ನವದೆಹಲಿ(ಅ.18):  ಐಪಿಎಲ್ ಟೂರ್ನಿಯ ಕಳೆದ ಹನ್ನೊಂದು ಆವೃತ್ತಿಗಳಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಬಲಿಷ್ಠ ತಂಡವನ್ನೇ ಕಣಕ್ಕಿಳಿಸಿದೆ. ಆದರೂ ಇದುವರೆಗೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಇದೀಗ 12ನೇ ಆವೃತ್ತಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ತಂಡವನ್ನ ಮತ್ತಷ್ಟು ಬಲ ಪಡಿಸಲು ನಿರ್ಧರಿಸಿದೆ.

ಕಳೆದ ಆವೃತ್ತಿಯಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡಕ್ಕೆ ರಿಕಿ ಪಾಂಟಿಂಗ್ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಈ ಬಾರಿಯೂ ರಿಕಿ ಪಾಂಟಿಂಗ್ ಮುಖ್ಯ ಕೋಚ್ ಆಗಿ ಮುಂದುವರಿಯಲಿದ್ದಾರೆ. ಇದರ ಜೊತೆಗೆ ಸಹಾಯಕ ಕೋಚ್ ಆಗಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ನೇಮಕ ಮಾಡಲು ಡೆಲ್ಲಿ ತಂಡ ಮುಂದಾಗಿದೆ.

11ನೇ ಐಪಿಎಲ್ ಆವೃತ್ತಿಯಲ್ಲಿ ಮೊಹಮ್ಮದ್ ಕೈಫ್ ಗುಜರಾತ್ ಲಯನ್ಸ್ ತಂಡದ ಸಹಾಯಕ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಬ್ರಾಡ್ ಹಾಡ್ಜ್ ಮುಖ್ಯ ಕೋಚ್ ಆಗಿದ್ದರು.

2000ನೇ ಇಸವಿಯಲ್ಲಿ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ಮೊಹಮ್ಮದ್ ಕೈಪ್, 2018ರ ಜುಲೈನಲ್ಲಿ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಇದೀಗ ಐಪಿಎಲ್ ಟೂರ್ನಿಯಲ್ಲಿ ಸಕ್ರೀಯರಾಗಿರೋ ಕೈಫ್, ಶೀಘ್ರದಲ್ಲೇ ಡೆಲ್ಲಿ ತಂಡ ಸೇರಿಕೊಳ್ಳೋ ಸಾಧ್ಯತೆ ಇದೆ.