ಕೋಲ್ಕತಾ[ಡಿ.24]: ಪ್ರೊ ಕಬಡ್ಡಿ 6ನೇ ಆವೃತ್ತಿಯ ಪ್ಲೇ-ಆಫ್‌ಗೇರಿದ ಸಂಭ್ರಮದಲ್ಲಿದ್ದ ಬೆಂಗಾಲ್‌ ವಾರಿಯ​ರ್ಸ್, ತವರು ಚರಣದಲ್ಲಿ ಮೊದಲ ಸೋಲು ಕಂಡಿದೆ. 
ಭಾನುವಾರ ಇಲ್ಲಿನ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅಂತರ ವಲಯ ವೈಲ್ಡ್‌ಕಾರ್ಡ್‌ ಪಂದ್ಯದಲ್ಲಿ ದಬಾಂಗ್‌ ಡೆಲ್ಲಿ ವಿರುದ್ಧ 31-37ರಲ್ಲಿ ಸೋಲು ಅನುಭವಿಸಿತು. ಈ ಸೋಲಿನೊಂದಿಗೆ ‘ಬಿ’ ವಲಯದಲ್ಲಿ ಅಗ್ರಸ್ಥಾನಕ್ಕೇರಿ ಕ್ವಾಲಿಫೈಯರ್‌-1 ಪಂದ್ಯಕ್ಕೆ ಅರ್ಹತೆ ಪಡೆಯುವ ಬೆಂಗಾಲ್‌ ಕನಸಿಗೆ ಹಿನ್ನಡೆಯಾಗಿದೆ.

19 ಪಂದ್ಯಗಳಲ್ಲಿ 10 ಗೆಲುವುಗಳೊಂದಿಗೆ 59 ಅಂಕ ಸಾಧಿಸಿರುವ ಬೆಂಗಾಲ್‌ 2ನೇ ಸ್ಥಾನದಲ್ಲಿ ಮುಂದುವರಿದಿದೆ. ಬೆಂಗಳೂರು ಬುಲ್ಸ್‌ 20 ಪಂದ್ಯಗಳಿಂದ 72 ಅಂಕಗಳಿಸಿ ಮೊದಲ ಸ್ಥಾನ ಕಾಯ್ದುಕೊಂಡಿದೆ. ಬೆಂಗಾಲ್‌ ಹಾಗೂ ಬೆಂಗಳೂರು ನಡುವೆ 13 ಅಂಕಗಳ ವ್ಯತ್ಯಾಸವಿದ್ದು, ಬೆಂಗಾಲ್‌ ಮುಂದಿನ 3 ಪಂದ್ಯಗಳಲ್ಲಿ ಗೆದ್ದು, ಬೆಂಗಳೂರು ಉಳಿದಿರುವ 2 ಪಂದ್ಯಗಳಲ್ಲಿ ಸೋತರೆ ಮಾತ್ರ ಬೆಂಗಾಲ್‌ ಅಗ್ರಸ್ಥಾನಕ್ಕೇರಲಿದೆ.

‘ಎ’ ವಲಯದಿಂದ ಪ್ಲೇ-ಆಫ್‌ಗೇರಿ, ಎಲಿಮಿನೇಟರ್‌ ಪಂದ್ಯಕ್ಕೆ ಅರ್ಹತೆ ಪಡೆದಿದ್ದ ಡೆಲ್ಲಿಗೆ ಇದು ಔಪಚಾರಿಕ ಪಂದ್ಯವಷ್ಟೇ. ಆದರೂ ರೋಚಕ ಗೆಲುವಿನೊಂದಿಗೆ ಲೀಗ್‌ ಹಂತವನ್ನು ಮುಕ್ತಾಯಗೊಳಿಸಿದ್ದು ಪ್ಲೇ-ಆಫ್‌ಗೂ ಮುನ್ನ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.

ಮೊದಲ ನಿಮಿಷದಲ್ಲೇ ಮಣೀಂದರ್‌ ಸಿಂಗ್‌ ನಡೆಸಿದ ಸೂಪರ್‌ ರೈಡ್‌ ನೆರವಿನಿಂದ ಬೆಂಗಾಲ್‌ ಉತ್ತಮ ಆರಂಭ ಪಡೆದುಕೊಂಡಿತು. 16ನೇ ನಿಮಿಷದಲ್ಲಿ ಬೆಂಗಾಲ್‌ ತಂಡವನ್ನು ಆಲೌಟ್‌ ಮಾಡಿದ ಡೆಲ್ಲಿ ಮುನ್ನಡೆ ಪಡೆಯಿತು. ಬೆಂಗಾಲ್‌ ತಂಡ ತನ್ನ ಮೊದಲ ಟ್ಯಾಕಲ್‌ ಅಂಕ ಗಳಿಸಿದ್ದು 19ನೇ ನಿಮಿಷದಲ್ಲಿ. ಇದರ ಲಾಭವೆತ್ತಿದ ಡೆಲ್ಲಿ ಮೊದಲಾರ್ಧದ ಮುಕ್ತಾಯಕ್ಕೆ 20-14ರ ಮುನ್ನಡೆ ಪಡೆಯಿತು.

ದ್ವಿತೀಯಾರ್ಧವನ್ನು ಭರ್ಜರಿಯಾಗಿ ಆರಂಭಿಸಿದ ಬೆಂಗಾಲ್‌, ಡೆಲ್ಲಿಯನ್ನು ಆಲೌಟ್‌ ಮಾಡುವಲ್ಲಿ ಯಶಸ್ವಿಯಾಯಿತು. 6 ನಿಮಿಷಗಳಲ್ಲಿ 8 ಅಂಕ ಕಲೆಹಾಕಿ 26ನೇ ನಿಮಿಷದಲ್ಲಿ 22-22ರಲ್ಲಿ ಸಮಬಲ ಸಾಧಿಸಿತು. ಮಿರಾಜ್‌ ಶೇಖ್‌ ಸತತ 4 ಅಂಕ ಗಳಿಸಿ ಡೆಲ್ಲಿ 28-24ರಲ್ಲಿ ಮುನ್ನಡೆಯಲು ನೆರವಾದರು. ಆದರೆ 39ನೇ ನಿಮಿಷದಲ್ಲಿ ಮತ್ತೆ ಉಭಯ ತಂಡಗಳು 31-31ರಲ್ಲಿ ಸಮಬಲ ಸಾಧಿಸಿದವು. ಕೊನೆ 30 ಸೆಕೆಂಡ್‌ ಬಾಕಿ ಇದ್ದಾಗ ಮಿರಾಜ್‌ ಸೂಪರ್‌ ರೈಡ್‌ನೊಂದಿಗೆ, ಬೆಂಗಾಲ್‌ ತಂಡವನ್ನು ಆಲೌಟ್‌ ಮಾಡಿದರು. ಒಂದೇ ರೈಡ್‌ನಲ್ಲಿ 5 ಅಂಕ ಗಳಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.

ಟರ್ನಿಂಗ್‌ ಪಾಯಿಂಟ್‌: ಅಂತಿಮ ನಿಮಿಷದಲ್ಲಿ ಮಿರಾಜ್‌ ಶೇಖ್‌ ನಡೆಸಿದ ಸೂಪರ್‌ ರೈಡ್‌ ಪಂದ್ಯದ ಲೆಕ್ಕಾಚಾರವನ್ನೇ ಬದಲಿಸಿತು. 31-31ರಲ್ಲಿ ಪಂದ್ಯ ಸಮಗೊಂಡಿತ್ತು. ಬೆಂಗಾಲ್‌ ಅಂತಿಮ ಕ್ಷಣದಲ್ಲಿ ಅಂಕ ಗಳಿಸಿ ತವರಲ್ಲಿ ಹ್ಯಾಟ್ರಿಕ್‌ ಬಾರಿಸುವ ಲೆಕ್ಕಾಚಾರದಲ್ಲಿತ್ತು. ಆದರೆ ಮಿರಾಜ್‌ ಒಂದೇ ರೈಡ್‌ನಲ್ಲಿ 5 ಅಂಕ ಕಲೆಹಾಕಿದ್ದು, ಪಂದ್ಯ ದಬಾಂಗ್‌ ಡೆಲ್ಲಿ ಪಾಲಾಗುವಂತೆ ಮಾಡಿತು.

ಶ್ರೇಷ್ಠ ರೈಡರ್‌: ಮಿರಾಜ್‌ ಶೇಖ್‌ (ಡೆಲ್ಲಿ, 13 ಅಂಕ)

ಶ್ರೇಷ್ಠ ಡಿಫೆಂಡರ್‌: ಭೂಪೇಂದರ್‌ (ಬೆಂಗಾಲ್‌, 02 ಅಂಕ)

ವರದಿ: ಗಣೇಶ್‌ ಪ್ರಸಾದ್‌ ಕುಂಬ್ಳೆ, ಕನ್ನಡಪ್ರಭ