ನವದೆಹಲಿ(ನ.15): ಐಪಿಎಲ್ ಟೂರ್ನಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಯಶಸ್ವಿ ನಾಯಕನಾಗಿ ಮೆರೆದಾಡಿದ್ದ ಟೀಂ ಇಂಡಿಯಾ ಕ್ರಿಕೆಟಿಗ ಗೌತಮ್ ಗಂಭೀರ್, ಡೆಲ್ಲಿ ಡೇರ್ ಡೆವಿಲ್ಸ್ ತಂಡ ಸೇರಿಕೊಂಡ ಕೂಡ ಅದೃಷ್ಟ ಕೈಹಿಡಿಯಲಿಲ್ಲಿ. 

ಕಳಪೆ ಫಾರ್ಮ್ ಅನುಭವಿಸಿದ ಗೌತಮ್ ಗಂಭೀರ್, 2018ರ ಐಪಿಎಲ್ ಟೂರ್ನಿಯ ಆರಂಭಿಕ ಹಂತದಲ್ಲೇ ನಾಯಕತ್ವದಿಂದ ಕೆಳಗಿಳಿದರು. ಆದರೂ ಗಂಭೀರ್ ಫಾರ್ಮ್ ಬದಲಾಗಲಿಲ್ಲ. ಇನ್ನು ಕೆಲ ಪಂದ್ಯಗಳಲ್ಲಿ ತಂಡದಿಂದಲೇ ಹೊರಗುಳಿಯಬೇಕಾಯಿತು. ಇದೀಗ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಗೌತಮ್ ಗಂಭೀರ್‌ರನ್ನ ತಂಡದಿಂದ ಕೈಬಿಡಲು ಮುಂದಾಗಿದೆ.

2019ರ ಐಪಿಎಲ್ ಟೂರ್ನಿಗೆ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಗಂಭೀರ್‌ ಕೈಬಿಟ್ಟು ಯುವ ಆಟಗಾರರನ್ನ ಹರಾಜಿನಲ್ಲಿ ಖರೀದಿಸಲು ಮುಂದಾಗಿದೆ. ಕಳೆದ ಐಪಿಎಲ್ ಟೂರ್ನಿಯಲ್ಲಿ ಗಂಭೀರ್ 6 ಪಂದ್ಯಗಳಿಂದ 85 ರನ್ ಸಿಡಿಸಿದ್ದಾರೆ.

ಕಳೆದ ಐಪಿಎಲ್ ಟೂರ್ನಿ ಬಳಿಕ ಗೌತಮ್ ಗಂಭೀರ್ ಹೇಳಿಕೆ ಫ್ರಾಂಚೈಸಿ ಹಾಗೂ ಟೀಂ ಮ್ಯಾನೇಜ್ಮೆಂಟ್‌ಗೆ ಇರಿಸುಮುರಿಸು ತಂದಿತ್ತು. ಗಂಭೀರ್ ಸ್ವತಃ ತಂಡದಿಂದ ಹೊರಗುಳಿದಿದ್ದರು ಅನ್ನೋ ಹೇಳಿಕೆಗೆ ಗಂಭೀರ್ ಖಾರವಾಗಿ ಪ್ರತಿಕ್ರಿಯಿಸಿದ್ದರು. ತಂಡದಿಂದ ನಾನೇ ಹೊರಗುಳಿಯವ ಪರಿಸ್ಥಿತಿ ಇದ್ದರೆ ವಿದಾಯ ಹೇಳುತ್ತಿದ್ದೆ ಅನ್ನೋ ಮೂಲಕ ಮ್ಯಾನೇಜ್ಮೆಂಟ್ ತನನ್ನ ಹೊರಗಿಟ್ಟಿತ್ತು ಎಂದಿದ್ದರು.

2019ರ ಐಪಿಎಲ್ ಟೂರ್ನಿಗೆ ಸಿದ್ದತೆ ಆರಂಭಿಸಿದ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಇದೀಗ ಗಂಭೀರ್ ಕೈಬಿಡಲು ಮುಂದಾಗಿದೆ. ಶೀಘ್ರದಲ್ಲೇ ಡೆಲ್ಲಿ ಫ್ರಾಂಚೈಸಿ ನಿರ್ಧಾರ ಪ್ರಕಟಿಸಲಿದೆ.