ಲಂಡನ್‌[ಸೆ.26]: ಕ್ರೊವೇಷಿಯಾ ಹಾಗೂ ರಿಯಲ್‌ ಮ್ಯಾಡ್ರಿಡ್‌ನ ತಾರಾ ಮಿಡ್‌ಫೀಲ್ಡರ್‌ ಲೋಕಾ ಮೋಡ್ರಿಚ್‌, ಕ್ರಿಸ್ಟಿಯಾನೋ ರೊನಾಲ್ಡೋ ಹಾಗೂ ಲಿಯೋನೆಲ್‌ ಮೆಸ್ಸಿಯ ದಶಕದ ಪ್ರಾಬಲ್ಯಕ್ಕೆ ತೆರೆ ಎಳೆದಿದ್ದಾರೆ. 

ದಿಗ್ಗಜ ಆಟಗಾರರಿಬ್ಬರನ್ನೂ ಹಿಂದಿಕ್ಕಿದ ಮೋಡ್ರಿಚ್‌ಗೆ ಸೋಮವಾರ ಇಲ್ಲಿ ನಡೆದ ಫಿಫಾ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ವರ್ಷದ ಶ್ರೇಷ್ಠ ಫುಟ್ಬಾಲಿಗ ಪ್ರಶಸ್ತಿ ಒಲಿಯಿತು. ರಿಯಲ್‌ ಮ್ಯಾಡ್ರಿಡ್‌ ತಂಡ ಸತತ 3ನೇ ಚಾಂಪಿಯನ್ಸ್‌ ಲೀಗ್‌ ಗೆಲ್ಲಲು ನೆರವಾಗಿದ್ದ ಮೋಡ್ರಿಚ್‌, ಕ್ರೊವೇಷಿಯಾ ಚೊಚ್ಚಲ ಬಾರಿಗೆ ಫಿಫಾ ಫುಟ್ಬಾಲ್‌ ವಿಶ್ವಕಪ್‌ ಫೈನಲ್‌ ಪ್ರವೇಶಿಸಲು ಸ್ಫೂರ್ತಿಯಾಗಿದ್ದರು.

‘ನಾನು ಅತ್ಯಂತ ಭಾವುಕನಾಗಿದ್ದೇನೆ. ಈ ಪ್ರಶಸ್ತಿ ಗೆಲ್ಲಲು ಅನೇಕರು ನೆರವಾಗಿದ್ದಾರೆ. ಸ್ಫೂರ್ತಿ ತುಂಬಿದ್ದಾರೆ. ನನ್ನ ಜೀವನದುದ್ದಕ್ಕೂ ಹಲವರು ನನ್ನನ್ನು ಬೆಂಬಲಿಸಿದ್ದಾರೆ’ ಎಂದು ಮೋಡ್ರಿಚ್‌ ಹೇಳಿದರು. ಪ್ರಶಸ್ತಿ ಪೈಪೋಟಿಯಲ್ಲಿದ್ದ ಈಜಿಪ್ಟ್‌ ಹಾಗೂ ಲಿವರ್‌ಪೂಲ್‌ನ ಸ್ಟ್ರೈಕರ್‌ ಮೊಹಮದ್‌ ಸಲಾಹ್‌ ಹಾಗೂ ಕ್ರಿಸ್ಟಿಯಾನೋ ರೊನಾಲ್ಡೋರನ್ನು ಮೋಡ್ರಿಚ್‌ ಹಿಂದಿಕ್ಕಿದರು.