ನವದೆಹಲಿ(ಮಾ.28): ಹಲವು ಪ್ರಶಸ್ತಿ, ಪದಕಗಳನ್ನು ಗೆದ್ದು ಭಾರತಕ್ಕೆ ಕೀರ್ತಿ ತಂದುಕೊಟ್ಟಿರುವ ಅನೇಕ ಕ್ರೀಡಾ ತಾರೆಯರು ಈಗ ಕೊರೋನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದ್ದಾರೆ. 

2007ರ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಕೊನೆ ಓವರ್‌ ಎಸೆದಿದ್ದ ಜೋಗಿಂದರ್‌ ಶರ್ಮಾ, ಕಾಮನ್‌ವೆಲ್ತ್‌ ಗೇಮ್ಸ್‌ ಪದಕ ವಿಜೇತ ಬಾಕ್ಸರ್‌ ಅಖಿಲ್‌ ಕುಮಾರ್‌, ಏಷ್ಯನ್‌ ಗೇಮ್ಸ್‌ ಕಬಡ್ಡಿ ಚಾಂಪಿಯನ್‌ ಆಟಗಾರ ಅಜಯ್‌ ಠಾಕೂರ್‌ ಈ ಪೈಕಿ ಪ್ರಮುಖರು. ಕ್ರೀಡಾ ಕೋಟಾದಡಿ ಪೊಲೀಸ್‌ ಇಲಾಖೆಯಲ್ಲಿ ಕೆಲಸ ಪಡೆದಿರುವ ಈ ಮೊದಲು ದೇಶಾದ್ಯಂತ ಲಾಕ್‌ಡೌನ್‌ ಘೋಷಿಸಿರುವ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನೆರವಾಗುತ್ತಿದ್ದಾರೆ. 

ಜೀವನ ಸಹಜ ಸ್ಥಿತಿಗೆ ಬರಲಿ, ಆಮೇಲೆ ಐಪಿಎಲ್‌ ಎಂದ ಹಿಟ್‌ಮ್ಯಾನ್

ನಾನು 2007ರಿಂದಲೂ ಡಿಎಸ್‌ಪಿ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಆದರೆ ಈ ರೀತಿಯ ಸವಾಲನ್ನು ಎದುರಿಸಿಲ್ಲ. ಮುನ್ನೆಚ್ಚರಿಕೆಯೊಂದೇ ಕೊರೋನಾ ವಿರುದ್ಧ ಬಚಾವಾಗಲು ಸದ್ಯಕ್ಕಿರುವ ದಾರಿ. ಎಲ್ಲರೂ ಸಹಕರಿಸಿ ಎಂದು ಟ್ವೀಟ್ ಮಾಡಿದ್ದಾರೆ. 

ಹರ್ಯಾಣ ಪೊಲೀಸ್‌ ಇಲಾಖೆಯಲ್ಲಿ ಡಿಎಸ್‌ಪಿ ಆಗಿರುವ ಜೋಗಿಂದರ್‌, ಹಿಸಾರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಎಸಿಪಿ ಅಖಿಲ್‌ ಗುರುಗ್ರಾಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಹಿಮಾಚಲ ಪ್ರದೇಶ ಪೊಲೀಸ್‌ ಇಲಾಖೆಯಲ್ಲಿ ಡಿಎಸ್‌ಪಿ ಆಗಿರುವ ಅಜಯ್‌ ಠಾಕೂರ್‌, ಬಿಲಾಸ್‌ಪುರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಸಾಮಾಜಿಕ ತಾಣಗಳಲ್ಲಿ ಮನವಿ ಮಾಡಿದ್ದಾರೆ.

ದೇಶದ ಸ್ಟಾರ್ ಕ್ರೀಡಾಪಟುಗಳು ಕರ್ತವ್ಯಕ್ಕೆ ಮರಳಿರುವುದು ಉಳಿದ ಪೊಲೀಸ್‌ಗಳಿಗೆ ಮತ್ತಷ್ಟು ಹುರುಪು ತಂದು ಕೊಟ್ಟಿದೆ. ಒಟ್ಟಿನಲ್ಲಿ ಈ ಕ್ರೀಡಾಪಟುಗಳು ನಾವು ಮೈದಾನದಲ್ಲಿ ನಾವು ಘರ್ಜಿಸಲು ರೆಡಿ ಹಾಗೆಯೇ ದೇಶದಲ್ಲಿ ಅಪಾಯದಲ್ಲಿರುವ ಜನರನ್ನು ರಕ್ಷಿಸಲು ಸೈ ಎನ್ನುವ ಸಂದೇಶವನ್ನು ರವಾನಿಸಿದ್ದಾರೆ. ಕ್ರೀಡಾಪಟುಗಳ ಈ ದಿಟ್ಟ ನಡೆ ದೇಶದ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.