ತಿರುವನಂತಪುರಂ(ಡಿ.01): ಭಾರತೀಯ ಶೂಟಿಂಗ್‌ನಲ್ಲಿ ದಿನಕ್ಕೊಂದು ಹೊಸ ತಾರೆಯ ಉದಯವಾಗುತ್ತಿದೆ. ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶೂಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ತೆಲಂಗಾಣದ 13 ವರ್ಷದ ಇಶಾ ಸಿಂಗ್‌ 3 ಚಿನ್ನದ ಪದಕ ಗೆದ್ದು ಎಲ್ಲರನ್ನು ಬೆರಗಾಗಿಸಿದ್ದಾರೆ. 

ಈಕೆಯ ಸಾಧನೆ ದೇಶದ ಗಮನ ಸೆಳೆಯುತ್ತಿರುವುದಕ್ಕೆ ಕಾರಣವಿದೆ. ಕಿರಿಯರ, ಕಿರಿಯ ಮಹಿಳೆಯರ ಹಾಗೂ ಮಹಿಳೆಯರ ವಿಭಾಗದ 10 ಮೀ. ಏರ್‌ ಪಿಸ್ತೂಲ್‌ ಶೂಟಿಂಗ್‌ನಲ್ಲಿ ಇಶಾ ಚಿನ್ನದ ಪದಕ ಗೆದ್ದಿದ್ದಾರೆ. ತಮ್ಮ ಸಾಧನೆಯ ಹಾದಿಯಲ್ಲಿ ಇಶಾ, ಭಾರತದ ಶೂಟಿಂಗ್‌ ತಾರೆಗಳಾದ ಹೀನಾ ಸಿಧು, ಮನು ಭಾಕರ್‌, ಶ್ವೇತಾ ಸಿಂಗ್‌ರನ್ನು ಹಿಂದಿಕ್ಕಿದ್ದಾರೆ.

ಮಹಿಳೆಯರ ವಿಭಾಗದ ಫೈನಲ್‌ನಲ್ಲಿ 241 ಅಂಕ ಗಳಿಸಿದ ಇಶಾ ಮೊದಲ ಸ್ಥಾನ ಪಡೆದರು. ಕಿರಿಯರ ವಿಭಾಗದಲ್ಲೂ ಮೇಲುಗೈ ಸಾಧಿಸಿದ ಇಶಾ, ಕಿರಿಯ ಮಹಿಳಾ ವಿಭಾಗದಲ್ಲೂ ತಮ್ಮ ಲಯ ಮುಂದುವರಿಸಿ ಮತ್ತೊಮ್ಮೆ ಮನು ಭಾಕರ್‌ರನ್ನು ಹಿಂದಿಕ್ಕಿದರು. ಒಂದೇ ದಿನ ಇಶಾ 3 ಚಿನ್ನ ಸೇರಿ ಒಟ್ಟು 5 ಪದಕ ಗೆದ್ದು ಶೂಟಿಂಗ್‌ ಜಗತ್ತನ್ನು ಬೆರಗಾಗಿಸಿದರು.