ಬೆಂಗಳೂರು(ಜ.06): ಕೊರೋನಾ ಹಿನ್ನೆಲೆ ರಾಜ್ಯದಲ್ಲಿ ಕ್ರೀಡಾ ಹಾಸ್ಟೆಲ್‌ಗಳು ತೆರೆದಿಲ್ಲ. ಇಂತಹ ಸಂದರ್ಭದಲ್ಲಿ ತರಬೇತುದಾರರ ನೇಮಕ ಎಷ್ಟು ಅವಶ್ಯವಾಗಿದೆ. ಸರ್ಕಾರ ಕ್ರೀಡಾ ಹಾಸ್ಟೆಲ್‌ ತೆರೆಯಲು ಅನುಮತಿ ನೀಡಲಿ. ಆಗ ತರಬೇತುದಾರರ ಸಾಧನೆ ಹಾಗೂ ಕಾರ‍್ಯಕ್ಷಮತೆಯನ್ನು ಆಧರಿಸಿ ನೇಮಕ ಮಾಡುವ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಕ್ರೀಡಾ ಇಲಾಖೆ ಆಯುಕ್ತ ಕೆ. ಶ್ರೀನಿವಾಸ್‌, ಮಂಗಳವಾರ ‘ಕನ್ನಡಪ್ರಭ’ಕ್ಕೆ ಸ್ಪಷ್ಟೀಕರಣ ನೀಡಿದರು. ಮಂಗಳವಾರ (ಡಿ.5) ರಂದು ‘ಭಿಕ್ಷೆ ಬೇಡಿ ಕೋಚ್‌ ಪ್ರತಿಭಟನೆ!’ ಸುದ್ದಿಯನ್ನು ‘ಕನ್ನಡಪ್ರಭ’ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು.

‘2019ರಲ್ಲಿ ಕರ್ನಾಟಕ ಕ್ರೀಡಾ ಪ್ರಾಧಿಕಾರ 73 ಕ್ರೀಡಾ ಕೋಚ್‌ಗಳನ್ನು ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿತ್ತು. ಈ ಕೋಚ್‌ಗಳ ಅವಧಿ ಕಳೆದ ಅಕ್ಟೋಬರ್‌ ವೇಳೆಗೆ ಅಂತ್ಯವಾಗಿದೆ. ಈ ಕೋಚ್‌ಗಳಲ್ಲಿ ಉತ್ತಮ ಕಾರ‍್ಯಕ್ಷಮತೆ, ಪದಕ ಗಳಿಸುವಿಕೆಯ ಸಾಮರ್ಥ್ಯ ಇರುವ 50 ತರಬೇತುದಾರರನ್ನು ಮತ್ತೆ ಒಂದು ವರ್ಷದ ಅವಧಿಗೆ ಸೇವೆಯಲ್ಲಿ ಮುಂದುವರಿಸಲು ಸರ್ಕಾರ ಅನುಮೋದನೆ ನೀಡಿದೆ. ಅದರಂತೆ ನೇಮಕ ಮಾಡಿಕೊಳ್ಳುವುದಾಗಿ ಪ್ರತಿಭಟನಾ ನಿರತ ಕೋಚ್‌ಗಳಿಗೂ ತಿಳಿಸಲಾಗಿದೆ. ಅಲ್ಲದೇ ಸರ್ಕಾರ ತರಬೇತುದಾರರಿಗೆ ವೇತನ ನೀಡಿಲ್ಲ ಎಂದು ಸುಳ್ಳು ಪ್ರಚಾರ ಮಾಡುವ ಸಲುವಾಗಿ ಭಿಕ್ಷೆ ಬೇಡುವ ಕಾರ‍್ಯನಡೆಸಿದ್ದಾರೆ’ ಎಂದು ಶ್ರೀನಿವಾಸ್‌ ಹೇಳಿದರು.

ಬೆಂಗಳೂರಿನಲ್ಲಿ ಭಿಕ್ಷೆ ಬೇಡಿ ಕೋಚ್‌ ಪ್ರತಿಭಟನೆ..!

4ನೇ ದಿನಕ್ಕೆ ಪ್ರತಿಭಟನೆ: ವಿವಿಧ ಬೇಡಿಕೆ ಈಡೇರಿಕೆಗಾಗಿ ಕ್ರೀಡಾ ತರಬೇತುದಾರರು ಮೌರ್ಯ ವೃತ್ತದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮಂಗಳವಾರ 4ನೇ ದಿನಕ್ಕೆ ಕಾಲಿಟ್ಟಿದೆ. ಕೆಲ ಕನ್ನಡಪರ ಸಂಘಟನೆಗಳು ಧರಣಿ ನಿರತ ಕೋಚ್‌ಗಳಿಗೆ ಬೆಂಬಲ ವ್ಯಕ್ತಪಡಿಸಿದರು.