೮ ವರ್ಷಗಳ ಬಳಿಕ ಗ್ರ್ಯಾನ್‌ಸ್ಲಾಂ ಫೈನಲ್‌ ತಲುಪಿದ ಮ್ಯಾಡಿಸನ್ ಕೀಸ್, ಆಸ್ಟ್ರೇಲಿಯನ್ ಓಪನ್‌ನಲ್ಲಿ ಮೊದಲ ಗ್ರ್ಯಾನ್‌ಸ್ಲಾಂ ಗೆದ್ದರು. ವಿಶ್ವ ನಂ.1 ಸಬಲೆಂಕಾ ವಿರುದ್ಧ 6-3, 2-6, 7-5 ಸೆಟ್‌ಗಳಲ್ಲಿ ರೋಚಕ ಜಯ ಸಾಧಿಸಿದ ಕೀಸ್, ೨೦೦೫ರ ಸೆರೆನಾ ವಿಲಿಯಮ್ಸ್ ನಂತರ ವಿಶ್ವದ ಅಗ್ರ-೨ ಆಟಗಾರ್ತಿಯರನ್ನು ಸೋಲಿಸಿದವರಾದರು. ₹೧೯.೦೫ ಕೋಟಿ ಬಹುಮಾನ ಗೆದ್ದರು.

ಮೆಲ್ಬರ್ನ್‌: ಛಲ, ನಂಬಿಕೆ ಇದ್ದರೆ ಎಲ್ಲವೂ ಸಾಧ್ಯ ಎನ್ನುವುದನ್ನು ಅಮೆರಿಕದ ಟೆನಿಸ್‌ ಆಟಗಾರ್ತಿ ಮ್ಯಾಡಿಸನ್‌ ಕೀಸ್‌ ತೋರಿಸಿಕೊಟ್ಟಿದ್ದಾರೆ. 8 ವರ್ಷ ಬಳಿಕ ಗ್ರ್ಯಾನ್‌ ಸ್ಲಾಂ ಫೈನಲ್‌ ಪ್ರವೇಶಿಸಿದ್ದ ಮ್ಯಾಡಿಸನ್‌, ಶನಿವಾರ ಆಸ್ಟ್ರೇಲಿಯನ್‌ ಓಪನ್‌ ಮಹಿಳಾ ಚಾಂಪಿಯನ್‌ ಆಗಿ ಹೊರಹೊಮ್ಮಿದರು.

46ನೇ ಬಾರಿಗೆ ಗ್ರ್ಯಾನ್‌ ಸ್ಲಾಂನಲ್ಲಿ ಆಡಿದ ಮ್ಯಾಡಿಸನ್‌, 2023, 2024ರಲ್ಲಿ ‘ಆಸ್ಟ್ರೇಲಿಯನ್‌ ರಾಣಿ’ಯಾಗಿದ್ದ ಬೆಲಾರುಸ್‌ನ ಅರೈನಾ ಸಬಲೆಂಕಾ ವಿರುದ್ಧ ಫೈನಲ್‌ನಲ್ಲಿ 6-3, 2-6, 7-5 ಸೆಟ್‌ಗಳಲ್ಲಿ ರೋಚಕ ಗೆಲುವು ಸಾಧಿಸಿ, ಮೊದಲ ಬಾರಿಗೆ ಗ್ರ್ಯಾನ್‌ ಸ್ಲಾಂ ಟ್ರೋಫಿಗೆ ಮುತ್ತಿಟ್ಟರು.

ವಿಶ್ವ ನಂ.1 ಸಬಲೆಂಕಾ ವಿರುದ್ಧ ಅತ್ಯುತ್ತಮ ಆಟ ಪ್ರದರ್ಶಿಸಿದ ಕೀಸ್‌, ಸೆಮೀಸ್‌ನಲ್ಲಿ ವಿಶ್ವ ನಂ.2 ಇಗಾ ಸ್ವಿಯಾಟೆಕ್‌ ವಿರುದ್ಧ ಜಯಿಸಿದ್ದರು. ಇದರೊಂದಿಗೆ 2005ರಲ್ಲಿ ಸೆರೆನಾ ವಿಲಿಯಮ್ಸ್‌ ಬಳಿಕ ಮೆಲ್ಬರ್ನ್‌ ಪಾರ್ಕ್‌ನಲ್ಲಿ ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರ-2 ಸ್ಥಾನದಲ್ಲಿರುವ ಆಟಗಾರ್ತಿಯರಿಬ್ಬರನ್ನೂ ಸೋಲಿಸಿದ ಮೊದಲ ಆಟಗಾರ್ತಿ ಎನಿಸಿದರು.

ಆಸ್ಟ್ರೇಲಿಯನ್ ಓಪನ್: ಜೋಕೋವಿಚ್ 25ನೇ ಗ್ರ್ಯಾನ್‌ಸ್ಲಾಂ ಕನಸು ಭಗ್ನ!

ಫೈನಲ್‌ಗೂ ಮುನ್ನ ವಿಶ್ವ ರ್‍ಯಾಂಕಿಂಗ್‌ನಲ್ಲಿ 14ನೇ ಸ್ಥಾನದಲ್ಲಿದ್ದ ಕೀಸ್‌, ಈ ಟೂರ್ನಿಯಲ್ಲಿ 19ನೇ ಶ್ರೇಯಾಂಕ ಪಡೆದಿದ್ದರು. 2017ರ ಯುಎಸ್‌ ಓಪನ್‌ನ ಫೈನಲ್‌ನಲ್ಲಿ ಆಡಿದ್ದ ಕೀಸ್‌, ಆ ನಂತರ ಗ್ರ್ಯಾನ್‌ ಸ್ಲಾಂ ಫೈನಲ್‌ಗೇರಿದ್ದು ಇದೇ ಮೊದಲು.

ಶನಿವಾರ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರ ಮುಂದೆ, ಟ್ರೋಫಿ ಗೆಲ್ಲುವ ನೆಚ್ಚಿನ ಆಟಗಾರ್ತಿ ಎನಿಸಿದ್ದ ಸಬಲೆಂಕಾ ವಿರುದ್ಧ ಕೀಸ್‌ ಅಮೋಘ ಆಟ ತೋರಿದರು.

ಮೊದಲ ಸೆಟ್‌ ಗೆದ್ದು ಆರಂಭಿಕ ಮುನ್ನಡೆ ಪಡೆದ ಮ್ಯಾಡಿಸನ್‌ಗೆ 2ನೇ ಸೆಟ್‌ನಲ್ಲಿ ಪ್ರಬಲ ಪೈಪೋಟಿ ಎದುರಾಯಿತು. ಅಷ್ಟು ಸುಲಭಕ್ಕೆ ಸೋಲು ಒಪ್ಪಿಕೊಳ್ಳಲು ಸಬಲೆಂಕಾ ಸಿದ್ಧರಿರಲಿಲ್ಲ. 2ನೇ ಸೆಟ್‌ ಬೆಲಾರುಸ್‌ ಆಟಗಾರ್ತಿ ಪಾಲಾದ ಬಳಿಕ ಚಾಂಪಿಯನ್‌ ಯಾರು ಎನ್ನುವುದನ್ನು ತಿಳಿದುಕೊಳ್ಳಲು 3ನೇ ಸೆಟ್‌ ಮುಗಿಯುವ ವರೆಗೂ ಕಾಯಬೇಕಾಯಿತು. ಅಂತಿಮ ಸೆಟ್‌ನಲ್ಲೂ ಇಬ್ಬರೂ ಆಟಗಾರ್ತಿಯರು ಭರ್ಜರಿ ಪೈಪೋಟಿ ನಡೆಸಿದರು. ಆದರೆ ಕೊನೆಗೆ ಸೆಟ್‌ ತಮ್ಮದಾಗಿಸಿಕೊಂಡ ಕೀಸ್‌, ಪಂದ್ಯ ಗೆದ್ದು ಭಾವುಕರಾದರು.

ವಿಶ್ವಕಪ್ ಖೋ ಖೋ ವಿಜೇತ ತಂಡದ ರಾಜ್ಯದ ಆಟಗಾರರಿಗೆ ₹5 ಲಕ್ಷ ಬಹುಮಾನ; ಸಿಎಂ ಸಿದ್ದರಾಮಯ್ಯ

₹19.05 ಕೋಟಿ: ಚಾಂಪಿಯನ್ ಮ್ಯಾಡಿಸನ್‌ ಕೀಸ್‌ಗೆ ಸಿಕ್ಕ ಬಹುಮಾನ ಮೊತ್ತ.

₹10.34 ಕೋಟಿ: ರನ್ನರ್‌-ಅಪ್‌ ಸಬಲೆಂಕಾಗೆ ಸಿಕ್ಕ ಬಹುಮಾನ ಮೊತ್ತ.

ಇಂದು ಸಿನ್ನರ್‌ vs ಜ್ವೆರೆವ್‌ ಫೈನಲ್‌

ಪುರುಷರ ಸಿಂಗಲ್ಸ್‌ ಫೈನಲ್‌ ಭಾನುವಾರ ನಡೆಯಲಿದ್ದು, ಪ್ರಶಸ್ತಿಗಾಗಿ ವಿಶ್ವ ನಂ.1 ಆಟಗಾರ ಇಟಲಿಯ ಯಾನ್ನಿಕ್‌ ಸಿನ್ನರ್‌ ಹಾಗೂ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಸೆಣಸಲಿದ್ದಾರೆ. ಹಾಲಿ ಚಾಂಪಿಯನ್‌ ಸಿನ್ನರ್‌ ಸತತ 2ನೇ ಆಸ್ಟ್ರೇಲಿಯನ್‌ ಓಪನ್‌ ಹಾಗೂ ಒಟ್ಟಾರೆ 3ನೇ ಗ್ರ್ಯಾನ್‌ ಸ್ಲಾಂ ಗೆಲ್ಲಲು ಕಾತರಿಸುತ್ತಿದ್ದರೆ, 3ನೇ ಬಾರಿಗೆ ಗ್ರ್ಯಾನ್‌ ಸ್ಲಾಂ ಫೈನಲ್‌ ಪ್ರವೇಶಿಸಿರುವ ಜ್ವೆರೆವ್‌ ಚೊಚ್ಚಲ ಪ್ರಶಸ್ತಿ ಗೆಲುವಿನ ಮೇಲೆ ಕಣ್ಣಿಟ್ಟಿದ್ದಾರೆ.

ಸಿನ್ನರ್‌ ಹಾಗೂ ಜ್ವೆರೆವ್‌ ಎಟಿಪಿ ಟೂರ್ನಿಗಳಲ್ಲಿ ಈವರೆಗೂ ಒಟ್ಟು 6 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಜ್ವೆರೆವ್‌ 4 ಪಂದ್ಯಗಳಲ್ಲಿ ಗೆದ್ದರೆ, ಸಿನ್ನರ್‌ಗೆ 2 ಪಂದ್ಯದಲ್ಲಿ ಜಯ ಸಿಕ್ಕಿದೆ.