ನಾಟಿಂಗ್‌ಹ್ಯಾಮ್(ಆ.20):ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮುನ್ನಡೆ 500 ರನ್ ದಾಟಿದೆ. 3ನೇ ದಿನದಾಟದಲ್ಲಿ ವಿರಾಟ್ ಕೊಹ್ಲಿ ಆಕರ್ಷಕ ಶತಕ ಹಾಗೂ ಚೇತೇಶ್ವರ್ ಪೂಜಾರ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ ಇದೀಗ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ.

ತೃತೀಯ ದಿನದಾಟದಲ್ಲಿ 2 ವಿಕೆಟ್ ನಷ್ಟಕ್ಕೆ 124 ರನ್‌ಗಳೊಂದಿಗೆ 2ನೇ ಇನ್ನಿಂಗ್ಸ್ ಮುಂದುವರಿಸಿದ ಟೀಂ ಇಂಡಿಯಾಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ್ ಪೂಜಾರ ಆಸರೆಯಾದರು.

ಶತಕದತ್ತ ಮುನ್ನುಗ್ಗುತ್ತಿದ್ದ ಚೇತೇಶ್ವರ್ ಪೂಜಾರ ಪೂಜಾರ 72 ರನ್ ಸಿಡಿಸಿ ಔಟಾದರು. ಈ ಮೂಲಕ ಟೀಂ ಇಂಡಿಯಾ 3ನೇ ವಿಕೆಟ್ ಕಳೆದುಕೊಂಡಿತು. ಆದರೆ ನಾಯಕ ವಿರಾಟ್ ಕೊಹ್ಲಿ ದಿಟ್ಟ ಹೋರಾಟ ನೀಡಿದರು. ಈ ಮೂಲಕ ಇಂಗ್ಲೆಂಡ್ ನೆಲದಲ್ಲಿ 2ನೇ ಶತಕ ಪೂರೈಸಿದರು. 

ಶತಕ ಸಿಡಿಸಿದ ಬೆನ್ನಲ್ಲೇ ವಿರಾಟ್ ಕೊಹ್ಲಿ ಔಟಾದರು. ಕೊಹ್ಲಿ 103 ರನ್ ಸಿಡಿಸಿ ನಿರ್ಗಮಿಸಿದರು. ರಿಷಬ್ ಪಂತ್ ಕೇವಲ 1 ರನ್ ಸಿಡಿಸಿ ಪೆವಿಲಿಯನ್ ಸೇರಿದರು.  ಅಜಿಂಕ್ಯ ರಹಾನೆ 29 ರನ್ ಗಳಿಸಿ ಔಟಾದರು. ಸದ್ಯ ಟೀಂ ಇಂಡಿಯಾ 2ನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ನಷ್ಟಕ್ಕೆ 339 ರನ್ ಸಿಡಿಸಿದೆ. ಈ ಮೂಲಕ 507 ರನ್ ಮುನ್ನಡೆ ಪಡೆದುಕೊಂಡಿದೆ.