ಕಾಮನ್ವೆಲ್ತ್ ಫೆನ್ಸಿಂಗ್: ಸ್ವರ್ಣ ಗೆದ್ದ ಭವಾನಿ ದೇವಿ
ಫೆನ್ಸಿಂಗ್ ಪಟು ಭವಾನಿ ದೇವಿ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ
ಕಾಮನ್‌ವೆಲ್ತ್ ಫೆನ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಭವಾನಿ ದೇವಿ
ಈ ವರ್ಷ ಭವಾನಿ 10 ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಪಾಲ್ಗೊಂಡಿದ್ದಾರೆ.
ಲಂಡನ್(ಆ.11): ಭಾರತದ ತಾರಾ ಫೆನ್ಸಿಂಗ್ ಪಟು ಭವಾನಿ ದೇವಿ ಕಾಮನ್‌ವೆಲ್ತ್ ಫೆನ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸತತ 2ನೇ ಬಾರಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಲಂಡನ್‌ನಲ್ಲಿ ನಡೆಯುತ್ತಿರುವ ಕೂಟದಲ್ಲಿ ಮಂಗಳವಾರ ಹಿರಿಯ ಮಹಿಳೆಯರ ಸೇಬರ್ ವೈಯಕ್ತಿಕ ವಿಭಾಗದ ಫೈನಲ್‌ನಲ್ಲಿ 42ನೇ ಶ್ರೇಯಾಂಕಿತ ಭವಾನಿ, ಆಸ್ಪ್ರೇಲಿಯಾದ ವೆರೋನಿಕಾ ವ್ಯಾಸಿಲೆವಾ ಅವರನ್ನು 15-10 ಅಂತರದಲ್ಲಿ ಸೋಲಿಸಿ ಬಂಗಾರ ಜಯಿಸಿದರು.
42ನೇ ಶ್ರೇಯಾಂಕಿತ ಭವಾನಿ ದೇವಿ, ಕಳೆದ ವರ್ಷ ನಡೆದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಈ ಮೂಲಕ ಒಲಿಂಪಿಕ್ಸ್‌ನಲ್ಲಿ ಆಡಿದ ಭಾರತದ ಮೊದಲ ಫೆನ್ಸರ್ ಎಂಬ ಹೆಗ್ಗಳಿಕೆಗೆ ಭವಾನಿ ಪಾತ್ರರಾಗಿದ್ದರು. ಈ ವರ್ಷ ಭವಾನಿ ದೇವಿ 10 ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಪಾಲ್ಗೊಂಡಿದ್ದಾರೆ.
ಜಾರ್ಜಿಯಾ ವುಶು ಟೂರ್ನಿ: ಭಾರತಕ ಪ್ರಿಯಾಂಕಗೆ ಚಿನ್ನ
ನವದೆಹಲಿ: ಜಾರ್ಜಿಯಾದ ಬತೂಮಿ ಎಂಬಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ವುಶು ಟೂರ್ನಿಯಲ್ಲಿ ಭಾರತದ ಪ್ರಿಯಾಂಕ ಕೇವತ್ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಮಧ್ಯಪ್ರದೇಶದ ಪ್ರಿಯಾಂಕ ಬುಧವಾರ ನಡೆದ ಅಂಡರ್-18 ವಿಭಾಗದ 48 ಕೆ.ಜಿ. ಸ್ಪರ್ಧೆಯಲ್ಲಿ ಬಂಗಾರದ ಪದಕ ಜಯಿಸಿದ್ದಾರೆ. ವುಶು ಎಂಬುದು ಮಾರ್ಷಲ್ ಆರ್ಟ್ಸ್ ಕ್ರೀಡೆಯಾಗಿದ್ದು, ಏಷ್ಯನ್ ಗೇಮ್ಸ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲೂ ಆಡಿಸಲಾಗುತ್ತಿದೆ. ಪ್ರಿಯಾಂಕ ಸದ್ಯ ಭೋಪಾಲ್‌ನ ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್)ದಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ನಿಗದಿಗಿಂತ ಒಂದಿನ ಮೊದಲೇ ಫಿಫಾ ವಿಶ್ವಕಪ್ ಆರಂಭ?
ಜೆನೇವಾ: ನವೆಂಬರ್-ಡಿಸೆಂಬರ್‌ನಲ್ಲಿ ಕತಾರ್‌ನಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿ ನಿಗದಿತ ದಿನಕ್ಕಿಂತ ಒಂದು ದಿನ ಮುಂಚಿತವಾಗಿ ಆರಂಭಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿದ್ದಾಗಿ ವರದಿಯಾಗಿವೆ. ಈಗಿರುವ ವೇಳಾಪಟ್ಟಿಪ್ರಕಾರ ಟೂರ್ನಿ ನ.21ಕ್ಕೆ ಆರಂಭಗೊಳ್ಳಬೇಕಿದೆ. ಮೊದಲ ಪಂದ್ಯದಲ್ಲಿ ನೆದರ್ಲೆಂಡ್‌್ಸ ಹಾಗೂ ಸೆನೆಗಲ್ ಮುಖಾಮುಖಿಯಾಗಲಿದ್ದು, ಅದೇ ದಿನ 2ನೇ ಪಂದ್ಯ ಕತಾರ್ ಹಾಗೂ ಈಕ್ವೆಡಾರ್ ನಡುವೆ ನಡೆಯಬೇಕಿದೆ. ಆದರೆ ಆತಿಥೇಯ ಕತಾರ್ ಪಂದ್ಯ ಮೊದಲು ನಡೆಸಲು ಆಯೋಜಕರು ನಿರ್ಧರಿಸಿದ್ದು, ಟೂರ್ನಿಗೆ ನ.20ರಂದು ಭಾನುವಾರ ಚಾಲನೆ ಸಿಗಬಹುದು ಎಂದು ಮೂಲಗಳಿಂದ ತಿಳಿದುಬಂದಿದೆ.
ಲಕ್ಷ್ಯ ಸೇನ್‌ಗೆ ಬೆಂಗ್ಳೂರಲ್ಲಿ ಭರ್ಜರಿ ಸ್ವಾಗತ, ಸನ್ಮಾನ
ಬೆಂಗಳೂರು: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ತಾರಾ ಯುವ ಶಟ್ಲರ್ ಲಕ್ಷ್ಯ ಸೇನ್ ಬುಧವಾರ ತವರಿಗೆ ಆಗಮಿಸಿದ್ದು, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭರ್ಜರಿ ಸ್ವಾಗತ ಕೋರಲಾಯಿತು. ಪೋಷಕರು ಹಾಗೂ ಕೋಚ್ ಜೊತೆ ನಿಲ್ದಾಣದಿಂದ ಹೊರಬರುತ್ತಿದ್ದಂತೆಯೇ ಅವರಿಗೆ ಅಭಿಮಾನಿಗಳು ಹೂಗುಚ್ಛ ನೀಡಿ, ಜೈಕಾರ ಕೂಗಿ, ಡೋಲುಗಳನ್ನು ಬಾರಿಸಿ ಸ್ವಾಗತಿಸಿದರು. ಅಭಿಮಾನಿಗಳ ಸೆಲ್ಫಿ ಮನವಿಗೂ ಸ್ಪಂದಿಸಿದ ಸೇನ್, ಅವರ ಜೊತೆಯಲ್ಲಿ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಮಗ ಗೆದ್ದ ಪದಕವನ್ನು ಹರಿದ ಸೀರೆಯಲ್ಲಿ ಕಟ್ಟಿಟ್ಟ ತಾಯಿ!
ಸೇನ್ ಪೋಷಕರು, ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿ(ಪಿಪಿಬಿಎ) ಮುಖ್ಯ ಕೋಚ್ ವಿಮಲ್ ಕುಮಾರ್ ಕೂಡಾ ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಇದೇ ವೇಳೆ ಸೇನ್ ಕ್ರೀಡಾಕೂಟದಲ್ಲಿ ಗೆದ್ದ ಪದಕಗಳನ್ನು ಲಕ್ಷ್ಯ ಅಭಿಮಾನಿಗಳಿಗೆ ಪ್ರದರ್ಶಿಸಿದರು. ಬಳಿಕ ಯಲಹಂಕದಲ್ಲಿರುವ ಪಡುಕೋಣೆ-ದ್ರಾವಿಡ್ ಕ್ರೀಡಾ ಅಕಾಡೆಮಿಯಲ್ಲಿ ಸೇನ್‌ಗೆ ಸನ್ಮಾನ ಮಾಡಲಾಯಿತು. ಉತ್ತರಾಖಂಡದ ಸೇನ್ ಕೆಲ ವರ್ಷಗಳಿಂದ ಬೆಂಗಳೂರಲ್ಲಿ ತರಬೇತಿ ಪಡೆಯುತ್ತಿದ್ದಾರೆ.