ಖೇಲೋ ಇಂಡಿಯಾ ಯೂತ್ ಗೇಮ್ಸ್: ರಾಜ್ಯಕ್ಕೆ ಒಲಿದ 6 ಪದಕ
ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ ಕರ್ನಾಟಕ ಸಾಧಾರಣ ಪ್ರದರ್ಶನ
ಕ್ರೀಡಾಕೂಟದ 12ನೇ ದಿನ ರಾಜ್ಯಕ್ಕೆ ಒಲಿದ 6 ಪದಕ
ಸದ್ಯ ಪದಕ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿರುವ ಕರ್ನಾಟಕ
ಭೋಪಾಲ್(ಫೆ.11): ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ ಕಳೆದ ಬಾರಿಗಿಂತ ಸಾಧಾರಣ ಪ್ರದರ್ಶನ ನೀಡುತ್ತಿರುವ ಕರ್ನಾಟಕ ಕೂಟದ 12ನೇ ದಿನವಾದ ಶುಕ್ರವಾರ 6 ಪದಕಗಳನ್ನು ತನ್ನದಾಗಿಸಿಕೊಂಡಿದೆ. ಟೆನಿಸ್ನಲ್ಲಿ ಚಿನ್ನ, ಫುಟ್ಬಾಲ್ನಲ್ಲಿ ಬೆಳ್ಳಿ ಗೆದ್ದರೆ, ಉಳಿದ 4 ಪದಕಗಳು ಈಜಿನಲ್ಲಿ ದೊರೆಯಿತು.
ಬಾಲಕಿಯರ ಸಿಂಗಲ್ಸ್ ಟೆನಿಸ್ನಲ್ಲಿ ಸುಹಿತಾ ಮರೂರಿ ಫೈನಲ್ನಲ್ಲಿ ಡೆಲ್ಲಿಯ ತೇಜಸ್ವಿಯನ್ನು ಸೋಲಿಸಿ ಚಿನ್ನಕ್ಕೆ ಮುತ್ತಿಕ್ಕಿದರು. ಬಾಲಕಿಯರ 200 ಮೀ. ಬ್ಯಾಕ್ಸ್ಟ್ರೋಕ್ ಈಜಿನಲ್ಲಿ ಶಾಲಿನಿ ದೀಕ್ಷಿತ್ ಬೆಳ್ಳಿ, 200 ಮೀ. ಮೆಡ್ಲೆ ವಿಭಾಗದಲ್ಲಿ ಮಾನವಿ ವರ್ಮಾ ಹಾಗೂ ವಿಹಿತಾ ನಯನಾ ಕ್ರಮವಾಗಿ ಬೆಳ್ಳಿ, ಕಂಚು ಪಡೆದರು. 4*100 ಮೀ. ಮೆಡ್ಲೆ ಸ್ಪರ್ಧೆಯಲ್ಲಿ ಶಾಲಿನಿ, ಲಕ್ಷ್ಯಾ, ಹಾಶಿಕಾ, ಧಿನಿಧಿ ಅವರನ್ನೊಳಗೊಂಡ ರಾಜ್ಯ ತಂಡ ಬೆಳ್ಳಿ ಜಯಿಸಿತು.
ಇದೇ ವೇಳೆ ಬಾಲಕರ ಫುಟ್ಬಾಲ್ನಲ್ಲಿ ಫೈನಲ್ನಲ್ಲಿ ಕೇರಳ ವಿರುದ್ಧ 0-2 ಗೋಲುಗಳಿಂದ ಸೋತ ಕರ್ನಾಟಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತು. ಸದ್ಯ ಕರ್ನಾಟಕ 9 ಚಿನ್ನ, 19 ಬೆಳ್ಳಿ ಹಾಗೂ 19 ಕಂಚು ಸೇರಿ 47 ಪದಕಗಳೊಂದಿಗೆ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿದೆ.
ಇಂದು ಸಮಾರೋಪ
ಜನವರಿ 30ಕ್ಕೆ ಆರಂಭಗೊಂಡ ಕೂಟ ಶನಿವಾರ ಮುಕ್ತಾಯಗೊಳ್ಳಲಿದೆ. ಸಂಜೆ 5.30ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯಮಂತ್ರಿ ಸೇರಿ ವಿವಿಧ ಗಣ್ಯರು ಪಾಲ್ಗೊಳ್ಳುವ ನಿರೀಕ್ಷೆಯಿದೆ. 53 ಚಿನ್ನ ಸೇರಿ 153 ಪದಕ ಗೆದ್ದಿರುವ ಮಹಾರಾಷ್ಟ್ರ 3ನೇ ಬಾರಿ ಸಮಗ್ರ ಚಾಂಪಿಯನ್ ಎನಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.
ಒಳಾಂಗಣ ಅಥ್ಲೆಟಿಕ್ಸ್: ಭಾರತಕ್ಕೆ 4 ಪದಕ
ಅಸ್ತಾನ(ಕಜಕಸ್ತಾನ): 2023ರ ಏಷ್ಯನ್ ಒಳಾಂಗಣ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾರತ ಪದಕ ಬೇಟೆ ಆರಂಭಿಸಿದ್ದು, ಮೊದಲ ದಿನವೇ 1 ಚಿನ್ನ ಸೇರಿ 4 ಪದಕ ಜಯಿಸಿದೆ. ಪುರುಷರ ಶಾಟ್ಪುಟ್ನಲ್ಲಿ ತೇಜಿಂದರ್‌ಪಾಲ್ ಸಿಂಗ್ ತೂರ್ 19.49 ಮೀ. ದೂರಕ್ಕೆ ಎಸೆದು ಚಿನ್ನ ಗೆದ್ದರೆ, ಕರಣ್ವೀರ್ ಸಿಂಗ್(19.37 ಮೀ.) ಬೆಳ್ಳಿ ಪಡೆದರು. ಮಹಿಳೆಯರ ಪೆಂಟಾಥ್ಲಾನ್ನಲ್ಲಿ ಸ್ವಪ್ನಾ ಬರ್ಮನ್ ಬೆಳ್ಳಿ ಜಯಿಸಿದರು. ಪುರುಷರ ಟ್ರಿಪಲ್ ಜಂಪ್ನಲ್ಲಿ ಪ್ರವೀಣ್ ಚಿತ್ರವೇಲು 16.98 ಮೀ. ದೂರ ಜಿಗಿದು ಬೆಳ್ಳಿ ಗೆದ್ದರು.
ಸಂತೋಷ್ ಟ್ರೋಫಿ: 2-2 ಡ್ರಾ ಸಾಧಿಸಿದ ಕರ್ನಾಟಕ
ಭುವನೇಶ್ವರ: ಸಂತೋಷ್ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್ ಟೂರ್ನಿಯ ಅಂತಿಮ ಸುತ್ತಿನ ಮೊದಲ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಕರ್ನಾಟಕ 2-2 ಗೋಲುಗಳ ಡ್ರಾ ಸಾಧಿಸಿದೆ. ಮೊದಲಾರ್ಧದಲ್ಲಿ ಉಭಯ ತಂಡಗಳು ಗೋಲು ಬಾರಿಸಲು ವಿಫಲವಾದರೂ, ದ್ವಿತೀಯಾರ್ಧದ ಆರಂಭದಲ್ಲೇ ಪಂಜಾಬ್ ಮೇಲುಗೈ ಸಾಧಿಸಿತು.
ಆಫ್ರಿಕಾದಲ್ಲಿ ಭಾರತದ ಕೊರ್‌ಕಾಮ್ ಸಂಸ್ಥೆಯಿಂದ ಟಿ20 ಕ್ರಿಕೆಟ್‌ಗೆ ಉತ್ತೇಜನ!
ಕಮಲ್ದೀಪ್(65ನೇ ನಿಮಿಷ), ಬಿಪುಲ್ ಕಾಲಾ(69ನೇ ನಿ.) ಗೋಲು ದಾಖಲಿಸಿದರು. 82 ನಿಮಿಷದ ವರೆಗೂ 0-2ರಿಂದ ಹಿಂದಿದ್ದ ರಾಜ್ಯ ಬಳಿಕ ತಿರುಗೇಟು ನೀಡಿತು. ಕಮಲೇಶ್ 82ನೇ ನಿಮಿಷದಲ್ಲಿ ಗೋಲು ಹೊಡೆದರೆ, ರಾಬಿನ್ ಯಾದವ್ 93ನೇ ನಿಮಿಷದಲ್ಲಿ ಬಾರಿಸಿದ ಗೋಲು ತಂಡವನ್ನು ಸೋಲಿನಿಂದ ಕಾಪಾಡಿತು. ಭಾನುವಾರ ತನ್ನ 2ನೇ ಪಂದ್ಯದಲ್ಲಿ ರಾಜ್ಯ ತಂಡ ಹಾಲಿ ಚಾಂಪಿಯನ್ ಕೇರಳ ವಿರುದ್ಧ ಆಡಲಿದೆ.
ಇಂದು ಹೈದರಾಬಾದಲ್ಲಿ ಫಾರ್ಮುಲಾ ಇ-ರೇಸ್
ಹೈದರಾಬಾದ್: ಚೊಚ್ಚಲ ಬಾರಿ ಫಾರ್ಮುಲಾ ಇ-ಕಾರ್ ರೇಸ್‌ಗೆ ಆತಿಥ್ಯ ವಹಿಸಲು ಭಾರತ ಸಜ್ಜಾಗಿದ್ದು, ಜಾಗತಿಕ ಮಟ್ಟದ ರೇಸರ್ಗಳ ರೋಚಕ ಹಣಾಹಣಿಗೆ ಶನಿವಾರ ಹೈದರಾಬಾದ್ ಸಾಕ್ಷಿಯಾಗಲಿದೆ. ಫಾರ್ಮುಲಾ ಇ-ರೇಸ್ ಎಲೆಕ್ಟ್ರಿಕ್ ಕಾರುಗಳ ನಡುವಿನ ಸ್ಪರ್ಧೆಯಾಗಿದ್ದು, 11 ತಂಡಗಳು ಕಣಕ್ಕಿಳಿಯಲಿವೆ.
ನಿಸಾನ್, ಮೆಕ್ಲಾರೆನ್ ಜೊತೆ ಭಾರತದ ಮಹೀಂದ್ರಾ ರೇಸಿಂಗ್ ತಂಡ ಕೂಡಾ ಕೂಟದಲ್ಲಿ ಪಾಲ್ಗೊಳ್ಳಲಿವೆ. ಪ್ರತೀ ತಂಡದಲ್ಲಿ ಇಬ್ಬರು ಚಾಲಕರಿರಲಿದ್ದು, ಮಹೀಂದ್ರಾ ತಂಡದ ಕಾರನ್ನು ಬ್ರಿಟನ್ನ ಓಲಿವರ್ ರೋವ್ಲಂಡ್, ಹಾಗೂ ಬ್ರೆಜಿಲ್ನ ಲುಕಾಸ್ ಡಿ ಗ್ರಾಸಿ ಚಲಾಯಿಸಲಿದ್ದಾರೆ. ರೇಸ್‌ನಲ್ಲಿ ಭಾರತೀಯ ಚಾಲಕರಿಲ್ಲ.ಇದು ಈ ವರ್ಷದ 3ನೇ ಫಾರ್ಮುಲಾ-ಇ ಕಾರ್ ರೇಸ್ ಆಗಿದ್ದು, ಇಟಲಿ, ಯುಎಸ್ಎ, ಬ್ರೆಜಿಲ್ ಸೇರಿದಂತೆ ವಿವಿಧ ದೇಶಗಳಲ್ಲಿ ಒಟ್ಟು 16 ರೇಸ್‌ಗಳು ಆಯೋಜನೆಗೊಳ್ಳಲಿವೆ.