ನಾಟಿಂಗ್‌ಹ್ಯಾಮ್(ಆ.20):3ನೇ ಟೆಸ್ಟ್ ಪಂದ್ಯದಲ್ಲಿ 521 ರನ್ ಟಾರ್ಗೆಟ್ ಪಡೆದಿರುವ ಇಂಗ್ಲೆಂಡ್ ಪಂದ್ಯ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದೆ. 3ನೇ ದಿನದಾಟದ ಅಂತ್ಯದಲ್ಲಿ 2ನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ವಿಕೆಟ್ ನಷ್ಟವಿಲ್ಲದೆ 23 ರನ್ ಸಿಡಿಸಿದೆ.  

 

 

ಇಂಗ್ಲೆಂಡ್ ಸದ್ಯ 498 ರನ್‌ಗಳ ಹಿನ್ನಡೆಯಲ್ಲಿದೆ. ಅಲಿಸ್ಟೈರ್ ಕುಕ್ ಅಜೇಯ 9 ರನ್ ಹಾಗೂ ಕೆಟನ್ ಜೆನ್ನಿಂಗ್ಸ್ 13 ಅಜೇಯ ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇನ್ನೆರಡು ದಿನ ಇಂಗ್ಲೆಂಡ್ ದಿಟ್ಟ ಹೋರಾಟ ನಡೆಸಬೇಕಾದ ಅನಿವಾರ್ಯ ಹಾಗೂ ಬೃಹತ್ ಮೊತ್ತ ಚೇಸ್ ಮಾಡಬೇಕಾದ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತನ್ನ ಹಿಡಿತ ಬಿಗಿಗೊಳಿಸಿದೆ.
  
ತೃತೀಯ ದಿನದಾಟದಲ್ಲಿ ಆರಂಭದಲ್ಲಿ 2 ವಿಕೆಟ್ ನಷ್ಟಕ್ಕೆ 124 ರನ್‌ಗಳೊಂದಿಗೆ 2ನೇ ಇನ್ನಿಂಗ್ಸ್ ಮುಂದುವರಿಸಿದ ಟೀಂ ಇಂಡಿಯಾಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ್ ಪೂಜಾರ ಆಸರೆಯಾದರು. ಶತಕದತ್ತ ಮುನ್ನುಗ್ಗುತ್ತಿದ್ದ ಚೇತೇಶ್ವರ್ ಪೂಜಾರ ಪೂಜಾರ 72 ರನ್ ಸಿಡಿಸಿ ಔಟಾದರು. ಈ ಮೂಲಕ ಟೀಂ ಇಂಡಿಯಾ 3ನೇ ವಿಕೆಟ್ ಕಳೆದುಕೊಂಡಿತು. ಆದರೆ ನಾಯಕ ವಿರಾಟ್ ಕೊಹ್ಲಿ ದಿಟ್ಟ ಹೋರಾಟ ನೀಡಿದರು. ಈ ಮೂಲಕ ಇಂಗ್ಲೆಂಡ್ ನೆಲದಲ್ಲಿ 2ನೇ ಶತಕ ಪೂರೈಸಿದರು. 

ಶತಕ ಸಿಡಿಸಿದ ಬೆನ್ನಲ್ಲೇ ವಿರಾಟ್ ಕೊಹ್ಲಿ ಔಟಾದರು. ಕೊಹ್ಲಿ 103 ರನ್ ಸಿಡಿಸಿ ನಿರ್ಗಮಿಸಿದರು. ರಿಷಬ್ ಪಂತ್ ಕೇವಲ 1 ರನ್ ಸಿಡಿಸಿ ಪೆವಿಲಿಯನ್ ಸೇರಿದರು.  ಅಜಿಂಕ್ಯ ರಹಾನೆ 29 ರನ್ ಗಳಿಸಿ ಔಟಾದರು.  ಮೊಹಮ್ಮದ್ ಶಮಿ 3 ರನ್ ಸಿಡಿಸಿ ಔಟಾದರು.

5 ವಿಕೆಟ್ ಕಬಳಿಸಿ ಮಿಂಚಿದ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್‌ನಲ್ಲೂ ಅಬ್ಬರಿಸಿದರು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಹಾರ್ದಿಕ್ ಅರ್ಧಶತಕ ಸಿಡಿಸಿದರು. ಪಾಂಡ್ಯ ಹಾಫ್ ಸೆಂಚುರಿ ಬೆನ್ನಲ್ಲೇ ಭಾರತ ಡಿಕ್ಲೇರ್ ಮಾಡಿಕೊಂಡಿತು. 7 ವಿಕೆಟ್ ನಷ್ಟಕ್ಕೆ 352ರನ್‌ಗೆ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ 521 ರನ್ ಟಾರ್ಗೆಟ್ ನೀಡಿತು.