ನವದೆಹಲಿ[ಜು.23]: ಇಂದಿನಿಂದ ಮೆಲ್ಬರ್ನ್‌ನಲ್ಲಿ ಆರಂಭವಾಗಲಿರುವ ಐಟಿಟಿಎಫ್ ವಿಶ್ವ ಟೂರ್ ಆಸ್ಟ್ರೇಲಿಯನ್ ಓಪನ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಳ್ಳಬೇಕಿದ್ದ ಭಾರತದ 7 ಟಿಟಿ ಸ್ಪರ್ಧಿಗಳು ವಿಮಾನ ನಿಲ್ದಾಣದಲ್ಲಿಯೇ ಕಾಲ ಕಳೆಯಬೇಕಾದ ಪರಿಸ್ಥಿತಿ ಬಂದಿದೆ. 

ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಿಗದಿತ ವೇಳೆಗಿಂತ ತಡವಾಗಿ ಬಂದಿದ್ದರಿಂದ ಭಾರತದ ತಾರಾ ಟೇಬಲ್ ಟೆನಿಸ್ ಆಟಗಾರ್ತಿ ಮನಿಕಾ ಬಾತ್ರ ಜತೆಗೆ 6 ಟಿಟಿ ಸ್ಪರ್ಧಿಗಳನ್ನು ಏರ್ ಇಂಡಿಯಾ ವಿಮಾನ, ನಿಲ್ದಾಣದಲ್ಲಿಯೇ ಬಿಟ್ಟು ಹೋಗಿದೆ.

ಈ ವಿಚಾರವನ್ನು ಕಾಮನ್’ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಮನಿಕಾ ಬಾತ್ರ ಟ್ವಿಟರ್’ನಲ್ಲಿ ಹಂಚಿಕೊಂಡಿದ್ದು, ಸಮಸ್ಯೆ ಬಗೆಹರಿಸುವಂತೆ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಹಾಗೂ ಪ್ರಧಾನ ಮಂತ್ರಿ ಸಚಿವಾಲಯದ ಬಳಿ ಮನವಿ ಮಾಡಿಕೊಂಡಿದ್ದರು.

ಮನಿಕಾ ಬಾತ್ರ ಟ್ವೀಟ್’ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕ್ರೀಡಾ ಮಹಾ ನಿರ್ದೇಶಕ ನೀಲಂ ಕಪೂರ್, ಶೀಘ್ರದಲ್ಲೇ ಕ್ರಮ ಕೈಗೊಳ್ಳುವುದಾಗಿ ರೀಟ್ವೀಟ್ ಮಾಡಿದ್ದಾರೆ.