ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್: ಸೆಮೀಸ್‌ನಲ್ಲಿ ಮುಗ್ಗರಿಸಿದ ಸೈನಾ
2019ರ ಮೊದಲ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯೊಂದಿಗೆ ಅಂಗಣಕ್ಕಿಳಿದಿದ್ದ ಭಾರತದ ಟೆನಿಸ್ ತಾರೆ ಸೈನಾ ನೆಹ್ವಾಲ್ ಮುಗ್ಗರಿಸಿದ್ದಾರೆ. ಈ ಮೂಲಕ ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಮಹಿಳಾ ಸವಾಲು ಅಂತ್ಯಗೊಂಡಿದೆ. ಇಲ್ಲಿದೆ ಹೈಲೈಟ್ಸ್.
ಕೌಲಾಲಂಪುರ(ಜ.20): ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. ಮಹಿಳಾ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಸೈನಾ ನೆಹ್ವಾಲ್ ಹಾಲಿ ಒಲಿಂಪಿಕ್ ಹಾಗೂ ವಿಶ್ವ ಚಾಂಪಿಯನ್ ಸ್ಪೇನ್‌ನ ಕ್ಯಾರೋಲಿನಾ ಮರಿನ್ ವಿರುದ್ಧ 16-21, 13-21 ನೇರ ಗೇಮ್‌ಗಳಲ್ಲಿ ಪರಾಭವಗೊಂಡರು.
ಇದನ್ನೂ ಓದಿ: ಆಸ್ಪ್ರೇಲಿಯನ್ ಓಪನ್: ಜೋಕೋ, ಹಾಲೆಪ್ ಗೆಲುವಿನ ಓಟ
28 ವರ್ಷದ ಭಾರತೀಯ ಆಟಗಾರ್ತಿ ಇಲ್ಲಿ 2017ರಲ್ಲಿ ಪ್ರಶಸ್ತಿ ಗೆದ್ದಿದ್ದರು. 2011ರಲ್ಲಿ ರನ್ನರ್-ಅಪ್ ಆಗಿದ್ದ ಸೈನಾ ಕೇವಲ 40 ನಿಮಿಷಗಳಲ್ಲಿ ಸೋಲೊಪ್ಪಿಕೊಂಡರು. ಇದರೊಂದಿಗೆ ವರ್ಷದ ಮೊದಲ ಸೂಪರ್ 500 ವಿಶ್ವ ಟೂರ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆಲ್ಲುವ ಅವರ ಕನಸು ಭಗ್ನಗೊಂಡಿತು.
ಮೊದಲ ಗೇಮ್‌ನಲ್ಲಿ 5-2ರ ಮುನ್ನಡೆಯೊಂದಿಗೆ ಉತ್ತಮ ಆರಂಭ ಪಡೆದ ಸೈನಾ ಬಳಿಕ ಮಂಕಾದರು. ಆದರೂ ಹೋರಾಡಿ 14-14ರಲ್ಲಿ ಸಮಬಲ ಸಾಧಿಸಿದ ಭಾರತೀಯ ಆಟಗಾರ್ತಿ ವಿರುದ್ಧ ಸತತ 6 ಅಂಕ ಗಳಿಸಿದ ಮರಿನ್ ಕೇವಲ 20 ನಿಮಿಷಗಳಲ್ಲಿ 1-0 ಗೇಮ್‌ಗಳ ಮುನ್ನಡೆ ಪಡೆದರು.
ದ್ವಿತೀಯ ಗೇಮ್‌ನಲ್ಲಿ ಬಿಡುವಿನ ವೇಳೆಗೆ 11-6ರ ಮುನ್ನಡೆ ಸಾಧಿಸಿದ ಮರಿನ್, ಸೈನಾಗೆ ಪುಟಿದೇಳಲು ಅವಕಾಶ ನೀಡಲಿಲ್ಲ. 8 ಅಂಕಗಳ ಅಂತರದಲ್ಲಿ ಗೇಮ್ ತನ್ನದಾಗಿಸಿಕೊಂಡು ಮರಿನ್ ಪಂದ್ಯ ಜಯಿಸಿದರು.