ಬೆಂಗಳೂರು(ಜ.04): ಮಳೆಯಿಂದಾಗಿ ಪಂದ್ಯ ರದ್ದಾಗುವುದಾಗಲಿ, ಇಲ್ಲ ತಡವಾಗುವುದಾಗಲೀ, ಮಳೆಯಿಂದಾಗಿ ನಮ್ಮ ರಸಾಸ್ವಾದನೆಗೆ ಅಡ್ಡಿಯಾಯಿತಲ್ಲ ಎಂದು ಕ್ರಿಕೆಟ್ ಪ್ರೇಮಿಗಳು ಕೊರಗುವುದಾಗಲೀ, ಇನ್ನುಮುಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅವಕಾಶವಿಲ್ಲ. ಜಗತ್ತಿನಲ್ಲೇ ಪ್ರಪ್ರಥಮವಾಗಿ ಸಬ್ ಸರ್ಫೇಸ್ ಏರೇಷನ್ ಮತ್ತು ವ್ಯಾಕ್ಯೂಂ ಪವರ್ಡ್‌ ಡ್ರೈನೇಜ್ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಹೆಗ್ಗಳಿಕೆ ಪಡೆದ ರಾಜ್ಯದ ಹೆಮ್ಮೆಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಇನ್ನುಮುಂದೆ ವರುಣನ ಕಾಟ ಶಾಶ್ವತವಾಗಿ ಮರೆಯಾಗಿದೆ.

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣವು ಹೊಸ ತಲೆಮಾರಿನ ಕ್ರಿಕೆಟ್ ಪ್ರೇಮಿಗಳಿಗಷ್ಟೇ ಅಲ್ಲ, ಆಟಗಾರರೂ ಮಳೆಯ ಕಿರಿಕಿರಿ ಅನುಭವಿಸದಂತೆ ಮಾಡಿದೆ. ಕೆಎಸ್‌'ಸಿಎಯಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾರ್ಯದರ್ಶಿ ಸುಧಾಕರ್ ರಾವ್, ‘‘ಈ ಹಿಂದೆಲ್ಲಾ ಮಳೆ ಬಂದಾಗ ಪಂದ್ಯ ಅರ್ಧಕ್ಕೇ ಮೊಟಕುಗೊಂಡು ಸಾಕಷ್ಟು ನಷ್ಟ ಅನುಭವಿಸಬೇಕಾಗಿತ್ತು. ಆದರೆ ಮುಂದಿನ ದಿನಗಳಲ್ಲಿ ಅಂತಹ ಯಾವುದೇ ಸಮಸ್ಯೆಗಳು ಉದ್ಭವಿಸುವುದಿಲ್ಲ. ಏಕೆಂದರೆ ಸಬ್ ಏರ್ ಯಂತ್ರ ಇಂತಹದಕ್ಕೆಲ್ಲಾ ಬ್ರೇಕ್ ಹಾಕಲಿದೆ. ಮೈದಾನಲ್ಲಿ ಮಳೆ ಬಂದು ನೀರು ಸಂಗ್ರಹವಾಗುತ್ತಿದ್ದಂತೆ ಸಬ್ ಏರ್ ವ್ಯವಸ್ಥೆ ಸ್ವಯಂ ಚಾಲಿತವಾಗಿ ಪ್ರಾರಂಭವಾಗಲಿದೆ. ಅಂಗಣದಲ್ಲಿ ನಿಂತ ನೀರು ಕ್ರಮೇಣ ಇಂಗಿ ಒಂದೆಡೆ ಶೇಖರಣೆಗೊಳ್ಳುತ್ತದೆ. ನಂತರ ಮೈದಾನ ಆಡುವುದಕ್ಕೆ ಅಣಿಯಾಗುತ್ತದೆ’’ ಎಂದು ತಿಳಿಸಿದರು.

ಮಳೆಗಿಂತ ವೇಗವಾಗಿ ಮೈದಾನದಲ್ಲಿ ನಿಂತ ನೀರು ಇಂಗುವ ಗುಂಡಿಗಳ ಮೂಲಕ ಅಳವಡಿಸಲಾಗಿರುವ ಪೈಪ್‌'ನಲ್ಲಿ ಹರಿದು ಹೋಗಲಿದೆ. ನಿಮಿಷ ಒಂದಕ್ಕೆ 10,000 ಲೀಟರ್‌'ಗಳಷ್ಟು ವೇಗವಾಗಿ ಇಂಗುವುದರಿಂದ ಪಂದ್ಯ ಮೊದಲಿನಂತೆ ವಿಳಂಬವಾಗಿ ಆರಂಭವಾಗುವುದಿಲ್ಲ ಎಂದು ವಕ್ತಾರ ವಿನಯ್ ಮೃತ್ಯುಂಜಯ ಹೇಳಿದರು.

ಈ ತಂತ್ರಜ್ಞಾನದಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಆರ್ಥಿಕವಾಗಿ ಲಾಭವಾಗಿದೆ. ಹಾಗೆ ಮುಂದಿನ ದಿನಗಳಲ್ಲಿ ಆರೋಗ್ಯಕರ ಕ್ರೀಡೆಗೆ ಇದು ವೇದಿಕೆಯಾಗಿದೆ ಎಂದರು. ಮೈದಾನಕ್ಕೆ ಈ ತಂತ್ರಜ್ಞಾನವನ್ನು ಅಳವಡಿಸುವ ಹಿಂದೆ ಸಾಕಷ್ಟು ಜನರ ಪರಿಶ್ರಮವಿದೆ. ಪಿಚ್ ಕ್ಯೂರೇಟರ್ ಶ್ರೀರಾಮ್ ಮತ್ತು ಅವರ ತಂಡ ಹಗಲು-ರಾತ್ರಿ ಎನ್ನದೇ ಕಾರ್ಯನಿರ್ವಹಿಸಿದೆ. ಅಲ್ಲದೇ ಈ ಹಿಂದಿನ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಖುದ್ದಾಗಿ ಭೇಟಿ ನೀಡಿ ಸಬ್ ಏರ್‌'ನ ಕಾರ್ಯ ಪ್ರಗತಿಯನ್ನು ಗಮನಿಸಿದ್ದಾರೆ ಎಂದು ಅವರು ತಿಳಿಸಿದರು.

ಸಬ್ ಏರ್ ಹೇಗೆ ಅಳವಡಿಸಿದ್ದು?

ಸಬ್ ಏರ್ ಎನ್ನುವುದು ಅತ್ಯಾಧುನಿಕ ತಂತ್ರಜ್ಞಾನವಾಗಿದ್ದು, ಇದನ್ನು ಅಳವಡಿಸುವುದಕ್ಕಾಗಿ ಕ್ರೀಡಾಂಗಣದಲ್ಲಿ 1000 ಟ್ರಕ್ ಲೋಡ್‌'ಗಳಷ್ಟು ಮಣ್ಣನ್ನು ಹೊರತೆಗೆಯಲಾಗಿದೆ. ನಂತರ ಗೇಡಿಂಗ್, ಕಂಪ್ಯಾಕ್ಷನ್, ಜಿಯೊ-ಟೆಕ್ಸ್‌ಟೈಲ್‌'ನ್ನು ಅಳವಡಿಸಲಾಗಿದೆ. ಟ್ರೆಂಜಿಂಗ್, 150 ಎಂಎಂನಿಂದ 800 ಎಂಎಂ ಅಳತೆಯ ಪರ್ಫಾ ರೇಟಡ್ ಪೈಪ್‌ಗಳನ್ನು 4.5 ಕಿ.ಮೀ.ಗಳಷ್ಟು ಉದ್ದದಲ್ಲಿ ಅಂಗಣದ ಸುತ್ತ ಅಳವಡಿಸಲಾಗಿದೆ. ಜಲ್ಲಿ ಪದರ ಮತ್ತು ಉತ್ತಮ ಗುಣಮಟ್ಟದ ಮಣ್ಣಿನ ಪದರವನ್ನು ಸಾವಯವ ಗೊಬ್ಬರದೊಂದಿಗೆ ಮಿಶ್ರಣ ಮಾಡಿ ಬರ್ಮುಡಾ ಹುಲ್ಲನ್ನು ಬೆಳೆಸಲಾಗಿದೆ.

ಭೂಮಿಯ ಒಳಗಿನ ಪೈಪ್ ಸಬ್ ಏರ್ ವ್ಯವಸ್ಥೆಗೆ ಸಂಪರ್ಕ ಕಲ್ಪಿಸಲಾಗಿದ್ದು, ಮೈದಾನದಲ್ಲಿ ಇಂಗುವ ನೀರು ಹುಲ್ಲಿಗೆ ಅಗತ್ಯವಿರುವ ನೀರನ್ನಷ್ಟೇ ಹೀರಿಕೊಳ್ಳಲಿದ್ದು, ಉಳಿದದ್ದು ಪೈಪ್ ಮೂಲಕ ಯಂತ್ರ ಇಟ್ಟಿರುವ ಕೊಠಡಿಗೆ ಹೋಗಿ ಅಲ್ಲಿಯೇ ಸಂಗ್ರಹವಾಗುತ್ತದೆ. ನಂತರ ಆ ನೀರನ್ನು ಕ್ರೀಡಾಂಗಣದ ಇತರೆ ಉಪಯೋಗ ಮತ್ತು ಮಳೆ ಕೊಯಿಲಿನ ವ್ಯವಸ್ಥೆಗೆ ಬಳಸಿಕೊಳ್ಳಲಾಗುತ್ತದೆ.

ಕೃಪೆ: ಕನ್ನಡಪ್ರಭ