ತವರು ಚರಣದಲ್ಲಿ ಬುಲ್ಸ್’ಗೆ ಸೋಲಿನ ಆರಂಭ

ಇಡೀ ಪಂದ್ಯದಲ್ಲಿ ಡಿಫೆನ್ಸ್'ನಿಂದ ಬೆಂಗಳೂರು ಬುಲ್ಸ್‌ಗೆ ಸಿಕ್ಕಿದ್ದು ಕೇವಲ 3 ಅಂಕ ಮಾತ್ರ. ಇದರಲ್ಲಿ ಒಂದು ಅಂಕವನ್ನು ರೈಡರ್ ಪವನ್ ಶೆರಾವತ್ ಗಳಿಸಿದರು. ಬೆಂಗಾಲ್ ರೈಡಿಂಗ್‌ನಲ್ಲಿ ಗಳಿಸಿದ್ದು 23 ಅಂಕಗಳಾದರೂ, ಡಿಫೆನ್ಸ್'ನಲ್ಲಿ 7 ಅಂಕ ಕಲೆಹಾಕಿ ಬುಲ್ಸ್ ವಿರುದ್ಧ ಮೇಲುಗೈ ಸಾಧಿಸಿತು. 

PKL 6 Bengal Warriors win 33-31 against Bengaluru Bulls

ಪುಣೆ[ನ.24] ಡಿಫೆಂಡರ್‌ಗಳ ಹೀನಾಯ ಪ್ರದರ್ಶನದಿಂದಾಗಿ ಬೆಂಗಳೂರು ಬುಲ್ಸ್ ತನ್ನ ತವರಿನ ಚರಣದಲ್ಲಿ ಸೋಲಿನ ಆರಂಭ ಪಡೆದುಕೊಂಡಿದೆ. ಬೆಂಗಾಲ್ ವಾರಿಯರ್ಸ್‌ ವಿರುದ್ಧ ಶುಕ್ರವಾರ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಬುಲ್ಸ್ 31-33 ಅಂಕಗಳ ಸೋಲು ಅನುಭವಿಸಿತು. ಪಂದ್ಯದಲ್ಲಿ ಬುಲ್ಸ್ ರೈಡರ್‌ಗಳಾದ ಪವನ್ ಶೆರಾವತ್ (10 ಅಂಕ), ರೋಹಿತ್ ಕುಮಾರ್ (09 ಅಂಕ) ಹಾಗೂ ಕಾಶಿಲಿಂಗ್ ಅಡಕೆ (05 ಅಂಕ) ಒಟ್ಟು 25 ರೈಡಿಂಗ್ ಅಂಕ ಕಲೆಹಾಕಿದರು.

ಇಡೀ ಪಂದ್ಯದಲ್ಲಿ ಡಿಫೆನ್ಸ್'ನಿಂದ ಬೆಂಗಳೂರು ಬುಲ್ಸ್‌ಗೆ ಸಿಕ್ಕಿದ್ದು ಕೇವಲ 3 ಅಂಕ ಮಾತ್ರ. ಇದರಲ್ಲಿ ಒಂದು ಅಂಕವನ್ನು ರೈಡರ್ ಪವನ್ ಶೆರಾವತ್ ಗಳಿಸಿದರು. ಬೆಂಗಾಲ್ ರೈಡಿಂಗ್‌ನಲ್ಲಿ ಗಳಿಸಿದ್ದು 23 ಅಂಕಗಳಾದರೂ, ಡಿಫೆನ್ಸ್'ನಲ್ಲಿ 7 ಅಂಕ ಕಲೆಹಾಕಿ ಬುಲ್ಸ್ ವಿರುದ್ಧ ಮೇಲುಗೈ ಸಾಧಿಸಿತು. ಪಂದ್ಯ  ಸೋತರೂ, ಬುಲ್ಸ್ 1 ಅಂಕ ಪಡೆದು, ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಬೆಂಗಾಲ್ 6ನೇ ಗೆಲುವು ದಾಖಲಿಸಿ, 3ನೇ ಸ್ಥಾನ ಪಡೆದುಕೊಂಡಿದೆ.

ಭಾರೀ ಪೈಪೋಟಿ: ಪಂದ್ಯದ ಆರಂಭದಿಂದಲೂ ಉಭಯ ತಂಡಗಳ ನಡುವೆ ಭಾರೀ ಪೈಪೋಟಿ ಕಂಡುಬಂತು. 4ನೇ ನಿಮಿಷದ ವೇಳೆಗೆ 4-4ರಲ್ಲಿ ತಂಡಗಳು ಸಮಬಲ ಸಾಧಿಸಿದವು. ಬುಲ್ಸ್ 15ನೇ ನಿಮಿಷದಲ್ಲಿ ಆಲೌಟ್ ಆಗಿ 11-13ರ ಹಿನ್ನಡೆ ಅನುಭವಿಸಿತು. ಮೊದಲಾರ್ಧದ ಅಂತ್ಯಕ್ಕೆ ಬೆಂಗಾಲ್ 18-14ರ ಮುನ್ನಡೆ ಪಡೆದುಕೊಂಡಿತು. ದ್ವಿತೀಯಾರ್ಧದಲ್ಲೂ ಮಣೀಂದರ್ ಅತ್ಯುತ್ತಮ ಲಯ ಮುಂದುವರಿಸಿದರು. 23ನೇ ನಿಮಿಷದಲ್ಲಿ ಬೆಂಗಾಲ್ 23-15ರ ಮುನ್ನಡೆ ಪಡೆಯಿತು. 33ನೇ ನಿಮಿಷದಲ್ಲಿ ಅಮೋಘ ರೈಡ್ ನಡೆಸಿದ ಪವನ್, ಬೆಂಗಾಲ್ ತಂಡವನ್ನು ಆಲೌಟ್ ಮಾಡಿ ಬುಲ್ಸ್ 26-26ರಲ್ಲಿ ಸಮಬಲ ಸಾಧಿಸಲು ನೆರವಾದರು. ಆದರೆ 34ನೇ ನಿಮಿಷದಲ್ಲಿ ಸೂಪರ್ ರೈಡ್ ನಡೆಸಿದ ಮಣೀಂದರ್ ಬೆಂಗಾಲ್‌ಗೆ ಮತ್ತೆ 3 ಅಂಕಗಳ ಮುನ್ನಡೆ ಒದಗಿಸಿದರು. ಕೊನೆ 5 ನಿಮಿಷಗಳ ಭಾರಿ ರೋಚಕವಾಗಿದ್ದವು. ಕಾಶಿಲಿಂಗ್ 2 ಅಂಕ ಗಳಿಸಿ ಗೆಲುವಿನ ಆಸೆ ಜೀವಂತವಾಗಿರಿಸಿದರೂ, 38ನೇ ನಿಮಿಷದಲ್ಲಿ ಅಂಕ ಪಡೆದ ಮಣೀಂದರ್, ಬೆಂಗಾಲ್‌ಗೆ 33-28ರ ಮುನ್ನಡೆ ಒದಗಿಸಿದರು.ಅಂತಿಮವಾಗಿ 2 ಅಂಕಗಳ ಗೆಲುವು ಬೆಂಗಾಲ್ ಪಾಲಾಯಿತು.

ವರದಿ: ಧನಂಜಯ ಎಸ್ ಹಕಾರಿ, ಕನ್ನಡಪ್ರಭ

Latest Videos
Follow Us:
Download App:
  • android
  • ios