ಕಳೆದ ವರ್ಷ ನಡೆದ ಫಿಡೆ ಚೆಸ್ ವಿಶ್ವಕಪ್‌ನಲ್ಲಿ ಆರ್ ಪ್ರಜ್ಞಾನಂದ, ಮ್ಯಾಗ್ನಸ್ ಕಾರ್ಲ್‌ಸನ್‌ಗೆ ಶರಣಾಗಿದ್ದರು. ಇದೀಗ ಆ ಸೋಲಿಗೆ ನಾರ್ವೆಯಲ್ಲಿ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಮ್ಯಾಗ್ನಸ್ ಕಾರ್ಲ್‌ಸನ್ ಸೋಲಿಸಿದ ಭಾರತದ 4ನೇ ಚೆಸ್ ಪಟು ಎನ್ನುವ ಹಿರಿಮೆಗೆ ಆರ್ ಪ್ರಜ್ಞಾನಂದ ಪಾತ್ರರಾಗಿದ್ದಾರೆ.

ನಾರ್ವೆ(ಮೇ.30): ಭಾರತದ 18 ವರ್ಷದ ಯುವ ಗ್ರ್ಯಾಂಡ್ ಮಾಸ್ಟರ್ ರಮೇಶ್‌ಬಾಬು ಪ್ರಜ್ಞಾನಂದ, ವಿಶ್ವ ನಂ.1 ಚೆಸ್ ಪಟು ಮ್ಯಾಗ್ನಸ್ ಕಾರ್ಲ್‌ಸನ್ ಎದುರು ಮೊದಲ ಐತಿಹಾಸಿಕ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾರ್ವೆ ಚೆಸ್ ಟೂರ್ನಮೆಂಟ್‌ನ ಮೂರನೇ ಸುತ್ತಿನ ಸ್ಪರ್ಧೆಯಲ್ಲಿ ಆರ್ ಪ್ರಜ್ಞಾನಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಆರು ಅಗ್ರ ಚೆಸ್ ಆಟಗಾರರು ಪಾಲ್ಗೊಂಡಿರುವ ಪ್ರತಿಷ್ಠಿಯ ಚೆಸ್ ಟೂರ್ನಮೆಂಟ್‌ನಲ್ಲಿ ಬಿಳಿ ಕಾಯಿನ್ ಮುನ್ನಡೆಸಿದ ಪ್ರಜ್ಞಾನಂದ, ತವರಿನ ನಂ.1 ಶ್ರೇಯಾಂಕಿ ಆಟಗಾರನಿಗೆ ಸೋಲುಣಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೂರನೇ ಸುತ್ತಿನ ಸ್ಪರ್ಧೆಯಲ್ಲಿ ಪ್ರಜ್ಞಾನಂದ 9 ಅಂಕಗಳ ಪೈಕಿ 5.5 ಅಂಕಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾದರು. 

ಕಳೆದ ವರ್ಷ ನಡೆದ ಫಿಡೆ ಚೆಸ್ ವಿಶ್ವಕಪ್‌ನಲ್ಲಿ ಆರ್ ಪ್ರಜ್ಞಾನಂದ, ಮ್ಯಾಗ್ನಸ್ ಕಾರ್ಲ್‌ಸನ್‌ಗೆ ಶರಣಾಗಿದ್ದರು. ಇದೀಗ ಆ ಸೋಲಿಗೆ ನಾರ್ವೆಯಲ್ಲಿ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಮ್ಯಾಗ್ನಸ್ ಕಾರ್ಲ್‌ಸನ್ ಸೋಲಿಸಿದ ಭಾರತದ 4ನೇ ಚೆಸ್ ಪಟು ಎನ್ನುವ ಹಿರಿಮೆಗೆ ಆರ್ ಪ್ರಜ್ಞಾನಂದ ಪಾತ್ರರಾಗಿದ್ದಾರೆ.

Scroll to load tweet…

ಇನ್ನು ಕುತೂಹಲಕಾರಿ ಸಂಗತಿಯೆಂದರೆ, ಆರ್ ಪ್ರಜ್ಞಾನಂದ ಅವರ ಸಹೋದರಿ ಆರ್ ವೈಶಾಲಿ, ನಾರ್ವೆ ಚೆಸ್ ಮಹಿಳಾ ವಿಭಾಗದಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಅಗ್ರಶ್ರೇಯಾಂಕ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು.

ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌ ಆತಿಥ್ಯಕ್ಕೆ ಭಾರತದಿಂದ ಬಿಡ್‌

ನವದೆಹಲಿ: ಭಾರತದ ತಾರಾ ಚೆಸ್‌ ಪಟು ಡಿ.ಗುಕೇಶ್‌ ಹಾಗೂ ಹಾಲಿ ಚಾಂಪಿಯನ್‌, ಚೀನಾದ ಡಿಂಗ್ ಲಿರೆನ್‌ ನಡುವಿನ ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌ ಪಂದ್ಯದ ಆತಿಥ್ಯಕ್ಕೆ ಭಾರತ ಬಿಡ್‌ ಸಲ್ಲಿಸಿದೆ.

ತಮಿಳುನಾಡು ಸರ್ಕಾರದಿಂದ ಬಿಡ್‌ ಸಲ್ಲಿಕೆಯಾಗಿದ್ದು, ಇದನ್ನು ಚೆಸ್‌ ಜಾಗತಿಕ ಮಂಡಳಿ(ಫಿಡೆ) ಖಚಿತಪಡಿಸಿದೆ. ಸದ್ಯ ಭಾರತದಿಂದ ಮಾತ್ರ ಬಿಡ್‌ ಸಲ್ಲಿಕೆಯಾಗಿದೆ. ಆದರೆ ಸಿಂಗಾಪೂರ ಕೂಡಾ ಬಿಡ್‌ ಸಲ್ಲಿಸುವ ನಿರೀಕ್ಷೆಯಿದ್ದು, ಭಾರತಕ್ಕೆ ಪೈಪೋಟಿ ನೀಡುವ ಸಾಧ್ಯತೆಯಿದೆ. ಬಿಡ್‌ ಸಲ್ಲಿಸಲು ಮೇ 31ರ ವರೆಗೂ ಸಮಯಾವಕಾಶವಿದೆ.

ಒಂದು ವೇಳೆ ಭಾರತಕ್ಕೆ ಆತಿಥ್ಯ ಹಕ್ಕು ಸಿಕ್ಕರೆ ಚೆನ್ನೈನಲ್ಲಿ ನ.20ರಿಂದ ಡಿ.15ರ ವರೆಗೂ ಚಾಂಪಿಯನ್‌ಶಿಪ್‌ ನಡೆಯಲಿದೆ. ಅಲ್ಲದೆ ಅದಕ್ಕಾಗಿ ಅಖಿಲ ಭಾರತ ಚೆಸ್‌ ಫೆಡರೇಶನ್‌ 80 ಕೋಟಿ ರು. ಖರ್ಚು ಮಾಡಲು ಸಿದ್ಧಗೊಳ್ಳಬೇಕಿದೆ. ಭಾರತ ಈ ಮೊದಲು 2000 ಹಾಗೂ 2013ರಲ್ಲಿ ವಿಶ್ವ ಚಾಂಪಿಯನ್‌ಶಿಪ್‌ಗೆ ಆತಿಥ್ಯ ವಹಿಸಿತ್ತು.