‌, 10 ಅಂಕ)

ಶ್ರೇಷ್ಠ ಡಿಫೆಂಡರ್‌: ಪರ್ವೇಶ್‌ (ಜೈಂಟ್ಸ್‌, 03 ಅಂಕ)

ಇಂದಿನ ಪಂದ್ಯಗಳು

ಮುಂಬಾ-ಬೆಂಗಾಲ್‌ ರಾತ್ರಿ 8ಕ್ಕೆ

ತೆಲುಗು-ಜೈಪುರ ರಾತ್ರಿ 9ಕ್ಕೆ