ನಾಟಿಂಗ್‌ಹ್ಯಾಮ್(ಆ.21): ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಗೆಲುವಿನ ವಿಶ್ವಾಸದಲ್ಲಿದ್ದ ಟೀಂ ಇಂಡಿಯಾ ಇದೀಗ ಜೋಸ್ ಬಟ್ಲರ್ ಶಾಕ್ ನೀಡಿದ್ದಾರೆ. ಜೋಸ್ ಬಟ್ಲರ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಭಾರತ ಇದೀಗ ಸಂಕಷ್ಟಕ್ಕೆ ಸಿಲುಕಿದೆ.

3ನೇ ದಿನದಾಟ ಅಂತ್ಯದಲ್ಲಿ ವಿಕೆಟ್ ನಷ್ಟವಿಲ್ಲದೆ 23 ರನ್‌ಗಳಿಸಿದ್ದ ಇಂಗ್ಲೆಂಡ್, ಇಂದು ಆರಂಭದಲ್ಲೇ ಕೆಟನ್ ಜೆನ್ನಿಂಗ್ಸ್ ವಿಕೆಟ್ ಕಳೆದುಕೊಂಡಿತು.  ಅಲಿಸ್ಟೈರ್ ಕುಕ್ 17 ರನ್ ಸಿಡಿಸಿ ಔಟಾಗಿದರು. ನಾಯಕ ಜೋ ರೂಟ್ ಹಾಗೂ ಒಲ್ಲಿ ಪೋಪ್ ಜೊತೆಯಾಟ ನೀಡಲು ಹೋರಾಟ ನಡೆಸಿದರು.

ಟೀಂ ಇಂಡಿಯಾ ವೇಗಿಗಳ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ಜೋ ರೂಟ್ ಹಾಗೂ ಒಲ್ಲಿ ಪೋಪ್ ವಿಕೆಟ್ ಕಳೆದುಕೊಂಡಿತು. ಆದರೆ ಜೋಸ್ ಬಟ್ಲರ್ ಹಾಗೂ ಬೆನ್ ಸ್ಟೋಕ್ಸ್ ಜೊತೆಯಾಟ ಭಾರತಕ್ಕೆ ಅಪಾಯದ ಸೂಚನೆ ನೀಡುತ್ತಿದೆ.

ಜೋಸ್ ಬಟ್ಲರ್ ಭರ್ಜರಿ ಶತಕ ಸಿಡಿಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಶತಕ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾದರು.  ಇತ್ತ ಬಟ್ಲರ್‌ಗೆ ಉತ್ತಮ ಸಾಥ್ ನೀಡಿದ ಬೆನ್ ಸ್ಟೋಕ್ಸ್ ಅರ್ಧಶತಕ ಸಿಡಿಸಿ ಆಸರೆಯಾಗಿದ್ದಾರೆ. ಸದ್ಯ ಇಂಗ್ಲೆಂಡ್ 4 ವಿಕೆಟ್ ನಷ್ಟಕ್ಕೆ 220 ರನ್ ಸಿಡಿಸಿದೆ. ಈ ಮೂಲಕ ಗೆಲುವಿಗೆ 301 ರನ್ ಅವಶ್ಯಕತೆ ಇದೆ. ಆದರೆ ಬಟ್ಲರ್ ಹಾಗೂ ಸ್ಟೋಕ್ಸ್ ಬ್ಯಾಟಿಂಗ್‌ನಿಂದಾಗಿ ಭಾರತ ಸಂಕಷ್ಟಕ್ಕೆ ಸಿಲುಕಿದೆ.

ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 329 ರನ್ ಸಿಡಿಸಿ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಇಂಗ್ಲೆಂಡ್ ಕೇವಲ 161 ರನ್‌ಗಳಿಗೆ ಆಲೌಟ್ ಆಗೋ ಮೂಲಕ 168 ರನ್ ಹಿನ್ನಡೆ ಅನುಭವಿಸಿತ್ತು. 2ನೇ ಇನ್ನಿಂಗ್ಸ್‌ನಲ್ಲಿ ಭಾರತ 7 ವಿಕೆಟ್ ನಷ್ಟಕ್ಕೆ 352 ರನ್ ಸಿಡಿಸಿ ಡೆಕ್ಲೇರ್ ಮಾಡಿಕೊಂಡಿತ್ತು.