ನವದೆಹಲಿ: ಭಾರತದಲ್ಲಿ ಒಲಿಂಪಿಕ್ಸ್‌ ನಡೆಯುವುದನ್ನು ನೋಡುವ ದಿನ ಯಾವಾಗ ಬರಲಿದೆ ಎಂದು ಕೇಳುತ್ತಿದ್ದವರಿಗೊಂದು ಸಿಹಿ ಸುದ್ದಿ. ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತೀಯ ಒಲಿಂಪಿಕ್‌ ಸಮಿತಿ(ಐಒಎ) ಮಹಾ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಲು ಅಧಿಕೃತವಾಗಿ ಆಸಕ್ತಿ ವ್ಯಕ್ತಪಡಿಸಿದೆ. 2032ರ ಗೇಮ್ಸ್‌ನ ಆತಿಥ್ಯ ಹಕ್ಕು ಪಡೆಯಲು ಐಒಎ ಬಿಡ್‌ ಸಲ್ಲಿಸಲು ನಿರ್ಧರಿಸಲಿದ್ದು, ಈ ವಿಚಾರವಾಗಿ ಕೇಂದ್ರ ಸರ್ಕಾರದ ನೆರವು ಕೋರಲು ಮುಂದಾಗಿದೆ.

ಐಒಎ ಅಧ್ಯಕ್ಷ ನರೇಂದ್ರ ಬಾತ್ರಾ, ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ(ಐಒಸಿ) ಮುಖ್ಯಸ್ಥ ಥಾಮಸ್‌ ಬಾಚ್‌ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಒಲಿಂಪಿಕ್ಸ್‌ ಆತಿಥ್ಯದ ಬಗ್ಗೆ ಪ್ರಸ್ತಾಪಿಸಿದ್ದರು. ಭಾರತ ಆಸಕ್ತಿ ತೋರುತ್ತಿರುವುದನ್ನು ಥಾಮಸ್‌ ಸ್ವಾಗತಿಸಿದ್ದರು. ಕೆಲ ದಿನಗಳ ಹಿಂದಷ್ಟೇ ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್‌ ಮೆಹ್ತಾ, ಐಒಸಿಯ ತ್ರಿಸದಸ್ಯ ಸಮಿತಿಯನ್ನು ಟೋಕಿಯೋದಲ್ಲಿ ಭೇಟಿ ಮಾಡಿ ಭಾರತದ ನಿಲುವನ್ನು ಸ್ಪಷ್ಟಪಡಿಸಿದ್ದರು. ‘ಐಒಸಿ ತ್ರಿಸದಸ್ಯ ಸಮಿತಿ ಭಾರತ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಲು ಆಸಕ್ತಿ ತೋರಿರುವುದಕ್ಕೆ ಸಂತಸ ವ್ಯಕ್ತಪಡಿಸಿತು. ಈ ಹಿಂದೆಯೇ ಭಾರತ ಒಲಿಂಪಿಕ್ಸ್‌ ಆಯೋಜಿಸಬೇಕಿತ್ತು ಎಂದು ಸದಸ್ಯರು ಹೇಳಿದರು’ ಎಂದು ಮೆಹ್ತಾ ಹೇಳಿದ್ದಾರೆ.

ರೇಸ್‌ನಲ್ಲಿ ನವದೆಹಲಿ, ಮುಂಬೈ

ಭಾರತದ ಅಗ್ರ ನಗರಗಳಾದ ನವದೆಹಲಿ ಇಲ್ಲವೇ ಮುಂಬೈನಲ್ಲಿ ಕ್ರೀಡಾಕೂಟವನ್ನು ಆಯೋಜಿಸುವುದಾಗಿ ಬಿಡ್‌ ಸಲ್ಲಿಸಲು ಐಒಎ ಸಿದ್ಧತೆ ನಡೆಸಿದೆ. ಆದರೆ ಇನ್ನಿತರ ನಗರಗಳನ್ನು ಪರಿಗಣಿಸುವುದಾಗಿ ತಿಳಿಸಿದೆ. 2032ರ ಒಲಿಂಪಿಕ್ಸ್‌ಗೆ 2022ರಲ್ಲಿ ಬಿಡ್‌ ಪ್ರಕ್ರಿಯೆ ಆರಂಭಗೊಳ್ಳಲಿದ್ದು, 2025ರಲ್ಲಿ ಆತಿಥ್ಯ ಹಕ್ಕು ಪಡೆದ ನಗರ ಯಾವುದು ಎನ್ನುವುದನ್ನು ಐಒಸಿ ಬಹಿರಂಗಗೊಳಿಸಲಿದೆ. ಇಂಡೋನೇಷ್ಯಾ ಈಗಾಗಲೇ ಆಸಕ್ತಿ ವ್ಯಕ್ತಪಡಿಸಿದೆ. ಶಾಂಘೈನಲ್ಲಿ ನಡೆಸಲು ಚೀನಾ, ಬ್ರಿಸ್ಬೇನ್‌ನಲ್ಲಿ ನಡೆಸಲು ಆಸ್ಪ್ರೇಲಿಯಾ ಸಹ ಆಸಕ್ತಿ ತೋರಿವೆ. ಉತ್ತರ ಹಾಗೂ ದಕ್ಷಿಣ ಕೊರಿಯಾ ಜಂಟಿಯಾಗಿ ಬಿಡ್‌ ಸಲ್ಲಿಸಲು ಸಿದ್ಧತೆ ನಡೆಸಿದ್ದರೆ, ಜರ್ಮನಿ ಸಹ ಪೈಪೋಟಿ ನಡೆಸಲಿದೆ.