ರಾಷ್ಟ್ರೀಯ ಕಿರಿಯರ ಈಜು: ಕರ್ನಾಟಕ ತಂಡ ಚಾಂಪಿಯನ್
ರಾಷ್ಟ್ರೀಯ ಕಿರಿಯರ ಈಜು ಸ್ಪರ್ಧೆಯಲ್ಲಿ ಕರ್ನಾಟಕ ಈಜು ತಂಡ ಚಾಂಪಿಯನ್
78 ಪದಕಗಳೊಂದಿಗೆ ಕರ್ನಾಟಕ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದೆ
ಕರ್ನಾಟಕ 38 ಚಿನ್ನ, 24 ಬೆಳ್ಳಿ ಹಾಗೂ 16 ಕಂಚು ಸೇರಿದಂತೆ ಒಟ್ಟು 78 ಪದಕಗಳನ್ನು ಜಯಿಸಿದೆ
ಭುವನೇಶ್ವರ(ಜು.21): 48ನೇ ಕಿರಿಯರ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ನಲ್ಲಿ 26 ರಾಷ್ಟ್ರೀಯ ದಾಖಲೆಗಳನ್ನು ನಿರ್ಮಾಣವಾಗಿದ್ದು, 78 ಪದಕಗಳೊಂದಿಗೆ ಕರ್ನಾಟಕ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕೂಟದ ಕೊನೆ ದಿನವಾದ ಬುಧವಾರ ರಾಜ್ಯದ ಹಷಿಕಾ ರಾಮಚಂದ್ರ ಬಾಲಕಿಯರ 2ನೇ ವಿಭಾಗದ 400 ಮೀ. ಮೆಡ್ಲೆಯಲ್ಲಿ 5 ನಿಮಿಷ 10.70 ಸೆಕೆಂಡ್‌ಗಳಲ್ಲಿ ಗುರಿ ತಲುಪಿ, ಮಹಾರಾಷ್ಟ್ರದ ಅಪೇಕ್ಷಾ ನಿರ್ಮಿಸಿದ್ದ (5.13.80) ದಾಖಲೆಯನ್ನು ಮುರಿದರು. 200 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ರಾಜ್ಯದ ಲಕ್ಷ್ಯ ಹಾಗೂ ಸಾನ್ವಿ ರಾವ್ ಕ್ರಮವಾಗಿ ಬೆಳ್ಳಿ, ಕಂಚು ಗೆದ್ದುಕೊಂಡರು.
ಬಾಲಕರ 1ನೇ ವಿಭಾಗ(15-17 ವರ್ಷ)ದಲ್ಲಿ ರಾಜ್ಯದ ಉತ್ಕಷ್‌ರ್ ಪಾಟೀಲ್, 2ನೇ ವಿಭಾಗ(12-14 ವರ್ಷ)ದಲ್ಲಿ ನವನೀತ್ ಗೌಡ, ಬಾಲಕಿಯರ 1ನೇ ವಿಭಾಗದಲ್ಲಿ ಅಪೇಕ್ಷಾ, 2ನೇ ವಿಭಾಗದಲ್ಲಿ ಹಷಿಕಾ ಶ್ರೇಷ್ಠ ಈಜುಗಾರ ಪ್ರಶಸ್ತಿ ಪಡೆದರು. ಕೂಟದಲ್ಲಿ ಕರ್ನಾಟಕ 38 ಚಿನ್ನ, 24 ಬೆಳ್ಳಿ ಹಾಗೂ 16 ಕಂಚು ಸೇರಿದಂತೆ ಒಟ್ಟು 78 ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದರೆ, ಮಹಾರಾಷ್ಟ್ರ 42, ತೆಲಂಗಾಣ 14 ಪದಕಗಳೊಂದಿಗೆ ಕ್ರಮವಾಗಿ 2 ಮತ್ತು 3ನೇ ಸ್ಥಾನ ಗಳಿಸಿತು.
ಈ ಬಾರಿ ರಾಷ್ಟ್ರೀಯ ಗೇಮ್ಸಲ್ಲೂ ಯೋಗಾಸನ, ಮಲ್ಲಕಂಬ ಸ್ಪರ್ಧೆ
ನವದೆಹಲಿ: ಇತ್ತೀಚೆಗಷ್ಟೇ ಖೇಲೋ ಇಂಡಿಯಾ ಯುವ ಗೇಮ್ಸ್‌ನಲ್ಲಿ ಮೊದಲ ಬಾರಿ ಪರಿಚಯಿಸಲಾಗಿದ್ದ ಯೋಗಾಸನ ಹಾಗೂ ಮಲ್ಲಕಂಬ ಸ್ಪರ್ಧೆಗಳನ್ನು 36ನೇ ರಾಷ್ಟ್ರೀಯ ಗೇಮ್ಸ್‌ಗೂ ಸೇರ್ಪಡೆಗೊಳಿಸಲಾಗಿದೆ. ‘ಈ ಬಾರಿ ರಾಷ್ಟ್ರೀಯ ಗೇಮ್ಸ್‌ನಲ್ಲಿ ಯೋಗಾಸನ, ಮಲ್ಲಕಂಬ ಸೇರಿ 36 ಸ್ಪರ್ಧೆಗಳು ನಡೆಯಲಿದ್ದು, 28 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ’ ಎಂದು ಭಾರತೀಯ ಒಲಿಂಪಿಕ್ ಸಂಸ್ಥೆ ಬುಧವಾರ ಮಾಹಿತಿ ನೀಡಿದೆ.
ರಾಷ್ಟ್ರೀಯ ಕಿರಿಯರ ಈಜು: ಮತ್ತೆ ಮುಂದುವರೆದ ಕರ್ನಾಟಕದ ಪ್ರಾಬಲ್ಯ
2015ರಲ್ಲಿ ಕೇರಳದಲ್ಲಿ ನಡೆದಿದ್ದ ಗೇಮ್ಸ್‌ನಲ್ಲಿ 33 ಸ್ಪರ್ಧೆಗಳು ನಡೆದಿತ್ತು. ಈ ಬಾರಿ ಸ್ಕೇಟಿಂಗ್, ಸಾಫ್ಟ್‌ಬಾಲ್ ಹಾಗೂ ಸಾಫ್ಟ್‌ಟೆನಿಸ್ ಹೊಸದಾಗಿ ಸೇರ್ಪಡೆಗೊಳಿಸಲಾಗಿದೆ. ಆದರೆ ಬೀಚ್ ಹ್ಯಾಂಡ್‌ಬಾಲ್, ಬೀಚ್ ವಾಲಿಬಾಲ್ ಹಾಗೂ ಯಾಕ್ಟಿಂಗ್ ಸ್ಪರ್ಧೆಗಳನ್ನು ಕೈ ಬಿಡಲಾಗಿದೆ. ಖೇಲೋ ಇಂಡಿಯಾ ಯುವ ಗೇಮ್ಸ್ ಗುಜರಾತ್‌ನಲ್ಲಿ ಸೆಪ್ಟೆಂಬರ್ 27ರಿಂದ ಅಕ್ಟೋಬರ್ 10ರ ವರೆಗೆ ನಿಗದಿಯಾಗಿದ್ದು, 6 ನಗರಗಳಾದ ಗಾಂಧಿನಗರ, ಅಹಮದಾಬಾದ್, ಸೂರತ್, ವಡೋದರಾ, ರಾಜ್‌ಕೋಟ್ ಹಾಗೂ ಭಾವ್‌ನಗರ್ ಅತಿಥ್ಯ ವಹಿಸಲಿವೆ.
ತೈಪೆ ಓಪನ್ ಬ್ಯಾಡ್ಮಿಂಟನ್: ಕಶ್ಯಪ್, ಮಿಥುನ್‌ಗೆ ಜಯ
ತೈಪೆ: ತೈಪೆ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಪಾರುಪಳ್ಳಿ ಕಶ್ಯಪ್, ಮಿಥುನ್ ಮಂಜುನಾಥ್, ಪ್ರಿಯಾನ್ಶು ರಾಜಾವತ್ 2ನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಬುಧವಾರ ಪುರುಷರ ಸಿಂಗಲ್ಸ್‌ನಲ್ಲಿ ಕಶ್ಯಪ್ ಚೈನೀಸ್ ತೈಪೆಯ ಚಿ ಯು ಯೆನ್ ವಿರುದ್ಧ ಗೆದ್ದರೆ, ಬೆಂಗಳೂರಿನ ಮಿಥುನ್ ಡೆನ್ಮಾರ್ಕ್ನ ಕಿಮ್ ಬ್ರುನ್ ವಿರುದ್ಧ ಜಯಭೇರಿ ಬಾರಿಸಿದರು. ಪ್ರಿಯಾನ್ಶು ಆತಿಥೇಯ ದೇಶದ ಯು ಶೆಂಗ್‌ರನ್ನು ಸೋಲಿಸಿದರು. ಕಿರಣ್ ಜಾರ್ಜ್, ಇಮಾದ್ ಫಾರೂಖಿ ಕೂಡಾ ಶುಭಾರಂಭ ಮಾಡಿದರು. ಮಹಿಳಾ ಸಿಂಗಲ್ಸ್‌ನಲ್ಲಿ ತನ್ಯಾ ಹೇಮಂತ್, ಮಾಳವಿಕಾ ಬನ್ಸೋದ್ ಸೋತು ಹೊರಬಿದ್ದರು.